ಹುಬ್ಬಳ್ಳಿ: ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಎಂದರೆ ಸಿಎಂ ವಿಫಲವಾಗಿದ್ದಾರೆ ಎಂದು ಅರ್ಥ. ಮೂರು ಜನರ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಿಲ್ಲ, ಇದರ ಹೊಣೆ ಸಿಎಂ ಹಾಗೂ ಗೃಹ ಸಚಿವರೇ ಹೊರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಮಂಗಳವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ನಿಮಗೆ ಯಾರಿಗೂ ರಕ್ಷಣೆ ನೀಡುವುದಕ್ಕೆ ಆಗುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲೂ ಆಗಿಲ್ಲ. ಸರ್ಕಾರ ವಿಫಲವಾಗಿದೆ ಎಂಬ ಮಾತನ್ನು ಬಿಜೆಪಿಯವರು ಹಾಗೂ ಸಂಘ ಪರಿವಾರದವರೇ ಹೇಳುತ್ತಿದ್ದಾರೆ. ನಿಮಗೆ ಜನರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ಕೊಡಿ. ಬಿಜೆಪಿ ಅಧಿಕಾರದಲ್ಲಿದ್ದರೆ ಯಾರಿಗೂ ರಕ್ಷಣೆ ನೀಡಲು ಆಗದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ನೇರ ಮಾತು
ಎಸ್‌ಡಿಪಿಐ, ಪಿಎಫ್‌ಐ ಪ್ರಚೋದನೆ ಕುರಿತು ಸಾಕ್ಷಿ ಇದ್ದರೆ ಅವರನ್ನು ಬ್ಯಾನ್ ಮಾಡಲಿ, ಬಿಜೆಪಿಯವರೇ ಆ ಸಂಘಟನೆಗಳನ್ನು ಸಾಕಿದ್ದಾರೆ. ಸಿಎಂ ಕೇವಲ ಒಂದು ವರ್ಗದ ಮುಖ್ಯಮಂತ್ರಿಯಾಗಿದ್ದಾರೆ. ಮೃತಪಟ್ಟ ಒಂದು ವರ್ಗದ ಮನೆಗೆ ಸಿಎಂ ಭೇಟಿ ನೀಡುವುದು ಎಷ್ಟರ ಮಟ್ಟಿಗೆ ಸರಿ? ನಾನು ಸಿಎಂ ಇದ್ದಾಗ ಎಲ್ಲ ವರ್ಗದ ಮನೆಗಳಿಗೂ ಭೇಟಿ ನೀಡಿದ್ದೇನೆ. ಪರಿಹಾರ ನೀಡುವಲ್ಲೂ ಸಿಎಂ ತಾರತಮ್ಯ ಮಾಡುತ್ತಿದ್ದಾರೆ. ಇದನ್ನು ರಾಜಧರ್ಮ ಎನ್ನಲಾಗುತ್ತದೆಯಾ? ರಾಜ್ಯದ ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರು.
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಜಯಘೋಷಗಳು ಕಾರ್ಯಕರ್ತರಿಂದ ಕೇಳಿಬಂದವು. ಶಾಸಕ ಜಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್, ಪ್ರಸಾದ್ ಅಬ್ಬಯ್ಯ ಮತ್ತಿತರರು ಇದ್ದರು.
ಇದನ್ನೂ ಓದಿ | Siddaramotsava | ರಾರಾಜಿಸುತ್ತಿವೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಬ್ಯಾನರ್, ಕಟೌಟ್‌ಗಳು