ತುಮಕೂರು: ಗರ್ಭಿಣಿ ಪತ್ನಿಯನ್ನು ಹೆರಿಗೆಗೆಂದು ತವರಿಗೆ ಕಳುಹಿಸಿ ಗಂಡನೊಬ್ಬ ಎಸ್ಕೇಪ್ (Husband Escape) ಆಗಿದ್ದಾನೆ. ಸೀಮಂತ ಮುಗಿಸಿ ಪತ್ನಿಯನ್ನು ತವರಿಗೆ ಕಳಿಸಿದ್ದ ಆತ ಮತ್ತೆ ಮುಖ ನೋಡಲೂ ಬಂದಿಲ್ಲ. ಮಗುವಿಗೆ ಈಗ ಒಂಬತ್ತು ತಿಂಗಳು. ಗಂಡನನ್ನು ಹುಡುಕಿಕೊಂಡು ಅವನ ಮನೆಗೆ ಬಂದರೆ ಅಲ್ಲೂ ಅವನಿಲ್ಲ (Family Dispute), ಮನೆಗೂ ಬಾಗಿಲು ಹಾಕಿದೆ!
ಇದು ತುಮಕೂರು ಜಿಲ್ಲೆಯ (Tumkur News) ಶಿರಾ ತಾಲೂಕಿನ ಅಪ್ಪಿಹಳ್ಳಿ ಗ್ರಾಮದಲ್ಲಿ ನಡೆದ ವಿದ್ಯಮಾನ. ಚಂದ್ರಶೇಖರ್ ಎಂಬಾತನೇ ಎಸ್ಕೇಪ್ ಆದ ಪತಿರಾಯ. ಶೋಭಾ ಆತನ ಜೂಟಾಟಕ್ಕೆ ಒಳಗಾಗಿ ಕಂಗಾಲಾದ ಮಹಿಳೆ. ಈಗ ಒಂಬತ್ತು ತಿಂಗಳ ಮಗುವನ್ನು ಹಿಡಿದುಕೊಂಡು ಗಂಡ ಮನೆಯ ಮುಚ್ಚಿದ ಬಾಗಿಲ ಮುಂದೆ ಧರಣಿ ನಡೆಸುತ್ತಿದ್ದಾಳೆ.
ಇಷ್ಟು ಮೂಲ ಕಥೆಯನ್ನು ಕೇಳಿದ ಬಳಿಕ ಇವರೇನೋ ಬಡವರು, ಅವಿದ್ಯಾವಂತರು. ಸಣ್ಣ ಪುಟ್ಟ ಕಾರಣಕ್ಕೆ ಏನೋ ಜಗಳ ಮಾಡಿಕೊಂಡಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಈ ಥರ ಕಳ್ಳಾಟ ಆಡುತ್ತಿರುವ ಚಂದ್ರಶೇಖರ್ ವೃತ್ತಿಯಲ್ಲಿ ಉಪನ್ಯಾಸಕ. ಶೋಭಾ ಕೂಡಾ ಎಂಟೆಕ್ ಪದವೀಧರೆ. ಚಂದ್ರಶೇಖರ್ ಕುಟುಂಬಕ್ಕೆ ಸಾಕಷ್ಟು ಜಮೀನು, ಕೃಷಿ, ಅಡಿಕೆ ತೋಟ ಎಲ್ಲವೂ ಇದೆ. ಆದರೆ, ಇಡೀ ಕುಟುಂಬವೇ ಕಳ್ಳಾಟ ಆಡುತ್ತಿದೆ ಎನ್ನುವುದು ಆರೋಪ.
ಚಂದ್ರಶೇಖರ್ ಮತ್ತು ಶೋಭಾಗೆ ಕೆಲವು ವರ್ಷದ ಹಿಂದೆ ಮದುವೆಯಾಗಿದೆ. ವಿದ್ಯಾವಂತರಾಗಿರುವ ಇವರ ನಡುವೆ ಹೆಚ್ಚಿನ ವರದಕ್ಷಿಣೆ ಮತ್ತಿತರ ಬೇಡಿಕೆಗಳು ಇಲ್ಲದೆ ನಡೆದಿದೆ ಎನ್ನುವುದು ಶೋಭಾ ಅವರ ಮಾತಿನಿಂದ ವ್ಯಕ್ತವಾಗುತ್ತದೆ. ಚಂದ್ರಶೇಖರ್ ಅವರ ಕುಟುಂಬವೇ ಹಣ ಖರ್ಚು ಮಾಡಿ ಮದುವೆ ಮಾಡಿಕೊಂಡಿದೆ.
ಈ ನಡುವೆ ಏನಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಗರ್ಭಿಣಿಯಾದ ಶೋಭಾಳನ್ನು ಚಂದ್ರಶೇಖರ ಸೀಮಂತದ ಬಳಿಕ ತವರು ಮನೆಗೆ ಬಿಟ್ಟಿದ್ದಾನೆ. ಆಮೇಲೆ ಆಕೆಗೆ ಹೆರಿಗೆಯಾಗಿದೆ. ಆದರೆ, ಹೆರಿಗೆಯಾದಾಗಲೂ ಚಂದ್ರಶೇಖರ್ ಮಗುವಿನ ಮುಖ ನೋಡಲು ಬಂದಿರಲಿಲ್ಲ. ಫೋನ್ ಮಾಡಿದಾಗಲೂ ಕರೆ ಸ್ವೀಕರಿಸಿರಲಿಲ್ಲ.
ಮುಂದಿನ ಒಂಬತ್ತು ತಿಂಗಳ ಕಾಲ ಶೋಭಾ ತವರು ಮನೆಯಲ್ಲೇ ಇದ್ದು ಕಾದಿದ್ದಾರೆ. ಈ ನಡುವೆ ಯಾವತ್ತೂ ಚಂದ್ರಶೇಖರ್ ಹೆಂಡತಿಯನ್ನಾಗಲೀ, ಮಗುವನ್ನಾಗಲೀ ಸಂಪರ್ಕಿಸಿಲ್ಲ.
ಆತಂಕಗೊಂಡ ಶೋಭಾ ಕಂಡಕಂಡವರ ಕಾಲು ಹಿಡಿದಿದ್ದಾರೆ. ಆದರೆ, ಯಾವ ದಿಕ್ಕಿನಲ್ಲೂ ಅವರಿಗೆ ನ್ಯಾಯ ಸಿಗಲೇ ಇಲ್ಲ. ಗಂಡನನ್ನು ಹುಡುಕಿಕೊಂಡು ಮನೆಗೆ ಹೋದರೆ ಆ ಮನೆಯಲ್ಲೂ ಚಂದ್ರಶೇಖರ್ ಅಲ್ಲಿ ಇಲ್ಲ ಎನ್ನುತ್ತಿದ್ದಾರೆ. ಅತ್ತೆ ಮಾವ ಕೂಡ ಶೋಭಾಳನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಶೋಭಾ ಬಂದ ಕೂಡಲೇ ಮನೆಗೆ ಬೀಗ ಹಾಕಿಕೊಂಡು ಅತ್ತೆ ಮಾವ ಕೂಡ ಎಸ್ಕೇಪ್ ಆಗುತ್ತಿದ್ದಾರೆ!
ಒಂದು ವರ್ಷದಿಂದ ಕಣ್ಮರೆಯಾಗಿರುವ ಪತಿಯನ್ನು ಹುಡುಕಿಕೊಡಿ ಎಂದು ಮಹಿಳಾ ಸಾಂತ್ವನಕ್ಕೆ ದೂರು ನೀಡಿದ್ದಾರೆ ಶೋಭಾ. ಆದರೆ, ಯಾವುದೇ ಫಲ ನೀಡಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿದರೂ ಉಪಯೋಗವಾಗಿಲ್ಲ. ಶೋಭಾ ಅವರು ಶಿರಾ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.
ಈಗ ಶೋಭಾ ಅವರು ತಮ್ಮ ತಾಯಿ ಮತ್ತು ತಂದೆಯ ಜತೆಗೆ ಗಂಡನ ಮನೆಗೆ ಬಂದು 9 ತಿಂಗಳ ಹಸುಗೂಸಿನೊಂದಿಗೆ ಧರಣಿ ಕುಳಿತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ತನ್ನ ಪತಿ ಸಿಗುವವರೆಗೂ ಧರಣಿಯಿಂದ ಮೇಲೇಳಲ್ಲ ಎನ್ನುತ್ತಿದ್ದಾರೆ.
ಏನಾಗಿದೆ ಇವರ ಸಂಬಂಧದಲ್ಲಿ?
ಮೇಲ್ನೋಟಕ್ಕೆ ಇದೊಂದು ಕೌಟುಂಬಿಕ ಸಮಸ್ಯೆಯ ರೀತಿ ಕಾಣಿಸುತ್ತಿದೆ. ವಿದ್ಯಾವಂತರಾಗಿರುವ ಇಬ್ಬರು ಮನಸು ಮಾಡಿದರೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಆದರೆ, ಪ್ರತಿಷ್ಠೆ ಅಡ್ಡಬಂದಿದೆ ಅನಿಸುತ್ತದೆ. ಇಲ್ಲವಾದರೆ ಶೋಭಾ ಬಂದ ಕೂಡಲೇ ಮನೆ ಮಂದಿ ಎಲ್ಲ ತಮ್ಮ ಜಮೀನನ್ನೇ ಬಿಟ್ಟು ಎಸ್ಕೇಪ್ ಆಗುವ ಅಗತ್ಯವಿರಲಿಲ್ಲ. ಶೋಭಾ ಅವರಿಗೂ ಉಪನ್ಯಾಸಕನಾಗಿರುವ ಗಂಡನನ್ನು ಪತ್ತೆ ಹಚ್ಚುವುದು ಇಷ್ಟು ಕಷ್ಟವಾಗಬೇಕಾಗಿರಲಿಲ್ಲ.
ತಾವೇ ಖರ್ಚು ಮಾಡಿ ಮದುವೆ ಮಾಡಿಕೊಂಡರು. ಈ ಕಾರಣಕ್ಕಾಗಿ ನಾವು ಹೇಳಿದಂತೆ ಕೇಳಿಕೊಂಡಿರಬೇಕು ಎಂದು ಹೇಳುತ್ತಾರೆ ಎನ್ನುತ್ತಾರೆ ಶೋಭಾ. ಹಾಗಿದ್ದರೆ ನೀವು ಅವರು ಹೇಳಿದಂತೆ ಕೇಳುತ್ತಿರಲಿಲ್ಲವೇ ಎಂದು ಕೇಳಿದರೆ ನಮಗೂ ಆಸೆ ಆಕಾಂಕ್ಷೆಗಳು ಇರುತ್ತವಲ್ಲಾ ಎಂದು ಉತ್ತರಿಸಿದ್ದಾರೆ ಶೋಭಾ. ಒಟ್ಟಾರೆ ಅಪ್ಪ-ಅಮ್ಮನ ಈ ಜಗಳದಲ್ಲಿ ಏನೂ ಅರಿಯದ ಪುಟ್ಟ ಮಗು ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: Happy Family: ಸಂಸಾರ ಸರಿಗಮದಲ್ಲಿ ಅಪಸ್ವರ ಬರೋದೇಕೆ?