ಬೆಂಗಳೂರು: ಅಶೋಕನಗರ ಠಾಣೆ ಪಿಎಸ್‌ಐ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸುಮಾರು 12 ಲಕ್ಷ ರೂ. ಕಳ್ಳತನವಾಗಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ತನಿಖೆ ವೇಳೆ ಮನೆಯಲ್ಲಿ ಯಾರೂ ಕೂಡ ಕಳ್ಳತನ ಮಾಡಿಲ್ಲ. ಇದೊಂದು ಸುಳ್ಳು ಪ್ರಕರಣ (False Case) ಎಂಬುವುದು ಗೊತ್ತಾಗಿದೆ.
ಪೊಲೀಸ್ ಅಧಿಕಾರಿ ಮನೆಯಲ್ಲೇ ಕಳ್ಳತನ ಆಗಿದೆ ಎಂದು ದೂರು ದಾಖಲಾಗಿದ್ದರಿಂದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಅಸಲಿಗೆ ಕಳ್ಳತನ ಆಗಿದ್ಯಾ ಅಥವಾ ಪೊಲೀಸರೇ ಸೃಷ್ಟಿಸಿರೊ ಕಥೆನಾ ಅನ್ನೋ ಶಂಕೆ ಕೂಡಾ ಇತ್ತು. ಆದರೆ, ತನಿಖೆ ಆದ ನಂತರ ಸತ್ಯಾಂಶ ಹೊರಬಿದ್ದಿದೆ. ಇದರಿಂದ ಪೊಲೀಸರು ಹೀಗೂ ಮಾಡ್ತಾರಾ ಎಂದು ಅಚ್ಚರಿ ಮೂಡಿದೆ.
ಕಳೆದ 25 ದಿನಗಳ ಹಿಂದೆ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್ಐ ಪುಟ್ಟಸ್ವಾಮಿಯ ಕೋರಮಂಗಲದ ಮನೆಯಲ್ಲಿ ಕಳ್ಳತನ ಆಗಿದೆ ಅನ್ನೋ ದೂರು ದಾಖಲಾಗಿತ್ತು. ಮನೆಗೆ ನುಗ್ಗಿದ್ದ ಕಳ್ಳರು ಪಿಎಸ್ಐ ಪತ್ನಿ ಕೈ ಕಾಲು ಕಟ್ಟಿ ಹಾಕಿ 12 ಲಕ್ಷ ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಪಿಎಸ್ಐ ಮನೆಯಲ್ಲಿ ಕಳ್ಳತನ ಆಗಿದೆ ಅಂದ್ರೆ ನಂಬೋದಕ್ಕೆ ಸ್ವಲ್ಪ ಅನುಮಾನವೇ ಆಗಿತ್ತು. ಸ್ವತಃ ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಪೊಲೀಸ್ ಮನೆಯಲ್ಲೇ ಕಳ್ಳತನವಾಯ್ತಾ ಎಂದು ಹುಟ್ಟಿಕೊಂಡಿದ್ದ ಪ್ರಶ್ನೆ ಜೊತೆಗೆ ಹಲವು ಅನುಮಾನಗಳು ಸುರುಳಿ ಸುತ್ತಿದ್ದವು. ಇದೀಗ ಕೇಸ್ ಜಾಲಾಡಿರುವ ಪೊಲೀಸರಿಂದ ಸತ್ಯ ಬಯಲಾಗಿದೆ.
ಈ ಕೇಸ್ ಬೆಳಕಿಗೆ ಬಂದಾಗ ಪ್ರಕರಣದ ಎಫ್ಐಆರ್ ಮಾಹಿತಿಯನ್ನು ಪೊಲೀಸ್ ಇಲಾಖೆ ವೆಬ್ ಸೈಟ್‌ನಿಂದಲೂ ಹೈಡ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದಾದ ನಂತರ ತನಿಖೆ ವೇಳೆ ಸಿಸಿಟಿವಿ ಪರಿಶೀಲನೆ ಮಾಡಿದಾಗ ಗೊತ್ತಾಗಿದ್ದು ದೂರಿನಲ್ಲಿ ಹೇಳಲಾಗಿದ್ದ ಸಮಯದಲ್ಲಿ ಮನೆಯ ಅಕ್ಕ ಪಕ್ಕ ಯಾವುದೇ ಕಳ್ಳರ ಓಡಾಟದ ಚಹರೆ ಕಂಡುಬಂದಿರಲಿಲ್ಲ. ಹಾಗಾಗಿ ಇಲ್ಲಿ ಕಳ್ಳತನ ಆಗಿದ್ಯಾ ಅಥವಾ ಸುಳ್ಳು ದೂರು ದಾಖಲಾಗಿದ್ಯಾ ಅನ್ನೋ ಪ್ರಶ್ನೆ ಕಾಡಲು ಶುರುವಾಗಿತ್ತು. ಹಾಗಾಗಿ ಪೊಲೀಸರು ಪಿಎಸ್‌ಐ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ವಿಚಾರಣೆ ನಡೆಸಿದ್ದು, ಇದೀಗ ಆ ಪ್ರಶ್ನೆಗೆ ಉತ್ತರ ದೊರೆತಿದ್ದು ಅಸಲಿಗೆ ಅಲ್ಲಿ ಕಳ್ಳತನವೇ ನಡೆದಿರಲಿಲ್ಲ ಎಂಬ ಸತ್ಯ ಹೊರಬಿದ್ದಿದೆ.
ಪಿಎಸ್‌ಐ ಪತ್ನಿ ತನ್ನ ತವರು ಮನೆಯವರಿಗೆ ಆರ್ಥಿಕ ಸಹಾಯ ಮಾಡಲು ಮನೆಯಲ್ಲಿದ್ದ 10 ಲಕ್ಷ ಹಣ ಚಿನ್ನ ಕೊಟ್ಟಿದ್ದರಂತೆ. ಆದರೆ ಅದ್ಯಾವ ಕಾರಣಕ್ಕೋ ಏನೋ ತನ್ನ ಮನೆಯಲ್ಲಿ ದರೋಡೆ ಆಗಿದೆ ಎಂದು ಪಿಎಸ್ಐ ಸುಳ್ಳು ದೂರು ದಾಖಲಿಸಿದ್ದರು.
ಇದನ್ನೂ ಓದಿ | Digital Arrest: ಡಿಜಿಟಲ್ ಅರೆಸ್ಟ್ ಮಾಡಿ 2.2 ಕೋಟಿ ರೂ. ವಂಚನೆ; ಐವರು ಸೈಬರ್ ಕಳ್ಳರ ಬಂಧನ
ನಿಜವಾದ ಸಂಗತಿ ಏನೆಂದರೆ ಮನೆಯಲ್ಲಿದ್ದ ಹಣವನ್ನು ಸಂಬಂಧಿಕರಿಗೆ ನೀಡಿ, ಕುಟುಂಬಸ್ಥರೇ ಕಳ್ಳತನದ ನಾಟಕವಾಡಿದ್ದಾರೆ. ಸುಳ್ಳು ದೂರು ನೀಡಿದ್ದರಿಂದ ಪಿಎಸ್ಐ ಮೇಲೆ ಶಿಸ್ತು ಕ್ರಮ ಜರುಗಿಸಲು ನಗರ ಪೋಲಿಸ್ ಆಯುಕ್ತರು ಮುಂದಾಗಿದ್ದಾರೆ. ಏನೇ ಆಗಲಿ ಪೋಲಿಸ್ ಮನೆಯಲ್ಲೇ ಕಳ್ಳತನ ಆಗಿದೆ ಅನ್ನೊ ವಿಷಯ ಕೇಳಿ ದಂಗಾಗಿದ್ದ ಜನಕ್ಕೆ ಅದಕ್ಕಿಂತ ಆತಂಕಕಾರಿ ವಿಷಯವೊಂದು ಬಯಲಾಗಿದೆ .