Site icon Vistara News

Family Problems : ಧರ್ಮಸ್ಥಳ ಲಾಡ್ಜ್‌ನಲ್ಲಿ ವೃದ್ಧ ಆತ್ಮಹತ್ಯೆ; 5 ಮಕ್ಕಳಿದ್ದರೂ ಶವ ಅನಾಥ

Old Man suicide

ಬೆಳ್ತಂಗಡಿ: ಮನೆ ಬಿಟ್ಟು ಧರ್ಮಸ್ಥಳಕ್ಕೆ ಬಂದ ವೃದ್ಧರೊಬ್ಬರು ಅಲ್ಲಿನ ಖಾಸಗಿ ಲಾ‌ಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಪೊಲೀಸರು ಅವರ ಮನೆಯವರಿಗೆ ಕರೆ ಮಾಡಿ ವಿಷಯ (Family Problems) ತಿಳಿಸಿದರೂ ಯಾರೂ ಬಂದು ಶವವನ್ನು ತೆಗೆದುಕೊಂಡು ಹೋಗಲು ಸಿದ್ಧರಿಲ್ಲ. ಹೀಗಾಗಿ ಐದು ಮಕ್ಕಳ ತಂದೆಯ (Father of five Children) ಶವ ಮಂಗಳೂರಿನ ಶವಾಗಾರದಲ್ಲಿ ಅನಾಥವಾಗಿದೆ!

ಎಚ್.ವಿ.ಚಂದ್ರಶೇಖರ್ (89) ಎಂಬ ಬೆಂಗಳೂರು ಮೂಲದ ವ್ಯಕ್ತಿಯೇ ಹೀಗೆ ಪ್ರಾಣ ಕಳೆದುಕೊಂಡು ಅನಾಥ ಶವವಾದವರು. ಅವರು ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಜಗಳವಾಡಿ ಧರ್ಮಸ್ಥಳಕ್ಕೆ ಬಂದಿದ್ದರು ಎನ್ನಲಾಗಿದೆ. ಅವರು ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ತಿಳಿದು ಪೊಲೀಸರು ಧಾವಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಗ ಪೊಲೀಸರು ಮಕ್ಕಳಿಗೆ ಕರೆ ಮಾಡಿದಾಗ, ʻʻನಮಗೆ ತಂದೆ ಬೇಡ, ನಾವು ಬರುವುದಿಲ್ಲʼ ಎಂದಿದ್ದಾರೆ ಎನ್ನಲಾಗಿದೆ.

ಏನಿದು ತಂದೆ ಮಕ್ಕಳ ನಡುವೆ ಜಗಳ?

ಎಚ್.ವಿ. ಚಂದ್ರಶೇಖರ್ ಎಂಬವರ ಮನೆಯಲ್ಲಿ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ನಡೆದಿದೆ.‌ ಈ ಗಲಾಟೆಯಿಂದ ನೊಂದು ಮನೆ ಬಿಟ್ಟು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದ ಚಂದ್ರಶೇಖರ್‌ ಅವರು ಜ. 17ರಂದು ಖಾಸಗಿ ಲಾಡ್ಜ್ ಪಡೆದು ರೂಮಿನಲ್ಲಿ ವಿಷ ಸೇವಿಸಿದ್ದಾರೆ.

ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ರೂಂ ಬಾಯ್ ನೋಡಿ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಅನಿಲ್ ಕುಮಾರ್ ಮತ್ತು ತಂಡ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಜ.18 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ‌.

ಮನೆಯವರಿಗೆ ಮಾಹಿತಿ: ಧರ್ಮಸ್ಥಳ ಪೊಲೀಸರು ಮೃತಪಟ್ಟ ವೃದ್ಧನ ಬ್ಯಾಗ್ ನಲ್ಲಿದ್ದ ಚೀಟಿ ಹಾಗೂ ಆಧಾರ್ ಕಾರ್ಡ್ ಮೂಲಕ ಮನೆಯವರನ್ನು ಸಂಪರ್ಕಿಸಿ ಸಾವನ್ನಪ್ಪಿದ ವಿಚಾರವನ್ನು ತಿಳಿಸಿದಾಗ ʻನಮಗೆ ನಮ್ಮ ತಂದೆ ಬೇಡ , ಅವರ ಶವ ತೆಗೆದುಕೊಂಡು ಹೋಗಲು ನಾವು ಬರುವುದಿಲ್ಲ” ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Self Harming : ಇಬ್ಬರು ಹೆಣ್ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ; ಗಂಡನೇ ಕಿರಾತಕ!

ಮೃತಪಟ್ಟ ವೃದ್ಧನ ಕುಟುಂಬದ ವಿವರ

ಬೆಂಗಳೂರು ಉತ್ತರ ಭಾಗದ ಸುಂಕದ ಕಟ್ಟೆ ಹೊಯ್ಸಳ ನಗರದ ನಿವಾಸಿಯಾಗಿದ್ದಾರೆ ಚಂದ್ರಶೇಖರ್‌. ದಿ.ವೆಂಕಪ್ಪ ಯಾನೆ ಅಪ್ಪಣ್ಣ ಎಂಬವರ ಮಗನಾದ ಎಚ್.ವಿ.ಚಂದ್ರಶೇಖರ್‌ ಅವರಿಗೆ ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಇವರ ಮಕ್ಕಳು ರಂಗನಾಥ್ (ಕ್ಯಾಟರಿಂಗ್ ಕೆಲಸ), ವೆಂಕಟೇಶ್, ರಾಮು (ಹೂವಿನ ವ್ಯಾಪಾರ) ಮಾಡುತ್ತಾರೆ. ಶಶಿಕಲಾ ಮತ್ತು ಸವಿತಾ ಹೆಣ್ಣು ಮಕ್ಕಳು.

ಧರ್ಮಸ್ಥಳ ಪೊಲೀಸರು ಐದು ಜನ ಮಕ್ಕಳನ್ನು ಸಂಪರ್ಕಿಸಿದರೂ ಯಾರು ಕೂಡ ಮೃತದೇಹ ಪಡೆದುಕೊಳ್ಳಲು ಬರುವುದಕ್ಕೆ ನಿರಾಕರಿಸುತ್ತಿದ್ದಾರೆ. ಮೃತದೇಹ ಈಗ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅನಾಥವಾಗಿದೆ.

ಯಾರೂ ಮುಂದೆ ಬಾರದೆ ಇದ್ದರೆ ಅಂತಿಮವಾಗಿ ಪೊಲೀಸರೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ, ಅದಕ್ಕಿಂತ ಮೊದಲು ಬೆಂಗಳೂರಿನ ಪೊಲೀಸರ ಮೂಲಕ ಮನೆಯವರನ್ನು ಮನವೊಲಿಸುವ ಕೆಲಸವನ್ನು ಮಾಡುವ ಸಾಧ್ಯತೆಗಳಿವೆ.

Exit mobile version