ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸಲು ಮೀಸಲಾತಿ ಪಟ್ಟಿ ಪ್ರಕಟಕ್ಕೆ ಸುಪ್ರೀಂ ಕೋರ್ಟ್ ನೀಡಿರುವ 7 ದಿನಗಳ ಕಾಲಾವಕಾಶದಲ್ಲಿ 3 ದಿನ ಕಳೆದಿದೆ. ಮೀಸಲಾತಿ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣೆ(Election) ಪ್ರಕ್ರಿಯೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದ್ದರೂ, ಸರ್ಕಾರ ಚುನಾವಣೆಯನ್ನು ಮುಂದೂಡಲು ಪ್ರಯತ್ನ ಪಡುತ್ತಿದೆ ಎಂದು ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ 7 ಸಚಿವರಿದ್ದು, ಮನಸೋ ಇಚ್ಛೆ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ಶಾಸಕರು ಹೇಳಿದಂತೆ ಮೀಸಲಾತಿ ಆಗಬಾರದು, ಮಾರ್ಗಸೂಚಿ ಅನುಗುಣವಾಗಿ ಮೀಸಲಾತಿ ನೀಡಬೇಕು. ಮಹಾರಾಷ್ಟ್ರದಲ್ಲಿ ಇಂತಹ ಪ್ರಕ್ರಿಯೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದ್ದು, ಇಲ್ಲಿ ಕೂಡ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದಂತೆ ಆಗಲಿದೆ ಎಂದರು.
ಇದನ್ನೂ ಓದಿ | ಬೆಂಗಳೂರಿನ ಅಶೋಕ ಪಿಲ್ಲರ್ ಸಿಂಹಗಳೂ ಗರ್ಜಿಸಲಿವೆ?: ಬಿಬಿಎಂಪಿ ನಡೆಗೆ ಪ್ರತಿಪಕ್ಷ ಆಕ್ಷೇಪ
ಕಾಂಗ್ರೆಸ್ 2020ರಿಂದ ಚುನಾವಣೆಗೆ ಸಿದ್ಧವಾಗಿದ್ದು, ಭ್ರಷ್ಟ ಬಿಜೆಪಿ ಸರ್ಕಾರ ಮಾತ್ರ ಸಿದ್ಧವಾಗಿಲ್ಲ. ಅವರ ಅವ್ಯವಹಾರ, ಅಕ್ರಮ ಜನರಿಗೆ ಕಾಣುತ್ತಿದೆ. ಬೆಂಗಳೂರಿನ ಜನರಿಗೆ ಈ ಚುನಾವಣೆ ಅಗತ್ಯವಿದ್ದು, ನೋಡಲ್ ಅಧಿಕಾರಿ ಯಾರ ಕೈಗೂ ಸಿಗುತ್ತಿಲ್ಲ. 7 ಸಚಿವರು ಇದ್ದರೂ ಜನರಿಗೆ ಅನ್ಯಾಯ ಆಗುತ್ತಿದೆ ಎಂದರು.
ಬಿಬಿಎಂಪಿ ಮಾಜಿ ಸದಸ್ಯ ಶಿವರಾಜ್ ಮಾತನಾಡಿ, 7 ದಿನಗಳ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ, ಪ್ರತಿ ಬಾರಿ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ ಎಂದು ಹೇಳಿದರು.
ಬಿಬಿಎಂಪಿಗೆ ಜನಪ್ರತಿನಿಧಿಗಳ ಅಗತ್ಯವಿದೆ. ಕಾಂಗ್ರೆಸ್‌ನ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಸುಪ್ರೀಂ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಉತ್ತೇಜಿಸಿ ಅವುಗಳನ್ನು ಬಲಪಡಿಸುವ ಯೋಚನೆ ಸರ್ಕಾರಕ್ಕಿಲ್ಲ. ಇವರಿಗೆ ಸ್ಥಳೀಯ ಸಂಸ್ಥೆಗಳ ಬಲಪಡಿಸುವ ಇಚ್ಛೆ ಇದ್ದಿದ್ದರೆ ಈ ಚುನಾವಣೆ ಮಾಡಲು 2 ವರ್ಷ ಬೇಕಾಗಿರಲಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಬಿಬಿಎಂಪಿಯಲ್ಲಿ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂದು ಆರೋಪಿಸಿದರು.
ಬಿಜೆಪಿ ಅನುದಾನದಲ್ಲಿ ಮುಂದೆ ಇದ್ದರೂ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಚುನಾವಣೆ ಮಾಡಲು ನಾವು ಸಿದ್ಧ ಎಂದು ಸಚಿವರು ಹೇಳಿದ್ದರು. ಆದರೆ, 8 ವಾರಗಳ ಕಾಲಾವಕಾಶ ಕೋರಿ, ಚುನಾವಣೆ ನಡೆಸಲು ವಿಫಲವಾಗಿದ್ದು ಯಾರು? ಎಂದು ಪ್ರಶ್ನಿಸಿದ ಅವರು, ಸರ್ಕಾರ ಮತ್ತೆ ಚುನಾವಣೆ ಮುಂದೂಡಲು ತೀರ್ಮಾನಿಸಿದರೆ ನ್ಯಾಯಾಲಯ ಛೀಮಾರಿ ಹಾಕಲಿದೆ. ಸರ್ಕಾರ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | BBMP | ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ; ಏನಿದು ಹೊಸ ರೂಲ್ಸ್?