ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಗೆ ಕೋವಿಡ್-19 ಸೋಂಕು ತಗುಲಿದೆ. ಸೋಮವಾರ ರಾತ್ರಿ ಅವರು ಟ್ವೀಟ್ ಮಾಡಿ ಈ ವಿಷಯವನ್ನು ತಿಳಿಸಿದ್ದಾರೆ.
ʼʼಸಣ್ಣ ಪ್ರಮಾಣದ ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ, ವೈದ್ಯರು ಹೋಮ್ ಐಸೋಲೇಷನ್ʼನಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆʼʼ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ವೈದ್ಯರ ಸೂಚನೆಯಂತೆ, ನಾನು 10 ದಿನಗಳ ಕಾಲ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತೇನೆ. ದಯಮಾಡಿ ಯಾರೂ ನನ್ನ ಭೇಟಿಗೆ ಬರಬಾರದೆಂದು ವಿನಂತಿಸುತ್ತೇನೆ. ಯಾರೂ ಅನ್ಯತಾ ಭಾವಿಸಬಾರದು. 3-4 ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರೆಲ್ಲರೂ ತಪ್ಪದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಕೋರುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಕುಮಾರಸ್ವಾಮಿಯವರಿಗೆ ಶೀಘ್ರವಾಗಿ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭಾನುವಾರ ಭೇಟಿಯಾಗಿ ಬೆಂಬಲ ಕೋರಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಇದ್ದರು. ಇವರೊಂದಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು. ಇವರೆಲ್ಲರೂ ಈಗ ಪರೀಕ್ಷೆಗೊಳಪಡಬೇಕಾಗಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸೋಮವಾರ 673 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ | ಕೋವಿಡ್ ಎದುರಿಸಿದವರಲ್ಲಿ ಮೆದುಳಿಗೆ ಹಾನಿ ಅನ್ನುತ್ತಿದೆ ಅಧ್ಯಯನ