ಬೆಂಗಳೂರು/ಕಲಬುರಗಿ: ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತಿದ್ದ ನೇಮಕಾತಿ ಪರೀಕ್ಷೆಯಲ್ಲಿ ಕಂಡುಬಂದಿರುವ ಅಕ್ರಮದ (Exam Cheating) ಪ್ರಮುಖ ಆರೋಪಿ, ಕಿಂಗ್ಪಿನ್ ಆರ್.ಡಿ. ಪಾಟೀಲ್ (RD Patil) ಸದ್ಯ ಪರಾರಿಯಾಗಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ಆರ್.ಡಿ. ಪಾಟೀಲ್ ತಪ್ಪಿಸಿಕೊಳ್ಳಲು ಸರ್ಕಾರದ ಸಚಿವರೇ ಕಾರಣ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa), ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಸೇರಿದಂತೆ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರೂ ತಿರುಗೇಟು ನೀಡಿದ್ದು, ವಿಜಯೇಂದ್ರ ಹೋಂ ವರ್ಕ್ ಮಾಡಿಕೊಂಡು ಮಾತನಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಕಿವಿ ಮಾತು ಹೇಳಿದರು.
ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಅ. 27ರಂದು ಯಾದಗಿರಿಯ ವಿವಿಧ ಠಾಣೆಗಳಲ್ಲಿ 5 ಪ್ರತ್ಯೇಕ ಕಡೆ ಪ್ರಕರಣಗಳು ದಾಖಲಾಗಿದ್ದವು. ಯಾದಗಿರಿಯ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ನೀಡಿದ್ದ ದೂರಿನ ಮೇರೆಗೆ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ 9 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಆಗ ಈ ಪರೀಕ್ಷಾ ಅಕ್ರಮಕ್ಕೆ ಪಿಎಸ್ಐ ನೇಮಕಾತಿ ಹಗರಣದ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಹೆಸರು ಥಳುಕು ಹಾಕಿಕೊಂಡಿತ್ತು. ಹೀಗಾಗಿ ಆತನ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.
ಆರ್.ಡಿ. ಪಾಟೀಲ್ ಕಳೆದ ಭಾನುವಾರದಿಂದ ಕಲಬುರಗಿಯಲ್ಲಿಯೇ ತಂಗಿದ್ದಾನೆ ಎಂಬ ಮಾಹಿತಿ ಗೊತ್ತಾಗಿದೆ. ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್ನಲ್ಲಿ ತಂಗಿದ್ದು ತಿಳಿಯುತ್ತಿದ್ದಂತೆ ಪೊಲೀಸರು ಆತನನ್ನು ಬಂಧನಕ್ಕಾಗಿ ಹೋಗಿದ್ದಾರೆ. ಆದರೆ, ಪೊಲೀಸರು ಬರುತ್ತಿರುವ ವಿಷಯ ತಿಳಿದ ಆರ್.ಡಿ. ಪಾಟೀಲ್ ಪೊಲೀಸರಿಗೆ ತಿಳಿಯುತ್ತಿದ್ದಂತೆ ಆರ್.ಡಿ ಪಾಟೀಲ್ ಪರಾರಿ ಆಗಿದ್ದಾನೆ. ಅಪಾರ್ಟ್ಮೆಂಟ್ನ ಹಿಂಬದಿಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ಇದು ಈಗ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಬರುವ ವಿಷಯವನ್ನು ಆರ್.ಡಿ. ಪಾಟೀಲ್ಗೆ ಹೇಳಿದ್ದು ಯಾರು? ಇದರಲ್ಲಿ ಸರ್ಕಾರದ ಹಾಗೂ ಮಂತ್ರಿಗಳ ಕೈವಾಡ ಇದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಧನಕ್ಕೆ ಯಡಿಯೂರಪ್ಪ ಆಗ್ರಹ
ಆರ್.ಡಿ. ಪಾಟೀಲ್ ತಪ್ಪಿಸಿಕೊಂಡಿರುವ ವಿಚಾರ ನನಗೆ ಗೊತ್ತಾಗಿದೆ. ವಿಚಾರ ಏನು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆದರೆ, ಆತನ ಬಂಧನಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಆಗ್ರಹಿಸಿದ್ದಾರೆ.
ಮಂತ್ರಿಗಳು, ಶಾಸಕರ ಸಹಕಾರ: ವಿಜಯೇಂದ್ರ
ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹಗಲಿನಲ್ಲಿಯೇ ಆರ್.ಡಿ. ಪಾಟೀಲ್ ಎಸ್ಕೇಪ್ ಆಗಿದ್ದಾನೆ. ಬಿಜೆಪಿ ಸರ್ಕಾರ ಇದ್ದಾಗ ನಾನಾ ರೀತಿಯ ಆರೋಪಗಳನ್ನು ಮಾಡಲಾಗಿತ್ತು, ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆರ್.ಡಿ. ಪಾಟೀಲ್ ಮತ್ತವನ ತಂಡದವರು ಕಾಂಗ್ರೆಸ್ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಆರ್.ಡಿ. ಪಾಟೀಲ್ ತಪ್ಪಿಸಿಕೊಂಡು ಹೋಗುವಲ್ಲಿ ಮಂತ್ರಿಗಳು ಮತ್ತು ಶಾಸಕರು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಿಂದ ಉಗ್ರ ಹೋರಾಟ
ಒಟ್ಟಾರೆ ಇಡೀ ಕಾಂಗ್ರೆಸ್ ಪಕ್ಷವೇ ಇಂತಹ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತು ಶಕ್ತಿ ತುಂಬುತ್ತಿದ್ದಾರೆ. ಐಪಿಎಸ್ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಅವನನ್ನು ಹಿಡಿಯಲು ಸಾಧ್ಯವಾಗಿಲ್ಲ. ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿರುವಂಥವರು ಆರ್.ಡಿ. ಪಾಟೀಲ್ಗೆ ಬೆಂಬಲ ನೀಡುತ್ತಿದ್ದಾರೆ. ಆಡಳಿತ ಪಕ್ಷದ ಘಟಾನುಘಟಿ ನಾಯಕರ ಸಂಪರ್ಕ ಆತನಿಗೆ ಇದೆ. ಅವರ ಬೆಂಬಲ ಇದ್ದಿದ್ದರಿಂದಲೇ ಆತ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಪೊಲೀಸ್ ಅಧಿಕಾರಿಗಳಿಗೂ ಇಲ್ಲಿ ಕಿಮ್ಮತ್ತಿಲ್ಲ. ಹಗರಣ ಮಾಡುವವರಿಗೆ ಬೆಂಬಲ ಇರುವಂಥದ್ದು ಸತ್ಯ. ಈ ಬಗ್ಗೆ ಸಿಬಿಐ ತನಿಖೆ ಆದಾಗ ಮಾತ್ರ ಸತ್ಯ ಹೊರಬರಲು ಸಾಧ್ಯ. ಈ ಬಗ್ಗೆ ಮುಂದಿನ ದಿನಗಳಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಆರ್ ಡಿ ಪಾಟೀಲ್ ಕಾಂಗ್ರೆಸ್ ಪಕ್ಷದವರು
ಆರ್.ಡಿ. ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಅವರ ಅಣ್ಣ ಕಾಂಗ್ರೆಸ್ನವರು. ಪಿಎಸ್ಐ ಪರೀಕ್ಷಾ ಅಕ್ರಮ ದೊಡ್ಡ ನೆಟ್ವರ್ಕ್ ಆಗಿದ್ದು, ಈ ಗ್ಯಾಂಗ್ಗೆ ರಾಜಕೀಯ ಬೆಂಬಲ, ಕಾಂಗ್ರೆಸ್ ಬೆಂಬಲ ಪಡೆದು ವ್ಯವಸ್ಥಿತ ಜಾಲ ನಡೆಸುತ್ತಿದ್ದಾರೆ. ಇನ್ನೊಂದೆರಡು ಪರೀಕ್ಷಾ ಜಾಲಗಳು ಇವೆ. ಅದನ್ನು ಮುಂದೆ ಬಹಿರಂಗಪಡಿಸುತ್ತೇನೆ. ಆಪಾದಿತ ಆರ್ ಡಿ ಪಾಟೀಲ್ ಜೈಲಿಂದ ಹೊರಗೆ ಬಂದು ಮತ್ತೆ ಅಕ್ರಮ ಮಾಡಿದ್ದಾನೆ. ಆತ ಈ ಸರ್ಕಾರಕ್ಕೆ ಮನಿ ಸ್ಪಿನ್ನರ್ ಎಂದು ಶಾಸಕ ಅಶ್ವತ್ಥ ನಾರಾಯಣ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಈದು ಖೈದಿಗಳನ್ನೇ ಕಳಿಸಿ ಸಂಪಾದನೆ ಮಾಡುವ ರೀತಿ. ಆರ್.ಡಿ. ಪಾಟೀಲ್ ಅನ್ನು ಬಳಸಿಕೊಂಡು ವಸೂಲಿ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ನಾಚಿಕೆ ಮಾನ – ಮರ್ಯಾದೆ ಇಲ್ಲ. ಪಿಎಸ್ಐ ಹಗರಣದಲ್ಲಿ ಆರ್.ಡಿ. ಪಾಟೀಲ್, ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ. ಪ್ರಮೋಶನ್ ಕೊಡಿಸುವ ಕೆಲಸ ಮಾಡುತ್ತಿದ್ದ. ಈ ಸರ್ಕಾರ ಅಸ್ತಿತ್ವದಲ್ಲಿ ಇದೆಯಾ? ಆರ್.ಡಿ. ಪಾಟೀಲ್ ಬಂಧನ ಆಗಿಲ್ಲ. ಇವನ ಜೊತೆ ಸರ್ಕಾರ ಕೈಜೋಡಿಸಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಬಿ.ವೈ. ವಿಜಯೇಂದ್ರ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಪಿಎಸ್ಐ ಹಗರಣದಲ್ಲಿ ಯಾರು ಪ್ರಮುಖ ಆರೋಪಿ ಇದ್ದರು? ಅವರ ಮನೆಗೆ ಹೋಗಿದ್ದು ಯಾರು? ಹೂವು, ದ್ರಾಕ್ಷಿ ಹಣ್ಣು ಕೊಟ್ಟು ಬಂದಿದ್ದು ಯಾರು? ಮಾಜಿ ಸಚಿವರೊಬ್ಬರು ಹೋಗಿ ಬರ್ತಾರೆ. ಪ್ರಕರಣದಲ್ಲಿ ಬಂಧನವಾಗಿದ್ದವರನ್ನು ಬಿಡುಗಡೆ ಮಾಡೋಕೆ ಹೇಳ್ತಾರೆ.
ಅವರ ಪಕ್ಷದವರೇ ಹೇಳ್ತಾರೆ. ಪೊಲೀಸ್ ಬಂಧನದಿಂದ ಬಿಡುಗಡೆ ಮಾಡಿ ಅಂತ ಹೇಳುತ್ತಾರೆ. ಸ್ವಲ್ಪ ವಿಜಯೇಂದ್ರ ಅವರು ಹೋಂ ವರ್ಕ್ ಸರಿಯಾಗಿ ಮಾಡಿಲ್ಲ ಅನಿಸುತ್ತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
2 ದಿನದಲ್ಲಿ ಆರ್.ಡಿ. ಪಾಟೀಲ್ ಬಂಧನ
ಆರ್.ಡಿ ಪಾಟೀಲ್ ಇರಲಿ, ಯಾರೇ ಇರಲಿ ಸರ್ಕಾರ ದಯೆ ತೋರಿಸಲ್ಲ. ಕಳೆದ ನಾಲ್ಕು ದಿನದಲ್ಲಿ 20 ಜನರನ್ನು ಬಂಧನ ಮಾಡಿದ್ದೇವೆ. ಇನ್ನೆರಡು ದಿನದಲ್ಲಿ ಆರ್.ಡಿ ಪಾಟೀಲ್ ಬಂಧನವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅರೆಸ್ಟ್ ಮಾಡಿ ಒಳಗೆ ಹಾಕುತ್ತೇವೆ: ಸಚಿವ ತಂಗಡಗಿ
ಆರ್.ಡಿ. ಪಾಟೀಲ್ ಕಾಂಪೌಂಡ್ ಹಾರಿದರೂ ಅಷ್ಟೆ, ಮಾಳಿಗೆ ಹಾರಿದರೂ ಅಷ್ಟೆ, ಕಂಬಿ ಹಾರಿದರೂ ಅಷ್ಟೇ. ಅರೆಸ್ಟ್ ಮಾಡಿ ಒಳಗೆ ಹಾಕುತ್ತೇವೆ. ನಮ್ಮ ಪೊಲೀಸರು ಸ್ಟ್ರಾಂಗ್ ಆಗಿದ್ದಾರೆ. ಹಿಂದೆ ನಾವು ಅರೆಸ್ಟ್ ಮಾಡಿ ಒಳಗೆ ಹಾಕಿದ್ದೆವಲ್ಲ. ಯಾವ ಜಿಲ್ಲೆಯಲ್ಲಿ ಓಡಾಡಿದರೂ ಬಿಡೋದಿಲ್ಲ. ಹೆಡೆಮುರಿ ಕಟ್ಟುತ್ತೇವೆ ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಮರು ಪರೀಕ್ಷೆ ನಡೆಸುವ ಬಗ್ಗೆ ಕೆಇಎ ತೀರ್ಮಾನ ಮಾಡುತ್ತೆ: ಪರಮೇಶ್ವರ್
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದಾನೆಂಬ ಮಾಹಿತಿ ಇದೆ. ಪೊಲೀಸರ ನಿರ್ಲಕ್ಷದಿಂದ ತಪ್ಪಿಸಿಕೊಂಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಆರ್.ಡಿ.ಪಾಟೀಲ್ ಮೇಲೆ ಸಾಕಷ್ಟು ಕೇಸ್ಗಳಿವೆ. ತಪ್ಪಿಸಿಕೊಂಡು ಎಲ್ಲಿಗೆ ಎಷ್ಟು ದಿವಸ ಹೋಗುತ್ತಾರೆ. ಪ್ರಕರಣವನ್ನು ಅಗತ್ಯಬಿದ್ದರೆ ಸಿಐಡಿ ತನಿಖೆಗೆ ಕೊಡುತ್ತೇವೆ. ಮರು ಪರೀಕ್ಷೆ ನಡೆಸುವ ಬಗ್ಗೆ ಕೆಇಎ ತೀರ್ಮಾನ ಮಾಡುತ್ತದೆ. ನಮಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ತನಿಖೆ ಮಾಡುತ್ತಿದ್ದೇವೆ. ಕಿಂಗ್ಪಿನ್ಗಳು ಭಯ ಇಲ್ಲದಿರುವುದಕ್ಕೆ ಇಷ್ಟು ದಿವಸ ಹೀಗೆ ಮಾಡಿದ್ದಾರೆ. ಇನ್ನು ಮುಂದೆ ಹಾಗೆ ಆಗದಂತೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: PM Narendra Modi : ಮೋದಿ ಪರ ನಿಂತ ಅಹಿಂಸಾ ಚೇತನ್! ಸಂತೋಷ್ ಲಾಡ್ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ
ವಿವರಣೆ ನೀಡಿರುವ ಪೊಲೀಸ್ ಆಯುಕ್ತ
ಆರ್.ಡಿ.ಪಾಟೀಲ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿ ಪೊಲೀಸ್ ಆಯುಕ್ತರನ್ನು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬೆಳಗ್ಗೆ ಕರೆಸಿಕೊಂಡಿದ್ದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾದ ಪೊಲೀಸ್ ಆಯುಕ್ತ ಆರ್.ಚೇತನ್, ಪ್ರಕರಣದ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ.