ಬೆಂಗಳೂರು: ಜೈಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ಬಾಂಬ್ ಇದೆ ಎಂಬ ಸಂದೇಶ ಪತ್ತೆಯಾಗಿ ಕೆಲ ಹೊತ್ತು ಆತಂಕದ ವಾತಾವರಣ ಉಂಟಾಗಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಕೆಐಎಎಲ್ ಏರ್ಪೋರ್ಟ್‌ಗೆ ಭಾನುವಾರ ರಾತ್ರಿ 9:30ರಲ್ಲಿ ಇಂಡಿಗೋ ವಿಮಾನ ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತು ತಂದಿತ್ತು. ವಿಮಾನದ ಟಾಯ್ಲೆಟ್ ಟಿಶ್ಯೂ ಪೇಪರ್ ಮೇಲೆ ಹಿಂದಿ ಭಾಷೆಯಲ್ಲಿ ವಿಮಾನವನ್ನು ಇಳಿಸಬೇಡಿ, ಇದರಲ್ಲಿ ಬಾಂಬ್ ಇದೆ (ಲ್ಯಾಂಡ್ ನಾ ಕರ್ನಾ, ಇಸ್ ಫ್ಲೈಟ್ ಮೇ ಬಾಂಬ್ ಹೈ) ಎಂದು ಹಿಂದಿ ಭಾಷೆಯಲ್ಲಿದ್ದ ಬರಹ ಕಂಡುಬಂದಿತ್ತು. ಇದನ್ನು ಸಿಬ್ಬಂದಿ ಗಮನಿಸಿ ಕೂಡಲೇ ಕೆಐಎಎಲ್ ಭದ್ರತಾ ಏಜೆನ್ಸಿ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ಅವರ ಸೂಚನೆಯಂತೆಯೇ ಫ್ಲೈಟ್ ಲ್ಯಾಂಡ್ ಮಾಡಲಾಗಿದೆ.
ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಇಳಿದ ಕೂಡಲೇ ಕೂಡಲೇ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರ ಮಾಡಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, CISF ನಿಂದ ತೀವ್ರ ತಪಾಸಣೆ ಮಾಡಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಕೈಬರಹ ಮಾದರಿ ಸಂಗ್ರಹ ಮಾಡಿ ಪರಿಶೀಲನೆ ನಡೆಸಲಾಯಿತು.
ಆದರೆ ಬಾಂಬ್ ಆಗಲಿ, ಬೆದರಿಕೆ ಸಂದೇಶ ಇರಿಸಿದವರ ಬಗ್ಗೆಯಾಗಲಿ ಯಾವ ಸುಳಿವೂ ದೊರೆತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ | BBMPಯಿಂದ ಕಂದಾಯ ಇಲಾಖೆಗೆ ಜಾರಿದ ಚಾಮರಾಜಪೇಟೆ ಮೈದಾನ: DC ಅನುಮತಿ ಬೇಕು