Site icon Vistara News

ವನ್ಯಜೀವಿ ಧಾಮವೇ ರಾಣಾ ಜಾರ್ಜ್​ಗೆ ರಹದಾರಿ; ನೋಟಿಸ್‌ಗೆ ಡೋಂಟ್‌ ಕೇರ್‌!

rana george

ಮೈಸೂರು: ರಕ್ಷಿತಾರಣ್ಯ ಎಂದು ತಿಳಿದಿದ್ದರೂ ವಾಹನ ಚಲಾಯಿಸಿಕೊಂಡು ಹೋಗುವ ಮೂಲಕ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಪುತ್ರ ರಾಣಾ ಜಾರ್ಜ್ ವಿವಾದವೊಂದಕ್ಕೆ ಕಾರಣರಾಗಿದ್ದು, ಈ ಬಗ್ಗೆ ನೋಟಿಸ್‌ ಕೊಟ್ಟರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ‌

ವನ್ಯಜೀವಿ ಧಾಮದಲ್ಲಿ ಅತಿಕ್ರಮ ಸಂಚಾರದ ಆರೋಪವನ್ನು ಈಗ ರಾಣಾ ಜಾರ್ಜ್‌ ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕಾಡಿನ ದಾರಿಯಲ್ಲಿಯೇ ಸಂಚಾರ ಮಾಡುತ್ತಿದ್ದು, ಅನುಮತಿಯನ್ನೂ ಪಡೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಎರಡು ಬಾರಿ ನೋಟಿಸ್‌ ಕೊಟ್ಟರೂ ಕಿಮ್ಮತ್ತಿಲ್ಲ
ಈ ಭಾಗದಲ್ಲಿ ರಾಣಾ ಜಾರ್ಜ್‌ ಜಮೀನಿದ್ದು, ಅಲ್ಲಿಗೆ ತೆರಳಲು ಅವರು ಸಂರಕ್ಷಿತ ಅರಣ್ಯ ಮಾರ್ಗವನ್ನೇ ಬಳಕೆ ಮಾಡುತ್ತಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯಿಂದ ಎರಡೆರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ನೋಟಿಸ್‌ಗೆ ಸೊಪ್ಪು ಹಾಕದ ರಾಣಾ, ಈ ದಾರಿಯನ್ನು ಸಂಚಾರ ಮಾಡುವುದನ್ನು ಮಾತ್ರ ಬಿಡುತ್ತಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಇದನ್ನೂ ಓದಿ | KPCC president Election | ನನ್ನ ಸ್ಪರ್ಧೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವೆ; ಡಿ.ಕೆ.ಶಿವಕುಮಾರ್‌

ನುಗು ಜಲಾಶಯದ ಹಿನ್ನೀರಿನ ದಂಡೆಯಲ್ಲಿರುವ ಸರಗೂರು ತಾಲೂಕಿನ ಲಕ್ಕಸೋಗೆ ಗ್ರಾಮದಲ್ಲಿ ಸರ್ವೇ ನಂ. 33ರ ಜಮೀನು ರಾಣಾ ಜಾರ್ಜ್‌ಗೆ ಸೇರಿದ್ದಾಗಿದೆ. ಆದರೆ, ಇದಕ್ಕೆ ಹೋಗಲು ಬಳಸುತ್ತಿರುವ ಮಾರ್ಗವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯವಾಗಿದೆ. 1992ರಲ್ಲಿ ಲಕ್ಷ್ಮಣಪುರ ರಕ್ಷಿತಾರಣ್ಯ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯಕ್ಕೆ ಜನ-ಜಾನುವಾರು ಪ್ರವೇಶವನ್ನು ನಿಷೇಧ ಮಾಡಲಾಗಿದೆ.

ದಶಕದಿಂದ ಇದೇ ಮಾರ್ಗವಾಗಿ ಓಡಾಟ
ಈ ಭಾಗದಲ್ಲಿ ಜಮೀನು ಹೊಂದಿರುವ ರಾಣಾ ಜಾರ್ಜ್‌, ದಶಕಗಳಿಂದ ತೋಟದ ಕೆಲಸಗಾರರನ್ನೊಳಗೊಂಡ ವಾಹನಗಳ ಸಹಿತ ತಮ್ಮ ವಾಹನಗಳನ್ನು ಇದೇ ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ. ವಲಯ ಅರಣ್ಯ ಅಧಿಕಾರಿಗಳು ಆಗಸ್ಟ್ 8 ಮತ್ತು 20ರಂದು ರಾಣಾಗೆ ನೋಟಿಸ್ ನೀಡಿದ್ದು,
ಅರಣ್ಯದಲ್ಲಿ ಸಂಚಾರ ಮಾಡಲು ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.

ರಾಣ ಪ್ರತಿಕ್ರಿಯೆ ಏನು?
1972ರ ವನ್ಯಜೀವಿ ಕಾಯ್ದೆಯ ಸೆಕ್ಷನ್ 28ರ ಪ್ರಕಾರ ಅರಣ್ಯ ವ್ಯಾಪ್ತಿಯಲ್ಲಿ ಹಸ್ತಾಂತರಿಸಲಾಗದ ಆಸ್ತಿ ಇದ್ದರೆ ಅರಣ್ಯದ ಮೂಲಕ ಖಾಸಗಿ ಭೂಮಿಗೆ ತೆರಳಬಹುದಾಗಿದೆ ಎಂದು ನೋಟಿಸ್‌ಗೆ ರಾಣಾ ಪ್ರತ್ಯುತ್ತರ ನೀಡಿದ್ದಾರೆ. ಈ ಸಂಬಂಧ ಮತ್ತೊಂದು ನೋಟಿಸ್‌ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, “ಹಾಗಿದ್ದರೆ ದಾಖಲೆಯನ್ನು ನೀಡಿ” ಎಂದು ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ ಎಂದು ಹೇಳಲಾಗಿದೆ. ಆದರೆ, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಜನ ಸಾಮಾನ್ಯರಾಗಿದ್ದರೆ ಅರಣ್ಯ ಅತಿಕ್ರಮದ ಆರೋಪದ ಮೇಲೆ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಪ್ರಭಾವಿ ಎನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | ಕಾಂಗ್ರೆಸ್‌ನಿಂದ ಮಠ ರಾಜಕೀಯ ಆರಂಭ: ನಾಲ್ವರು ಸ್ವಾಮೀಜಿಗಳನ್ನು ಭೇಟಿಯಾದ ರಾಜ್ಯ ಉಸ್ತುವಾರಿ ಸುರ್ಜೇವಾಲಾ

Exit mobile version