ಬೆಂಗಳೂರು: ಒಂದು ವೇಳೆ ಹೆಂಡತಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ (Conversion to other Religion) ಅವರಿಬ್ಬರ ನಡುವೆ ಯಾವುದೇ ಕಾನೂನು ಪ್ರಕ್ರಿಯೆಗಳು ಇಲ್ಲದೆಯೇ ರದ್ದಾಗುತ್ತದೆ (Marriage Nullified), ವೈವಾಹಿಕ ಸಂಬಂಧ ಅನೂರ್ಜಿತವಾಗುತ್ತದೆ ಎಂದು ರಾಜ್ಯ ಹೈಕೋರ್ಟ್ (Karnataka High court) ಹೇಳಿದೆ. ಪ್ರಕರಣವೊಂದರಲ್ಲಿ ಈ ಪರಿಸ್ಥಿತಿ ಎದುರಾದಾಗ ಕೋರ್ಟ್ ಮದುವೆಗೆ ಅಸ್ತಿತ್ವವೇ ಇಲ್ಲ (Family Problem) ಎಂದು ಸಾರಿದೆ.
ಪತ್ನಿ ಬೇರೊಂದು ಧರ್ಮಕ್ಕೆ ಮತಾಂತರಗೊಂಡರೆ ದಂಪತಿ ವಿವಾಹ ವಿಚ್ಛೇದನ ಪಡೆಯದಿದ್ದರೂ ಮದುವೆ ಅನೂರ್ಜಿತವಾಗುತ್ತದೆ. ಆಕೆ ಸಂಬಂಧದಲ್ಲಿನ ಎಲ್ಲ ಹಕ್ಕುಗಳನ್ನೂ ಕಳೆದುಕೊಳ್ಳುತ್ತಾಳೆ ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ? ಯಾಕೆ ಬಂತು ಮತಾಂತರ ಕಥೆ?
ಬೆಂಗಳೂರಿನ ರಾಜಾಜಿ ನಗರದ ಕೃಷ್ಣ ಎಂಬವರು ವಿದ್ಯಾರಣ್ಯಪುರದ ಮಹಿಳೆಯನ್ನು 2002ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಹುಟ್ಟಿತ್ತು. ಮುಂದೆ ಕಾರಣಾಂತರಗಳಿಂದ ಗಂಡು ಮಗು ಮೃತಪಟ್ಟು ಒಂದೇ ಮಗು ಉಳಿದಿತ್ತು. ಈ ನಡುವೆ ಕೃಷ್ಣ ಪಾರ್ಶ್ವ ವಾಯು ಪೀಡಿತರಾದರು. ಅದರ ನಡುವೆ, ಮಹಿಳೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಮಗುವನ್ನೂ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.
ಇದೆಲ್ಲದರ ನಡುವೆ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪತಿ ದೌರ್ಜನ್ಯ ಎಸಗುತ್ತಿದ್ದು, ಪರಿಹಾರ ಕೊಡಿಸಿ ಎಂದು ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಪ್ರೇಟ್ ನ್ಯಾಯಾಲಯ, ಕೌಟುಂಬಿಕ ದೌರ್ಜನ್ಯ ನಡೆದಿರುವ ಕುರಿತು ಸಾಕ್ಷ್ಯಾಧಾರಗಳಿಲ್ಲ. ಹಾಗಾಗಿ, ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು.
ಮುಂದೆ ಪತ್ನಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಅಲ್ಲಿ ಕೂಡಾ ಕೌಟುಂಬಿಕ ದೌರ್ಜನ್ಯ ನಡೆಸಿರುವ ಕುರಿತು ಸಾಕ್ಷ್ಯಾಧಾರಗಳಿಲ್ಲ ಎಂದೇ ಹೇಳಿತು. ಹೀಗಾಗಿ ಮಾಸಿಕ ನಿರ್ವಹಣಾ ವೆಚ್ಚ ನೀಡಲಾಗದು. ಆದರೆ, ಪತ್ನಿ ಜೀವನ ನಿರ್ವಹಣೆ ಮತ್ತು ಆರೋಗ್ಯ ನಿರ್ವಹಣೆಗೆ 4 ಲಕ್ಷ ರೂ. ಪಾವತಿ ಮಾಡಬೇಕು ಎಂದು ಹೇಳಿತ್ತು. ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್ 22ರ ಪ್ರಕಾರ ಈ ಪರಿಹಾರಕ್ಕೆ ಸೂಚನೆ ಕೊಡಲಾಗಿತ್ತು.
ಸೆಷನ್ಸ್ ಕೋರ್ಟ್ ಮೊರೆಹೋದ ಗಂಡ
ಇದಾದ ಬಳಿಕ ಕೌಟುಂಬಿಕ ದೌರ್ಜನ್ಯ ನಡೆಯದಿದ್ದರೂ ಪರಿಹಾರ ಮಂಜೂರು ಮಾಡಿದ್ದ ನಗರದ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಕೃಷ್ಣ ಅವರು ಹೈಕೋರ್ಟ್ ಮೊರೆ ಹೊಕ್ಕರು. ಇದೀಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ನೇತೃತ್ವದ ಏಕಸದಸ್ಯ ಪೀಠ ಪರಿಹಾರ ನೀಡಬೇಕೆಂಬ ಆದೇಶವನ್ನು ರದ್ದುಗೊಳಿಸಿದೆ. ಜತೆಗೆ ಮದುವೆಯೇ ಊರ್ಜಿತದಲ್ಲಿಲ್ಲ ಎಂದು ಹೇಳಿದೆ.
ಪತ್ನಿ ದೌರ್ಜನ್ಯಕ್ಕೆ ಒಳಗಾಗಿರುವುದು ಸಾಬೀತಾಗದಿದ್ದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಪತ್ನಿಗೆ ಪರಿಹಾರ ನೀಡಲಾಗದು ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಮತಾಂತರದ ವಿಚಾರವನ್ನೂ ಉಲ್ಲೇಖಿಸಿ ಈ ಮದುವೆಯೇ ಅಸ್ತಿತ್ವದಲ್ಲಿಲ್ಲ ಎಂದಿದೆ. ದಂಪತಿ ನಡುವೆ ವಿಚ್ಛೇದನ ಆಗಿಲ್ಲದಿದ್ದರೂ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಇಬ್ಬರ ನಡುವಿನ ವಿವಾಹದ ಹಕ್ಕುಗಳು ರದ್ದುಗೊಂಡಂತಾಗಿದೆ ಎಂದಿದೆ.
ಇದನ್ನೂ ಓದಿ: Allahabad High Court: ‘ಸಪ್ತಪದಿ’ ತುಳಿಯದ ಮದ್ವೆ ಮದುವೆಯೇ ಅಲ್ಲ! ಅಲಹಾಬಾದ್ ಹೈಕೋರ್ಟ್
ಯಾಕೆ ಪರಿಹಾರ ನೀಡಲಾಗದು ಅಂದರೆ..
ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್ 22ರ ಪ್ರಕಾರ, ದೈಹಿಕ ಮಾತ್ರವಲ್ಲ, ಮಾನಸಿಕ ಚಿತ್ರಹಿಂಸೆ, ಭಾವನಾತ್ಮಕ ಯಾತನೆಯಿಂದ ಉಂಟಾದ ನೋವಿಗೆ ಪರಿಹಾರ ನೀಡಲು ಅವಕಾಶವಿದೆ. ಆದರೆ, ದೌರ್ಜನ್ಯ ನಡೆಸಿರುವುದು ಸಾಬೀತಾದಲ್ಲಿ ಮಾತ್ರ ಪರಿಹಾರ ನೀಡಬಹುದು. ಆದರೆ, ಹಾಲಿ ಪ್ರಕರಣದಲ್ಲಿ ದೌರ್ಜನ್ಯ ಸಾಬೀತಾಗಿಲ್ಲ. ಜತೆಗೆ, ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಅಲ್ಲದೆ, ಪತಿ ಕೃಷ್ಣ ಅವರು ಪಾರ್ಶವಾಯು ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಪರಿಹಾರ ನೀಡಲಾಗದು ಎಂದು ಪೀಠ ಸ್ಪಷ್ಟಪಡಿಸಿದೆ.