ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ (ಶನಿವಾರ) ಐದು ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ. ಶನಿವಾರ ಸಂಜೆ ನಂತರ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಹೇಳಲಾಗಿದೆ.
ನೈಋತ್ಯ ಮುಂಗಾರು ಚುರುಕು ಪಡೆದುಕೊಂಡಿದ್ದು, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ಎರಡು ದಿನಗಳು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ | Weather Report | ಮುಂದಿನ ಎರಡು ದಿನ ಭಾರಿ ಮಳೆ: ಮೀನುಗಾರರಿಗೆ ಎಚ್ಚರಿಕೆ
ಉತ್ತರ ಕರ್ನಾಟಕದ ಭಾಗದ ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಹಾಗೂ ಹಾವೇರಿ, ಧಾರವಾಡ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಭಾಗದಲ್ಲಿ ಗಾಳಿ ವೇಗವು 30-40ಕಿಮೀ ತಲುಪುವ ಸಾಧ್ಯತೆ ಇದೆ.
ಯಾವತ್ತು ಎಷ್ಟು ಮಿ.ಮೀ ಮಳೆ ಸಾಧ್ಯತೆ?
ಜೂನ್ 25 ರಂದು 115.6 – 204.4 ಮಿ.ಮೀ.
ಜೂನ್ 26 ರಂದು 115.6 – 204.4 ಮಿ.ಮೀ.
ಜೂನ್ 27 ರಂದು 115.6 -204.4 ಮಿ.ಮೀ.
ಜೂನ್ 28 ರಂದು 64.5 – 115.5 ಮಿ.ಮೀ.
ಜೂನ್ 29 ರಂದು 64.5 – 115.5 ಮಿ.ಮೀ.
ಶನಿವಾರ ಮಧ್ಯಾಹ್ನದ ವೇಳೆಗೆ ರಾಜಧಾನಿಯಲ್ಲಿ ಮಳೆ ಅಬ್ಬರಿಸಿದ್ದು ಯಶಂತಪುರ, ಮೆಜೆಸ್ಟಿಕ್, ರೇಸ್ ಕೋರ್ಸ್ ರಸ್ತೆ, ಕಬ್ಬನ್ ಪಾರ್ಕ್ ಹಾಗೂ ಎಂ.ಜಿ.ರೋಡ್, ಬಸವನಗುಡಿ ಭಾಗಗಳಲ್ಲಿ ಮಳೆಯಾಗಿದೆ. ಆಗೊಮ್ಮೆ ಈಗೊಮ್ಮೆ ಸೂರ್ಯನ ದರ್ಶನವಾಗುತ್ತಿದ್ದು, ಹಲವು ಕಡೆ ಮೋಡ ಕವಿದ ವಾತವರಣವಿದೆ.
ಇದನ್ನೂ ಓದಿ | ಭಾರಿ ಮಳೆ ಮುನ್ಸೂಚನೆ: ಗ್ರಾಮ ತೊರೆಯುವಂತೆ NDRF ತಂಡದಿಂದ ಹೈ ಅಲರ್ಟ್