Site icon Vistara News

ಹೊಟ್ಟೆ ನೋವೆಂದ ಮಗಳನ್ನು ರೂಮಲ್ಲಿ ಕೂಡಿಟ್ಟು ಚಿತ್ರಹಿಂಸೆ ಕೊಟ್ಟರು; ಈಗವಳಿಗೆ ಕ್ಯಾನ್ಸರ್‌!

superstitious beliefs Girl Locked in Home

ಬೆಂಗಳೂರು: ಮೌಢ್ಯಕ್ಕೆ ಬಲಿಯಾದ ಕುಟುಂಬವೊಂದು ಅನಾರೋಗ್ಯದಿಂದ ನರಳಾಡುತ್ತಿದ್ದ ಯುವತಿಯನ್ನು ಮನೆಯೊಳಗೆ ಕೂಡಿಟ್ಟ ಅಮಾನವೀಯ ಘಟನೆಯೊಂದು ನಡೆದಿದೆ. ಜ್ಯೋತಿಷಿಯ ಮಾತು (Superstitious beliefs) ಕೇಳಿ ನಾಲ್ಕು ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು, ಯುವತಿ (26) ಪ್ರಾಣದ ಜತೆ ಆಟವಾಡಿದ್ದಾರೆ.

ಬೆಂಗಳೂರಿನ ಲಗ್ಗೆರೆಯಲ್ಲಿ ಈ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಸ್ವಂತ ತಮ್ಮನಿಂದಲೇ ನಾಲ್ಕು ತಿಂಗಳಿಂದ ನಾಲ್ಕು ಗೋಡೆಗಳ ಮಧ್ಯೆ ಮಮತಾಶ್ರೀ (26) ಎಂಬಾಕೆ ಗೃಹ ಬಂಧನಕ್ಕೆ ಒಳಗಾಗಿದ್ದಾಳೆ.

ಯುವತಿಗೆ ಹೊಟ್ಟೆ ಊದಿಕೊಂಡು ನರಳಾಡುತ್ತಿದ್ದರೂ ಆಸ್ಪತ್ರೆಗೆ ತೋರಿಸದೇ ಕುಟುಂಬಸ್ಥರು ನಿರ್ಲಕ್ಷ್ಯ ವಹಿಸಿದ್ದಾರೆ. ತೀವ್ರ ಹೊಟ್ಟೆ ನೋವು ತಾಳಲಾರದೇ ಯುವತಿ ಕಿರುಚಾಡಿದ್ದಕ್ಕೆ, ಅಕ್ಕನ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ಲೀಸ್ ನನ್ನನ್ನು ಕಾಪಾಡಿ, ಸಹಾಯ ಮಾಡಿ ಎಂದು ಪರಿಚಯಸ್ಥರಿಗೆ ಯುವತಿ ಮೆಸೇಜ್ ಮಾಡಿದ್ದಾಳೆ.

ಇದನ್ನೂ ಓದಿ: ಕೋವಿಡ್‌ ಫಿಯರ್‌; ಮಕ್ಕಳು ಕೆಮ್ಮಿದ್ದರೂ ಶಾಲೆಗೆ ಕಳಿಸ್ಬೇಡಿ! ಪೋಷಕರಿಗೆ ಕ್ಯಾಮ್ಸ್‌ ರಿಕ್ವೆಸ್ಟ್‌

ಗೃಹ ಬಂಧನ ಯಾಕಾಗಿ?

ಮಮತಾಶ್ರೀ ಮೂಲತಃ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದವಳು. ಪದವಿ ಮುಗಿಸಿದ್ದ ಮಮತಾಳಿಗೆ ನಾಲ್ಕು ತಿಂಗಳ ಹಿಂದೆ ಬೆನ್ನು ನೋವು ಶುರುವಾಗಿತ್ತು. ಮನೆ ಮುದ್ದು, ಮೆಡಿಕಲ್‌ನಿಂದ ಮಾತ್ರೆಗಳನ್ನು ನುಂಗಿದ್ದರೂ ನೋವು ಮಾತ್ರ ಶಮನವಾಗಲಿಲ್ಲ. ಇತ್ತ ಮಮತಾಳ ಬೆನ್ನು ನೋವಿಗೆ ಆಸ್ಪತ್ರೆಗೆ ತೋರಿಸದೇ ಆಕೆಯ ತಮ್ಮ ಪ್ರಶಾಂತ್‌ ಎಂಬಾತ ಆಸ್ಪತ್ರೆ ಸಹವಾಸ ಬೇಡ್ವೇ ಬೇಡ ಎಂದು, ಬಾಬಾನ ಮೊರೆ ಹೋಗಿದ್ದ.

ನಕಲಿ ಬಾಬಾನ ಮಾತು ಕೇಳಿ ಮಮತಾಳಿಗೆ ಮೂರು ತಿಂಗಳಿಂದ ಅರಿಶಿನದ ನೀರು, ನಿಂಬೆ ಹಣ್ಣು ನೀರು ಕುಡಿಸುತ್ತಿದ್ದ. ಆದರೆ ಊಟವನ್ನೇ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು. ಈ ಮಧ್ಯೆ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಆಕೆಗೆ ಕ್ಯಾನ್ಸರ್ ಇರುವುದು ದೃಢವಾಗಿದೆ.

ನಾಲ್ಕು ತಿಂಗಳ ಹಿಂದೆಯೇ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರೆ, ಕ್ಯಾನ್ಸರ್‌ ರೋಗ ನಿವಾರಣೆಯ ಹಂತಕ್ಕೆ ಬರುತ್ತಿತ್ತು. ಆದರೆ ಜ್ಯೋತಿಷಿ ಮಾತು ಕೇಳಿದ ಕುಟುಂಬಸ್ಥರು ಯುವತಿಗೆ ಚಿಕಿತ್ಸೆ ಕೊಡಿಸದೇ ಜೀವಕ್ಕೆ ಕುತ್ತು ತಂದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆಯ ಅಧಿಕಾರಿಗಳು ಗೃಹ ಬಂಧನದಲ್ಲಿದ್ದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

Fake baba in bengaluru

ನಕಲಿ ಬಾಬಾನಿಗೆ ಪೊರಕೆ ಸೇವೆ

ಕುಟುಂಬಸ್ಥರ ಮೌಡ್ಯಕ್ಕೆ ಯುವತಿ ಅನುಭವಿಸಿದ ನರಳಾಟಕ್ಕೆ ಮುಕ್ತಿ ನೀಡಿದ್ದಾರೆ. ಅಬ್ದುಲ್ ಎಂಬಾತ ನಕಲಿ ಬಾಬಾ ಎಂದು ತಿಳಿದು ಬಂದಿದೆ. ಆತನನ್ನು ಹಿಡಿದು ಪೊರಕೆ ಸೇವೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version