ಬೆಂಗಳೂರು: ಕೋಣನಕುಂಟೆಯಲ್ಲಿ ಗುರುವಾರ ನಡೆದ ದಂಪತಿ ಮತ್ತು ಮಗನ ಸಾವು ಮಹೇಶ್ ಅವರ ಗೆಳೆಯರನ್ನು ಕಂಗೆಡಿಸಿದೆ.
ಮಹೇಶ್ ಎಂಬವರು ತನ್ನ ಪತ್ನಿ ಜ್ಯೋತಿ ಮತ್ತು ಮಗ ೯ ವರ್ಷದ ನಂದೀಶ್ ಗೌಡನಿಗೆ ವಿಷ ನೀಡಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಮಹೇಶ್‌ಗೆ ಕ್ಯಾನ್ಸರ್ ಕಾಯಿಲೆ ಇದ್ದು, ಚಿಕಿತ್ಸೆಗೆ ಹಣ ಭರಿಸುವ ಮತ್ತು ತಾನು ಮರಣಿಸಿದರೆ ಮುಂದೆ ಹೆಂಡತಿ-ಮಕ್ಕಳ ಬದುಕು ಹೇಗೆ ಎನ್ನುವ ಆತಂಕದಿಂದ ಮಹೇಶ ಅವರಿಬ್ಬರಿಗೆ ವಿಷ ಕೊಟ್ಟು ತಾನೂ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಲಾಗಿತ್ತು.
ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿಗಳಾದ ಮಹೇಶ ಮತ್ತು ಜ್ಯೋತಿಗೆ ೧೦ ವರ್ಷದ ಹಿಂದೆ ಮದುವೆಯಾಗಿದೆ. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇವರಿಗೆ ನಂದೀಶ್ ಒಬ್ಬನೇ ಮಗ. ಮಹೇಶ್‌ಗೆ ಸರಿಯಾದ ಹೇಳಿಕೊಳ್ಳುವಂತ ಕೆಲಸವೇನಿಲ್ಲ. ಬಿಬಿಎಂಪಿಯಲ್ಲಿ ತಾತ್ಕಾಲಿಕ ಉದ್ಯೋಗ. ಬಿಲ್ ಕಲೆಕ್ಟರ್‌ಗೆ ಸಹಾಯಕ. ಇಂಥ ಪರಿಸ್ಥಿತಿಯಲ್ಲಿರುವಾಗ ಕ್ಯಾನ್ಸರ್ ಕಾಡಿದ್ದರಿಂದ ವ್ಯಾಕುಲನಾಗಿ ಕುಟುಂಬವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ಪ್ರಾಥಮಿಕ ಮಾಹಿತಿ.
ಆದರೆ, ಗುರುವಾರ ಮನೆಗೆ ಹೋಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಹಲವು ಅನುಮಾನಗಳು ಕಾಡಿವೆ. ಮೊದಲನೆಯದು ಮಹೇಶ್ ತನ್ನ ಪತ್ನಿ ಮತ್ತು ಮಗುವನ್ನು ವಿಷ ಕೊಟ್ಟು ಸಾಯಿಸಿಲ್ಲ. ಬದಲಾಗಿ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಹೆಂಡತಿಯನ್ನೂ ಸ್ವಲ್ಪ ಮಟ್ಟಿಗೆ ಹಿಂಸಿಸಿ ಕೊಂದಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಕ್ಯಾನ್ಸರೇ ಈ ಸಾವಿಗೆ ಕಾರಣವಾಗಿದ್ದರೆ ಒಂದೋ ಎಲ್ಲರೂ ಸಾಮೂಹಿಕವಾದ ನಿರ್ಧಾರ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅಥವಾ ಮಹೇಶನಾದರೂ ಸದ್ದಿಲ್ಲದೆ ಸಾಯಿಸುವ ಪ್ಲ್ಯಾನ್ ಮಾಡಿರುತ್ತಿದ್ದ. ಆದರೆ, ಇಲ್ಲಿ ಆ ರೀತಿ ಆಗಿಲ್ಲ ಎನ್ನಲಾಗುತ್ತಿದೆ.
ಪೊಲೀಸರ ಪ್ರಕಾರ ಈ ಆತ್ಮಹತ್ಯೆ ನಡೆದಿರುವುದು ಬೆಳಗ್ಗೆ ೧೨ರಿಂದ ಮಧ್ಯಾಹ್ನ ೩ ಗಂಟೆಯ ನಡುವೆ. ಎರಡನೇ ತರಗತಿಯಲ್ಲಿ ಓದುತ್ತಿರುವ ಮಗನನ್ನು ಮಹೇಶ ಮಧ್ಯಾಹ್ನ ಸ್ಕೂಲಿನಿಂದ ಕರೆದುಕೊಂಡು ಬಂದಿದ್ದ. ಆತ ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂಬ ಸಂಶಯ ಎದುರಾಗಿದೆ. ಮಗನನ್ನು ಕೊಂದ ಬಳಿಕ ಹೆಂಡತಿಯನ್ನು ಕೊಲ್ಲಲು ಆತ ಪ್ರಯತ್ನ ನಡೆಸಿರುವ ಎಂಬ ಕುರುಹುಗಳಿವೆ. ಹೆಂಡತಿಯ ಕೆನ್ನೆ ಮತ್ತು ಕೈ ಮೇಲೆ ಉಗುರಿನಿಂದ ತರಚಿದ ಗಾಯಗಳಿವೆ. ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನ ಮಾಡಿದಂತೆ ಪೊಲೀಸರಿಗೆ ಕಂಡಿದೆ.
ಮಹೇಶ ಈ ಕೃತ್ಯಕ್ಕೆ ಮುನ್ನ ಮನೆಯ ಬಾಗಿಲನ್ನು ಹಾಕಿದ್ದರು ಎನ್ನಲಾಗಿದೆ. ಕಿಟಕಿ ಬಾಗಿಲನ್ನೂ ಮುಚ್ಚಿದ್ದ. ಟೀವಿ ಸೌಂಡ್ ಹೆಚ್ಚಿಸಿ ಒಳಗೆ ನಡೆಯುವ ಯಾವುದೂ ಹೊರಗೆ ಕೇಳಿಸದಂತೆ ಮಾಡಿದ್ದ. ಅವರಿಬ್ಬರನ್ನೂ ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ನಿಜವೆಂದರೆ ಮಹೇಶ ಸ್ವಾತಂತ್ರ್ಯೋತ್ಸವದ ದಿನ ಲಾಲ್ ಬಾಗ್‌ನ ಫಲ ಪುಷ್ಟ ಪ್ರದರ್ಶನಕ್ಕೆ ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಹೋಗಿದ್ದ. ಅಷ್ಟರ ಮಟ್ಟಿಗೆ ಅವನಿಗೆ ಆರೋಗ್ಯವೂ ಇತ್ತು. ಗುರುವಾರ ಸಂಬಂಧಿಕರು ಬಂದು ನೋಡಿದಾಗ ಕೊಲೆಯ ವಿಚಾರ ಬೆಳಕಿಗೆ ಬಂದಿದೆ.
ಹಾಗಿದ್ದರೆ, ಮಹೇಶನಿಗೆ ನಿಜಕ್ಕೂ ಕ್ಯಾನ್ಸರ್ ಇದ್ದು, ಅದರ ವ್ಯಾಕುಲತೆಯಲ್ಲೇ ಅವನು ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದ್ದರೂ ಹೆಂಡತಿ ಮತ್ತು ಮಗ ಈ ಸಾವಿನ ಒಪ್ಪಂದಕ್ಕೆ ಒಪ್ಪಿರದೇ ಇರುವ ಸಾಧ್ಯತೆ ಇದೆ. ಆದರೆ, ಬಲವಂತವಾಗಿ ಅವನು ಕೊಂದು ಹಾಕಿ ತಾನೂ ಸತ್ತಿರುವ ಸಾಧ್ಯತೆಗಳು ಇವೆ. ಇದರ ಜತೆಗೆ ಕ್ಯಾನ್ಸರ್ ಹೊರತಾದ ಬೇರೆ ಕಾರಣಗಳು ಇರಬಹುದೇ ಎಂದು ಪೊಲೀಸರು ಹುಡುಕುತ್ತಿದ್ದಾರೆ. ಆದರೆ, ಮಹೇಶ ತಾನು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಕ್ಯಾನ್ಸರ್‌ನ ಕಾರಣವನ್ನೇ ಕೊಟ್ಟಿದ್ದಾರೆ. ಮುಂದಿನದು ಪೊಲೀಸ್ ತನಿಖೆಯಲ್ಲಿದೆ. ಏನೇ ಇದ್ದರೂ, ಕ್ಯಾನ್ಸರೇ ಆಗಿದ್ದರೂ ಹೆಂಡತಿ ಮತ್ತು ಮಗನನ್ನು ಅವರು ಕೊಲ್ಲಬಾರದಿತ್ತು. ಅವರು ಹೇಗಾದರೂ ಬದುಕುತ್ತಿದ್ದರು ಎಂದು ಅಕ್ಕಪಕ್ಕದ ಮನೆಯವರು ಮಾತನಾಡಿಕೊಳ್ಳುತ್ತಿದ್ದಾರೆ.
ಜ್ಯೋತಿ ಮನೆಯವರಿಂದ ಕೊಲೆ ದೂರು
ಈ ಮಧ್ಯೆ ಮೃತ ಮಹಿಳೆ ಜ್ಯೋತಿ ಅವರ ಸಹೋದರ ಅಂಕೇಗೌಡ ಕೋಣನಕುಂಟೆ ಠಾಣೆಯಲ್ಲಿ ಕೊಲೆ ದೂರು ನೀಡಿದ್ದಾರೆ. ಮಹೇಶ್ ಇಬ್ಬರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ಆತ್ಮಹತ್ಯೆ ಮಾಡಿಕೊಂಡಿರುವ ಮಹೇಶ್ ಗುರುವಾರ ಬೆಳಗ್ಗೆಯೂ ವೈದ್ಯರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ. ಅವರಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದ್ದರೆನ್ನಲಾಗಿದೆ. ಈ ಮಧ್ಯೆ ಮಹೇಶ್ ಅವರು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ʻತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿʼ ಎಂದು ಸಹೋದರರನ್ನು ಉಲ್ಲೇಖಿಸಿ ಮನವಿ ಮಾಡಲಾಗಿದೆ. ʻʻನನ್ನ ಹೆಸರಲ್ಲಿ ಒಂದು ಲಕ್ಷ ಎಫ್ ಡಿ ಇದೆ. ನೀವು ಸಮಾನವಾಗಿ ಹಂಚಿಕೊಳ್ಳಿ. ಒಂದಷ್ಟು ಸಾಲ ಕೊಟ್ಟಿದ್ದು ವಾಪಸ್ ಬರಬೇಕಾಗಿದೆ. ಅದನ್ನೂ ಹಂಚಿಕೊಳ್ಳಿʼʼ ಎಂದು ಹೇಳಲಾಗಿದೆ.
ಮಹೇಶ್ ಸ್ನೇಹಿತರಿಂದ ಕಣ್ಣೀರು
ʻʻಮಹೇಶ್ ತುಂಬಾ ಒಳ್ಳೆಯ ಮನುಷ್ಯ. ಆತ ಸಾಕಷ್ಟು ಜನರಿಗೆ ಸಹಾಯ ಮಾಡ್ತಿದ್ದ. ಕುಟುಂಬದಲ್ಲಿ ಯಾವುದೇ ವೈಮನಸ್ಯ ಇರಲಿಲ್ಲ. ಒಂದೊಂದ್ಸಲ ಸಾಕಷ್ಟು ವೀಕಾಗಿ ಇರ್ತಿದ್ದ. ಆಗ ನಾವೇ ಒಂದು ಸಲ ಆಸ್ಪತ್ರೆಗೆ ಹೋಗಿ ತೋರಿಸಿಕೋ ಎಂದು ಹೇಳಿದ್ದೆವು. ಅವನು ಯಾರ ಬಳಿ ಕೂಡ ಏನೂ ಹೇಳಿಕೊಳ್ಳುತ್ತಿರಲಿಲ್ಲʼʼ ಎಂದು ಅವರ ಸ್ನೇಹಿತರು ಹೇಳಿಕೊಂಡಿದ್ದಾರೆ. ಮಳವಳ್ಳಿ ಬಳಿಯ ಗಾಜನೂರು ಬಳಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಅಂಬರೀಷ್ ಅಪ್ಪಟ ಅಭಿಮಾನಿ
ಮಹೇಶ್ ಅವರು ಅಂಬರೀಷ್ ಅವರ ಅಪ್ಪಟ ಅಭಿಮಾನಿ ಎಂದು ತಿಳಿದುಬಂದಿದೆ. ಅಂಬರೀಷ್ ಜತೆಗೆ ತೆಗೆದುಕೊಂಡಿರುವ ಚಿತ್ರಗಳೂ ಇದಕ್ಕೆ ಸಾಕ್ಷಿಯಾಗಿವೆ. ʻʻಸಾಕಷ್ಟು ಬಾರಿ ಅಂಬರೀಷ್ ಅವರ ಮನೆಗೆ ಹೋಗಿದ್ವಿ. ಅವ್ರು ಕೂಡ ತಮ್ಮ ಮನೆಯವರಂತೇ ನೋಡಿಕೊಳ್ತಿದ್ರು. ಮಹೇಶ್ ಕುಟುಂಬವೇ ಅಂಬರೀಷ್ ಅವರ ಅಭಿಮಾನಿಯಾಗಿತ್ತುʼʼ ಎಂದು ಗೆಳೆಯರು ತಿಳಿಸಿದ್ದಾರೆ. ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರು ಕಿಮ್ಸ್ ಆಸ್ಪತ್ರೆಗೆ ಬಂದು ಮಹೇಶ್ ಕುಟುಂಬದ ಅಂತಿಮ ದರ್ಶನ ಪಡೆದರು.
ಈ ಹಿಂದಿನ ಸುದ್ದಿ |Family suicide| ಕ್ಯಾನ್ಸರ್ ವಕ್ಕರಿಸಿದ ಚಿಂತೆ: ಪತ್ನಿ, ಮಗುವಿಗೆ ವಿಷ ನೀಡಿ ತಾನೂ ನೇಣಿಗೆ ಶರಣಾದ