ನವದೆಹಲಿ/ಬೆಂಗಳೂರು: ಜೂನ್ 15ರಂದು ಸೌರಾಷ್ಟ್ರ, ಕಚ್ ಮೂಲಕ ಬಿಪರ್‌ಜಾಯ್ ಚಂಡಮಾರುತವನ್ನು (Cyclone Biparjoy) ಭಾರತವನ್ನು ತೀವ್ರ ಪ್ರಮಾಣದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೆಯೇ, ಮತ್ತೊಂದೆಡೆ ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರ ಅಲೆಗಳು ಸೃಷ್ಟಿಯಾಗುತ್ತಿರುವ ಕಾರಣ ಕರ್ನಾಟಕ ಕರಾವಳಿಯಲ್ಲಿ ಕಡಲ ಕೊರೆತ ಆರಂಭವಾಗಿದೆ. ಇದರಿಂದ ಕರಾವಳಿ ತೀರದಲ್ಲಿ ವಾಸಿಸುತ್ತಿರುವ ಜನ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.
ಪಾಕಿಸ್ತಾನದ ಕರಾವಳಿ ಮೂಲಕ ಕರಾಚಿ ಹಾಗೂ ಗುಜರಾತ್ ಮೂಲಕ ಬಿಪರ್‌ಜಾಯ್ ಚಂಡಮಾರುತವು ಭಾರತವನ್ನು ತೀವ್ರ ಪ್ರಮಾಣದಲ್ಲಿ ಪ್ರವೇಶಿಸಲಿದೆ. ಜೂನ್ 15ರಂದು ಚಂಡಮಾರುತ ಪ್ರವೇಶಿಸಲಿದ್ದು, ಗಂಟೆಗೆ ಸುಮಾರು 125-135 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಅಪ್ಪಳಿಸಲಿದೆ. ಇದು ತೀವ್ರ ಪ್ರಮಾಣದಲ್ಲಿ ಅಪ್ಪಳಿಸುವ ಕಾರಣ ಕರಾವಳಿ ತೀರದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ನಿರ್ದೇಶನ ನೀಡಿದೆ.
“ಬಿಪರ್‌ಜಾಯ್ ಚಂಡಮಾರುತವು ತೀವ್ರ ಸ್ವರೂಪ ಪಡೆಯುತ್ತಿದೆ. ಇದು ಗಂಟೆಗೆ 75 ಕಿಲೋಮೀಟರ್ ವೇಗದಿಂದ 195 ಕಿಲೋಮೀಟರ್ ತಲುಪಿದೆ. ತೌಕ್ತೆ ಚಂಡಮಾರುತದ ಬಳಿಕ ಇದು ತೀವ್ರ ಸ್ವರೂಪದ ಚಂಡಮಾರುತ” ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಕೇರಳದ ಮೂಲಕ ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದೆ. ಈಗಾಗಲೇ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇದರ ಬೆನ್ನಲ್ಲೇ ಬಿಪರ್‌ಜಾಯ್ ಚಂಡಮಾರುತವು ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿರುವುದು ಆತಂಕ ಮೂಡಿಸಿದೆ.
ಇದನ್ನೂ ಓದಿ: Weather Report: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 4 ದಿನ ಜಡಿ ಮಳೆ
ಕರ್ನಾಟಕ ಕರಾವಳಿಯಲ್ಲಿ ಕಡಲ ಕೊರೆತ
ಬಿಪರ್‌ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರದಲ್ಲಿ ಅಲೆಗಳ ಗಾತ್ರ ದೊಡ್ಡದಾಗುತ್ತಿವೆ. ಇದರಿಂದಾಗಿ ಕರ್ನಾಟಕ ಕರಾವಳಿಯಲ್ಲಿ ಕಡಲ ಕೊರೆತ ಆರಂಭವಾಗಿದೆ. ಅಲೆಗಳು ವೇಗವಾಗಿ ದಡಕ್ಕೆ ಅಪ್ಪಳಿಸುತ್ತಿದ್ದು, ಎರಡೇ ದಿನದಲ್ಲಿ ಐದು ಮೀಟರ್ ಭೂಮಿ ಸಮುದ್ರದ ಪಾಲಾಗಿದೆ. ಮುಂಗಾರು ಆರಂಭದ ಹಂತದಲ್ಲಿಯೇ ಅಲೆಗಳ ತೀವ್ರತೆ ಜಾಸ್ತಿಯಾಗುತ್ತಿರುವ ಕಾರಣ ಮನೆಗಳು ಧರೆಗುರುಳಿವೆ. ಇದಕ್ಕಾಗಿ ಶಾಶ್ವತ ಪರಿಹಾರ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕರಾವಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.