ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯನೊಬ್ಬ (Fake Doctors In Bengaluru) ನೀಡಿದ ಎಡವಟ್ಟು ಇಂಜೆಕ್ಷನ್‌ನಿಂದಾಗಿ ಮಹಿಳೆಯ ಪ್ರಾಣಕ್ಕೆ ಕುತ್ತು ಬಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಹೆಗ್ಗನಹಳ್ಳಿಯ ಸಂಜೀವಿನಿ ನಗರದಲ್ಲಿರುವ ಜ್ಯೋತಿ ಎಂಬುವವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಚಿಕಿತ್ಸೆಗೆಂದು ಸಹನಾ ಪಾಲಿ ಕ್ಲಿನಿಕ್‌ಗೆ ಹೋಗಿದ್ದಾರೆ. ಈ ವೇಳೆ ವೈದ್ಯ ನಾಗರಾಜ್ ಎಂಬಾತ ಒಂದೇ ಜಾಗಕ್ಕೆ ಎರಡು ಬಾರಿ ಇಂಜೆಕ್ಷನ್ ಚುಚ್ಚಿ ಕಳಿಸಿದ್ದ. ಬಳಿಕ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿತ್ತು. ಹೀಗಾಗಿ ಪುನಃ ಕ್ಲಿನಿಕ್‌ಗೆ ಹೋಗಿದ್ದ ಜ್ಯೋತಿಗೆ, ಯಾವುದೋ ಕ್ರೀಮ್ ಕೊಟ್ಟು ಕಳಿಸಿದ್ದ. ಆದರೆ, ಜ್ಯೋತಿಯವರ ಪರಿಸ್ಥಿತಿ ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪಿತೇ ವಿನಃ, ಅದು ಕಡಿಮೆಯಾಗಲೇ ಇಲ್ಲ. ಅಲ್ಲದೆ, ಇಂಜೆಕ್ಷನ್ ಕೊಟ್ಟ ಜಾಗ ಸೆಫ್ಟಿಕ್ ಆಗಲು ಶುರುವಾಗಿತ್ತು.
ನಂತರ ಬೇರೊಂದು ಆಸ್ಪತ್ರೆಗೆ ಹೋದಾಗ ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚನೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಎಂಟು ಹೊಲಿಗೆ ಹಾಕುವಷ್ಟರಮಟ್ಟಿಗೆ ಗಾಯ ಅಗಲವಾಗಿತ್ತು. ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಅವರಿಗೆ ನಿತ್ಯಕರ್ಮಕ್ಕೂ ಕಷ್ಟ ಪಡುವಂತಾಗಿದೆ. ವೈದ್ಯನ ವಿರುದ್ಧ ತಿರುಗಿ ಬಿದ್ದಿರುವ ಜ್ಯೋತಿ ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಬ್ಬರ ಬಂಧನ, ಆತ ವೈದ್ಯನೇ ಅಲ್ಲ
ಮಹಿಳೆಯ ದೂರಿನ ಮೇರೆಗೆ ರಾಜಗೋಪಾಲ್ ನಗರ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅಸಲಿಗೆ ನಾಗರಾಜ್ ವೈದ್ಯನೆ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಮಾತಾ ಕ್ಲಿನಿಕ್ ಮತ್ತು ಸಹನಾ ಪಾಲಿಕ್ಲಿನಿಕ್ ಅನ್ನು ನಾಗರಾಜ್ ನಡೆಸುತ್ತಿದ್ದ. ಈ ಎರಡು ಕ್ಲಿನಿಕ್ ಕುಮಾರಸ್ವಾಮಿ ಎಂಬಾತನ ಮಾಲಿಕತ್ವದಲ್ಲಿ ಇತ್ತು ಎಂದು ತಿಳಿದು ಬಂದಿದೆ. ನಕಲಿ ವೈದ್ಯನ ನಿರ್ಲಕ್ಷ್ಯಕ್ಕೆ ಮಹಿಳೆಯ ಸ್ಥಿತಿ ಶೋಚನೀಯವಾಗಿದ್ದು, ಜ್ಯೋತಿಯ ಪರಿಸ್ಥಿತಿಗೆ ಕಾರಣರಾದ ಕ್ಲಿನಿಕ್ ಮಾಲೀಕ ಕುಮಾರಸ್ವಾಮಿ ಮತ್ತು ನಕಲಿ ವೈದ್ಯ ನಾಗರಾಜ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Money theft | ನಿಲ್ಲಿಸಿದ್ದ ಕಾರಿನ ಗಾಜು ಒಡೆದು 10.5 ಲಕ್ಷ ರೂ. ಇದ್ದ ಬ್ಯಾಗ್ ಎತ್ತಿಕೊಂಡು ಪರಾರಿ!