ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ (Karnataka Government) ಹೆಸರಿನಲ್ಲಿ ನಕಲಿ ಆದೇಶಗಳ (Fake Orders) ಮೂಲಕ ವಂಚನೆ ಮಾಡುತ್ತಿರುವ ಜಾಲವೀಗ ಬಯಲಾಗಿದೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ (Government Officials) ಹೆಸರಿನಲ್ಲಿ ನಕಲಿ ಆದೇಶಗಳು ಹರಿದಾಡುತ್ತಿದ್ದು, ಇಬ್ಬರು ಹಿರಿಯ ಅಧಿಕಾರಿಗಳಿಂದ ಒಂದೇ ವಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhana Soudha Police) ದೂರು ದಾಖಲಾಗಿವೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎನ್‌ಎಚ್‌ಎಂಗಳನ್ನು (ನ್ಯಾಷನಲ್ ಹೆಲ್ತ್ ಮಿಷನ್ ಸಿಬ್ಬಂದಿ) ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಎನ್‌ಎಚ್‌ಎಂ ನೌಕರರನ್ನು ಕಾಯಂಗೊಳಿಸಿ ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿಯವರ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದೆ. ನಕಲಿ ಆದೇಶದ ಪ್ರತಿಯನ್ನು ದುಷ್ಕರ್ಮಿಗಳು ಆರ್ಥಿಕ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನಿಸಿದ್ದಾರೆ.
ನಕಲಿ ದಾಖಲೆ ಕೇಸ್ ಕುರಿತು ದೂರು ದಾಖಲು
ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಕಳುಹಿಸಲಾದ ಆದೇಶದ ನೈಜತೆ ಪರಿಶೀಲನೆ ವೇಳೆ ಕೃತ್ಯವು ಬಯಲಾಗಿದೆ. ಈ ಕುರಿತು ಮುಖ್ಯಮಂತ್ರಿ ಕಚೇರಿ ಮುಖ್ಯ ಕಾರ್ಯದರ್ಶಿ ಸಿದ್ದೇಶ ಪೊತಲಕಟ್ಟಿ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಕಲಿ ದಾಖಲೆ ಮೂಲಕ ಕಾಂಟ್ರ್ಯಾಕ್ಟ್ ಪಡೆಯಲು ಯತ್ನ
ಸರ್ಕಾರದ ನಕಲಿ ಆದೇಶ ಸೃಷ್ಟಿಸಿ ಕಾಂಟ್ರ್ಯಾಕ್ಟ್ ಪಡೆಯಲು ಯತ್ನಿಸಿದ ಮತ್ತೊಂದು ಪ್ರಕರಣ ಕೂಡ ಬಯಲಾಗಿದೆ. ರಾಜ್ಯ ಸರ್ಕಾಋದ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯದರ್ಶಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಕಾಲೋನಿ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದೆ. ವಕ್ಫ್ ಬೋರ್ಡ್ ಕಾರ್ಯದರ್ಶಿ ನಾಗರಾಜ್ ಅವರ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಲಾಗಿದ್ದು, 4 ಕೋಟಿ ರೂ. ಗುತ್ತಿಗೆ ನೀಡಿರುವ ಬಗ್ಗೆ ಉಲ್ಲೇಖವಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಜ್ಯದ 1,093 ನಕಲಿ ಕ್ಲಿನಿಕ್‌ಗಳಿಗೆ ಬೀಗ; ಇನ್ನಷ್ಟು ಕ್ರಮ ಆಗಲಿ ಬೇಗ
ನಕಲಿ ಆದೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಗೆ ನಕಲಿ ಕಾಂಟ್ರ್ಯಾಕ್ಟರ್ ನಿಖಿಲ್ ಎಂಬಾತ ಸಲ್ಲಿಸಿದ್ದಾನೆ. ಇದರ ಕುರಿತು ಮಾಹಿತಿ ಲಭ್ಯವಾಗುತ್ತಲೇ ವಕ್ಫ್‌ಬೋರ್ಡ್ ಕಾರ್ಯದರ್ಶಿ ನಾಗರಾಜ್ ಅವರು ನಿಖಿಲ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ವಿಧಾನಸೌಧ ಪೊಲೀಸರು ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ