ಹಾವೇರಿ: ಒಂದೇ ಮನೆಯಲ್ಲಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ (Family suicide) ಮಾಡಿಕೊಂಡ ದಾರುಣ ಘಟನೆಯೊಂದು ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ಕೇವಲ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಕಿರಣ್ (೨೧), ಅವನ ಪತ್ನಿ ಸೌಜನ್ಯ (೨೦) ಮತ್ತು ಕಿರಣ್‌ನ ತಾಯಿ ಭಾರತಿ ಕಮದೊಳ್ಳಿ (೪೦) ಪ್ರಾಣ ಕಳೆದುಕೊಂಡವರು.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಯಾರೂ ಮನೆಯಿಂದ ಹೊರಗೆ ಬಾರದೆ ಇರುವುದನ್ನು ಕಂಡು ಪಕ್ಕದ ಮನೆಯವರು ಗಮನಿಸಿದಾಗ ಮೂವರೂ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ತಮ್ಮ ಪರಾರಿಯಾಗಿದ್ದು ಕಾರಣವೇ?
ಕೇವಲ ಮೂರು ತಿಂಗಳ ಹಿಂದಷ್ಟೇ ಹೊಸ ಬಾಳಿನ ಹೊಸಿಲು ತುಳಿದು ಸಂಭ್ರಮಿಸಿದ್ದ ಕಿರಣ್ ಮತ್ತು ಸೌಜನ್ಯ ಜೋಡಿ ಚೆನ್ನಾಗಿಯೇ ಇದ್ದರು. ಅತ್ತೆಯಾಗಿ ಭಾರತಿ ಅವರು ಸೊಸೆಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಈ ನಡುವೆ, ಅಲ್ಲೊಂದು ಘಟನೆ ನಡೆದಿದೆ.
ಅದೇನೆಂದರೆ, ಕಿರಣ್‌ನ ತಮ್ಮ ಅರುಣ್ ಒಬ್ಬ ಹುಡುಗಿಯನ್ನು ಕರೆದುಕೊಂಡು ಪರಾರಿಯಾಗಿದ್ದ. ಆರು ದಿನಗಳ ಹಿಂದೆ ಅವರಿಬ್ಬರೂ ನಾಪತ್ತೆಯಾಗಿದ್ದರು. ಇದರಿಂದ ಕೆಂಡಾಮಂಡಲರಾದ ಯುವತಿ ಮನೆಯವರು ಕಿರಣ್‌ನ ಮನೆಗೆ ಬಂದು ಸಿಕ್ಕಾಪಟ್ಟೆ ಜಗಳ ಮಾಡಿದ್ದಾರೆ. ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಜತೆಗೆ ಕಿರಣ್‌ನ ತಂದೆಯನ್ನು ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆ.
ಈ ನಡುವೆ ಕಿರಣ್ ಕೂಡಾ ತಮ್ಮನನ್ನು ಸಂಪರ್ಕಿಸಲು ಪ್ರಯತ್ನಿಸಿ ಸೋಲು ಕಂಡಿದ್ದಾನೆ. ಇದೆಲ್ಲ ವಿಚಾರಗಳಿಂದ ಮನನೊಂದ ಕುಟುಂಬದ ಸಾವಿಗೆ ಶರಣಾಗಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಗೌರಮ್ಮ ಜತೆಗಿನ ಅರುಣನ ಪ್ರೀತಿ ಕುಟುಂಬಕ್ಕೆ ಮುಳುವಾಯಿತು
ಖಾಸಗಿ ಸಹಕಾರಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅರುಣ ಅಗಡಿ ಗ್ರಾಮದ ಪಟ್ಟಣಶೆಟ್ಟಿ ಕುಟುಂಬಕ್ಕೆ ಸೇರಿದ ಯುವತಿ ಗೌರಮ್ಮ ಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಪಟ್ಟಣಶೆಟ್ಟಿ ಕುಟುಂಬದ ವಿರೋಧವಿತ್ತು. ಗೌರಮ್ಮ ಮತ್ತು ಅರುಣ ಐದಾರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಮಗಳನ್ನು ಕರೆ ತರುವಂತೆ ಅರುಣನ ಕುಟುಂಬದವರಿಗೆ ಪಟ್ಟಣಶೆಟ್ಟಿ ಫ್ಯಾಮಿಲಿ ತೀವ್ರ ಕಿರುಕುಳ ನೀಡಿದೆ. ಈ ವಿಚಾರವನ್ನು ಸ್ವತಃ ಅರುಣ್‌ನ ತಂದೆ ವಿರೂಪಾಕ್ಷಪ್ಪ ಹೇಳಿದ್ದಾರೆ. ಈ ನಿತ್ಯ ಕಿರುಕುಳದಿಂದ ನೊಂದ ಕುಟುಂಬ ಪ್ರಾಣ ತ್ಯಾಗ ಮಾಡಿದೆ.
ಈಗಲಾದರೂ ವರುಣ್ ಮರಳಿ ಬರುತ್ತಾನಾ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ರಾಮಾನುಜನ್ ಎಂಬ ದೈವದತ್ತ ಗಣಿತ ಪ್ರತಿಭೆ ಚೆನ್ನೈ ಬಂದರಿನಲ್ಲಿ ಮೂಟೆ ಲೆಕ್ಕ ಮಾಡುತ್ತಿತ್ತು!