Site icon Vistara News

Fake News: ಇಲ್ಲಿದೆ ಸುಳ್ಸುದ್ದಿಗಳ ಪಟ್ಟಿ, ಕ್ರಮ ಕೈಗೊಳ್ಳಿ; ಕಾಂಗ್ರೆಸ್‌ ಎಚ್ಚರಿಕೆಗೆ ಬಿಜೆಪಿ ಟ್ವೀಟ್‌ ಗೇಲಿ!

Fake news

#image_title

ಬೆಂಗಳೂರು: ಇನ್ನು ಮುಂದೆ ಸುಳ್ಸುದ್ದಿಗಳನ್ನು (Fake News) ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೋಷಿಯಲ್ ಮೀಡಿಯಾದಲ್ಲಿ (Social Media) ಬರುವ ಸುಳ್ಳು ಸುದ್ದಿಗಳ ಬಗ್ಗೆ ವಿಶೇಷ ನಿಗಾ (Fact check unit) ವಹಿಸಲಾಗುವುದು ಎಂದು ನೂತನ ಡಿಜಿ-ಐಜಿಪಿ ಅಲೋಕ್‌ ಮೋಹನ್‌ (DG-IGP Alok Mohan) ಅವರು ಎಚ್ಚರಿಕೆ ನೀಡಿದ ಬೆನ್ನಿಗೇ ಬಿಜೆಪಿ (BJP Karnataka) ಸುಳ್ಳು ಸುದ್ದಿಗಳ ಪಟ್ಟಿ ಎಂದು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿ ಟ್ವೀಟ್‌ ಮಾಡಿದೆ!

ಅಲೋಕ್‌ ಮೋಹನ್‌ ಅವರು ಗುರುವಾರ (ಜೂನ್‌ 22) ನಗರ‌ದ ಪೊಲೀಸ್ ಇಲಾಖೆ ಅಧಿಕಾರಿಗಳೊಡನೆ ಸಭೆ ನಡೆಸಿ ಸುಳ್ಳು ಸುದ್ದಿಗಳನ್ನು ಹರಡಿಸುವವರ ವಿರುದ್ಧ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು. ಕಳೆದ ಕೆಲವು ದಿನಗಳಿಂದಲೇ ಸುಳ್ಳು ಸುದ್ದಿಗಳ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಫ್ಯಾಕ್ಟ್‌ ಚೆಕ್‌ ಯುನಿಟ್‌ ಮರು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದರು.

ಕೆಲವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ, ಸರ್ಕಾರದ ಯೋಜನೆಗಳ ಬಗ್ಗೆಯೂ ಸುಳ್ಳು ಮಾಹಿತಿಗಳನ್ನು ನೀಡಲಾಗುತ್ತಿದೆ. ಈ ರೀತಿ ಸಮಾಜದ ದಾರಿ ತಪ್ಪಿಸುವವರ ವಿರುದ್ಧ ನಿಗಾ ಇಡಲಾಗುವುದು ಎಂದು ಇಬ್ಬರೂ ನಾಯಕರು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಶುಕ್ರವಾರ ಮುಂಜಾನೆ ಟ್ವೀಟ್‌ ಒಂದನ್ನು ಮಾಡಿ, ಐಜಿಪಿಯವರಿಗೆ ನಾವೇ ಸಾಕ್ಷ್ಯಾಧಾರ ಒದಗಿಸುತ್ತೇವೆ. ಸುಳ್ಳು ಸುದ್ದಿಗಳ ಪಟ್ಟಿ ಒದಗಿಸುತ್ತೇವೆ ಎಂದು ಹೇಳಿದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸಿ ಇವೆಲ್ಲ ಸುಳ್ಳು ಎಂದು ಹೇಳಿ ಕ್ರಮಕ್ಕೆ ಆಗ್ರಹಿಸಿದೆ.

ಸುಳ್ಳು ಸುದ್ದಿಗಳ ಪಟ್ಟಿ

ಸಿದ್ದರಾಮಯ್ಯವರೇ ರವರೇ, ಐಜಿಪಿಯವರಿಗೆ ನಾವೇ ಸಾಕ್ಷ್ಯಾಧಾರ ಒದಗಿಸುತ್ತೇವೆ.

ಸುಳ್ಳು ಸುದ್ದಿ 1: @siddaramaiah: ಮಹಾದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್‌ ನಿಂಗೂ ಫ್ರೀ, ಎಲ್ರಿಗೂ ಫ್ರೀ.ಸುಳ್ಳು ಸುದ್ದಿ 2: @DKShivakumar: ಜೂನ್‌ ಒಂದನೇ ತಾರೀಕಿನಿಂದ ನೀವ್ಯಾರೂ ಕರೆಂಟ್‌ ಬಿಲ್‌ ಕಟ್ಟಬೇಕಿಲ್ಲ.
ಸುಳ್ಳು ಸುದ್ದಿ 3: @priyankagandhi: ರಾಜ್ಯದ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳೂ ₹2,000
ಸುಳ್ಳು ಸುದ್ದಿ 4: @rahulgandhi: ರಾಜ್ಯದ ಪ್ರತಿಯೊಬ್ಬ ನಿರುದ್ಯೋಗಿ ಯುವಕ-ಯುವತಿಯರಿಗೆ ಪ್ರತಿ ತಿಂಗಳೂ ₹3,000

ಎಂದು ಬರೆದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ ಅವರೇ ಸುಳ್ಳು ಸುದ್ದಿ ಹರಡಿಸಿದ್ದು ಎಂದು ಗೇಲಿ ಮಾಡಿದ್ದಾರೆ.

ಸಿದ್ದರಾಮಯ್ಯನವರೇ ಜನರ ಕಿವಿ ಮೇಲೆ ಹೂವು ಇಡಬೇಡಿ!

ಈ ನಡುವೆ, ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿ ಅದು ಮತ್ತೊಂದು ಟ್ವೀಟ್‌ ಮಾಡಿ ಗೇಲಿ ಮಾಡಿದೆ. ʻʻಸಿದ್ದರಾಮಯ್ಯನವರೇ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ವ್ಯರ್ಥ ಪ್ರಯತ್ನ ಮಾಡಬೇಡಿ. ಕೊಟ್ಟ ಮಾತು ತಪ್ಪಿ ನಡೆದರೆ ಪರಮಾತ್ಮನಿಗಿಂತ ಮೊದಲು ಜನರೇ ಮೆಚ್ಚುವುದಿಲ್ಲ… ಅಧಿಕಾರ ಹಿಡಿಯಲೇಬೇಕೆಂಬ ಭರದಲ್ಲಿ ಮಹದೇವಪ್ಪನಿಗೂ ಫ್ರೀ, ಕಾಕಾಪಾಟೀಲನಿಗೂ ಫ್ರೀ ಎಂದು ನೀವು, ಕೇಂದ್ರ ಕೊಡಲಿದೆ ಅಥವಾ ಕೇಂದ್ರದ ಸಹಭಾಗಿತ್ವ ಇರಲಿದೆ ಎಂದು ಹೇಳಿದ್ದಿರಾ? ಈಗ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಸುಳ್ಳಿನ ಪುಂಗಿ ಊದುತ್ತಿದ್ದೀರಿ. ಅವಾಸ್ತಿಕ ಗ್ಯಾರಂಟಿಗಳ ಯೋಚನಾರಹಿತ ಅನುಷ್ಠಾನದಿಂದಾಗಿ ರಾಜ್ಯ ಗೊಂದಲದ ಗೂಡಾಗಿದೆ! ಅಂದು ನೀವು ಲಜ್ಜೆ ಬಿಟ್ಟು ಕೊಟ್ಟ ಎಲ್ಲ ಗ್ಯಾರಂಟಿಗಳಿಗೆ ಬದ್ಧರಾಗಿ..!ʼʼ ಎಂದು ಕಿವಿಮಾತು ಹೇಳಿದೆ.

ಪುಂಗಿ ಬಿಡುವ ಕಾಂಗ್ರೆಸಿಗರು

ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಅಕ್ಕಿಯನ್ನೇ ನಾನು ಕೊಟ್ಟೆ ಎಂದು ಕಾಂಗ್ರೆಸಿಗರು ಪುಂಗಿ ಬಿಡುತ್ತಿದ್ದಾರೆ ಎಂದೂ ಬಿಜೆಪಿಗೇಲಿ ಮಾಡಿದ್ದು, ಕೇಂದ್ರದ ಅಕ್ಕಿ ಬರುತ್ತಲೇ ಇರುತ್ತದೆ. ಸಿದ್ದರಾಮಯ್ಯನವರೇ ನಿಮ್ಮ 10 ಕೆಜಿ ಅಕ್ಕಿ ಎಲ್ಲಿದೆ ಎಂದು ಕೇಳಿದೆ.

ಇದನ್ನೂ ಓದಿ: Fact Check Unit: ಫೇಕ್‌ ನ್ಯೂಸ್‌ ಮೂಲವನ್ನು ಬೇರು ಸಮೇತ ಕತ್ತರಿಸಿ: ಸಿದ್ದರಾಮಯ್ಯ

Exit mobile version