Site icon Vistara News

ಸಂವಿಧಾನ ಮಾಡಿದ್ದು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ರಾಹುಲ್‌ ಗಾಂಧಿ ಎಂದ ಕಾಂಗ್ರೆಸ್‌ ನಾಯಕ ಅನಿಲ್‌ ಲಾಡ್‌!

anil lad congress leader karnataka

ವಿಜಯನಗರ: ಸಂವಿಧಾನ ರಚನೆ ಮಾಡಿದ್ದು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ರಾಹುಲ್‌ ಗಾಂಧಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌. ಇದು ದಲಿತ ಸಂಘಟನೆಗಳನ್ನು ಕೆರಳಿಸಿದ್ದು, ಲಾಡ್‌ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅನಿಲ್‌ ಲಾಡ್‌ ಅವರು ಈ ವಿಚಾರಗಳನ್ನು ಮಾತನಾಡಿರುವ ಒಂದು ವಿಡಿಯೊ ವೈರಲ್‌ ಆಗಿದೆ. ಅದನ್ನು ಗಮನಿಸಿಕೊಂಡೇ ಈಗ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿರುವುದು.

ಏನು ಹೇಳಿದ್ದಾರೆ ಲಾಡ್‌?
ನಾನು ಯಾರ ವಿರೋಧವೂ ಇಲ್ಲ. ಎಸ್ಸಿ ಲೆಫ್ಟ್‌ಗೂ ವಿರೋಧವಿಲ್ಲ, ರೈಟ್‌ಗೂ ವಿರೋಧವಿಲ್ಲ. ನೀವೆಲ್ಲ ಎಸ್ಸಿ ಜನಾಂಗದವರು ಇದ್ದೀರಿ.. ನೀವೆಲ್ಲ ಎಸ್ಸಿ ಜನಾಂಗದವರು ಕಾಂಗ್ರೆಸ್‌ ಪಕ್ಷದವರು ಇವತ್ತು ನಿಮಗೆ ರಿಸರ್ವೇಷನ್‌ ಆಗಿರಬಹುದು, ಬ್ಯಾಂಕ್‌ ಲೋನ್‌ ಆಗಿರಬಹುದು. ಎಲ್ಲ ಕೊಟ್ಟಿರುವುದು ನಾನು ಅಥವಾ ಸಂತೋಷ್‌ ಲಾಡ್‌ ಅಲ್ಲ. ಇದೆಲ್ಲವನ್ನೂ ಕೊಟ್ಟಿರುವುದು ಸಂವಿಧಾನ. ಈ ಸಂವಿಧಾನ ಮಾಡಿದವರು ಯಾರು? ಇಂದಿರಾ ಗಾಂಧಿ, ರಾಜೀವ್‌ ಗಾಂದಿ, ರಾಹುಲ್‌ ಗಾಂಧಿ- ಹೀಗೆ ಅನಿಲ್‌ ಎಚ್‌. ಲಾಡ್‌ ಹೇಳುತ್ತಾ ಹೋಗುತ್ತಾರೆ.

ಈ ವಿಡಿಯೊ ಯಾವಾಗದ್ದು, ಯಾರ ಜತೆಗೆ ಮಾತನಾಡುವಾಗ ಈ ವಿಡಿಯೊ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಮಾತಿನ ಭರದಲ್ಲಿ ಏನೇನೋ ಮಾತನಾಡಿರುವುದು ಮಾತ್ರ ಸ್ಪಷ್ಟವಾಗಿದೆ.

ಈ ಮಾತನ್ನು ಕೇಳಿಸಿಕೊಂಡಿರುವ ದಲಿತ ಸಂಘಟನೆಗಳು ರೊಚ್ಚಿಗೆದ್ದಿವೆ. ʻʻಸಂವಿಧಾನ ರಚನೆ ಮಾಡಿದ್ದು ಅಂಬೇಡ್ಕರ್ ಅಂತ ಇಡೀ ಜಗತ್ತಿಗೆ ಗೊತ್ತು. ಇವರೊಬ್ಬ ಮಾಜಿ ಶಾಸಕರಾಗಿ ಸಂವಿಧಾನವನ್ನು ಇಂದಿರಾ ಗಾಂಧಿ, ರಾಜೀವ್ ಗಾಂಧಿ ರಚನೆ ಮಾಡಿದ್ದಾರೆ ಅಂತಿದ್ದಾರೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಕೂಡಲೇ ಅನಿಲ್ ಲಾಡ್ ಕ್ಷಮೆಯಾಚಿಸಬೇಕುʼʼ ಎಂದು ವಿಜಯನಗರ ಜಿಲ್ಲೆಯ ದಲಿತ ಸಂಘಟಕರು ಆಗ್ರಹಿಸಿದ್ದಾರೆ.

Exit mobile version