ಚಾಮರಾಜನಗರ: ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು (Family suicide) ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ (Chamaraja nagara news) ನಡೆದಿದೆ.
ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಮಹದೇವಸ್ವಾಮಿ (48), ಸವಿತಾ (40), ಸಿಂಚನಾ (13) ಎಂದು ಗುರುತಿಸಿದ್ದಾರೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಶುಕ್ರವಾರ ಬೆಳಗ್ಗೆ ಪಕ್ಕದ ಮನೆಯವರು ಮನೆಗೆ ಹೋದಾಗ ಮನೆಯಲ್ಲಿದ್ದ ಮೂವರೂ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಇವರ ಕುಟುಂಬಗಳ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತಿತ್ತು ಎಂದು ಹೇಳಲಾಗಿದೆ. ಆದರೆ, ಸಾವಿಗೆ ಅದೇ ಕಾರಣವಾಯಿತು ಎನ್ನಲಾಗಿದೆ.
ಡೆತ್ ನೋಟ್‌ನಲ್ಲಿ ಬರೆದಿದ್ದೇನು?
ಸಾವಿಗೆ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ, ತಮ್ಮ ಅಕ್ಕ ಬಾವಂದಿತೇ ನಮ್ಮ ಸಾವಿಗೆ ಕಾರಣ ಎಂದು ಮಹದೇವಸ್ವಾಮಿ ಬರೆದಿದ್ದಾರೆ.
ಅಕ್ಕ ಮಂಜುಳಾ ಬಾವ ಮಲ್ಲೇಶ್, ಮಹದೇವಪ್ಪ, ತಾಯಿ ದೇವಿರಮ್ಮ ಅವರಿಗೆ ಶಿಕ್ಷೆಯಾಗಬೇಕು. ನಮ್ಮ ಆಸ್ತಿಯನ್ನು ಯಾವ ಕಾರಣಕ್ಕೂ ಇವರಿಗೆ ನೀಡಬೇಡಿ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಮೃತ ಮಹದೇವಸ್ವಾಮಿ.
ಸದ್ಯ ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಯುವತಿ ಸಾವು
ಬೆಂಗಳೂರಿನಲ್ಲಿ 27 ವರ್ಷದ ಯುವತಿಯೊಬ್ಬಳು ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಅಮೃತಾ ಶರ್ಮ (27) ಎಂಬಾಕೆಯೇ ಸಾವನ್ನಪ್ಪಿದ ಯುವತಿ. ಬೆಂಗಳೂರಿನ ಯಲಹಂಕ ಬಳಿಯ ನಾಗೇನಹಳ್ಳಿಯಲ್ಲಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಯುವತಿ ಅಪಾರ್ಟ್‌ಮೆಂಟ್ ಹತ್ತನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ.
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಜಯನಗರ, ಕುಶಾಲನಗರದಲ್ಲಿ ಪ್ರತ್ಯೇಕ ಅಪಘಾತ, ನಾಲ್ಕು ಮಂದಿಯ ಸಾವು
ವಿಜಯನಗರ: ಹೊಸಪೇಟೆ ತಾಲೂಕಿನಲ್ಲಿ ಮೂರು ಪ್ರತ್ಯೇಕ ಅಪಘಾತಗಳು ಸಂಭವಿಸಿ, ಮೂವರು ಸಾವಿಗೀಡಾಗಿದ್ದಾರೆ.
ಮಹೀಂದ್ರಾ ಪಿಕಪ್ ವಾಹನ ಹಿಂಬದಿ ಲಾಕ್ ಕಟ್ ಆಗಿ ಬಿದ್ದು ವ್ಯಕ್ತಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿಯನ್ನು ರಾಮಾಂಜನೇಯ (35) ಎಂದು ಗುರುತಿಸಲಾಗಿದೆ.
ಹೊಸಪೇಟೆ ತಾಲೂಕಿನ ಕಡ್ಡಿರಾಂಪೂರ ಹೋಬಳಿಯ ಕೊಟಗಿನಹಾಳ್ ಬಳಿ ಮತ್ತೊಂದು ಅಪಘಾತ ಸಂಭವಿಸಿದ್ದು, ಬೈಕ್ ಉರುಳಿ ಬಿದ್ದು ಹಿಂಬದಿ ಕುಳಿತಿದ್ದ ಶ್ವೇತಾಬಾಯಿ (28) ಎಗರಿ ಬಿದ್ದು ಮೃತಪಟ್ಟಿದ್ದಾರೆ. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಬಳಿ ಕಾರು ಡಿಕ್ಕಿ ಹೊಡೆದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಹೋಬಳಿಯ ಅಂಬೇಡ್ಕರ್ ವೃತ್ತದ ಬಳಿ ನಡೆದ ದುರ್ಘಟನೆಯಲ್ಲಿ ಮೃತರಾದ ವ್ಯಕ್ತಿ ವೆಂಕಟಾಪೂರ ಗ್ರಾಮದ ಕೆಂಚಪ್ಪ (65) ಎಂದು ಗುರುತಿಸಲಾಗಿದೆ. ಕಾರು ಚಾಲಕಿ ಆಲವೇಲು ಎಂಬವರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಬೈಕ್ ಸವಾರನ ಮೇಲೆಯೇ ಲಾರಿ ಹರಿದ ಪರಿಣಾಮ ದೇಹ ಎರಡು ತುಂಡಾಗಿದೆ.
ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಬೈಕ್‌ಗೆ ಕೂಡಿಗೆ ಕಡೆಯಿಂದ ಕಾಫೀ ವರ್ಕ್ಸ್ ಕಡೆಗೆ ಬರುತ್ತಿದ್ದ 10 ವೀಲ್ ಲಾರಿ ಡಿಕ್ಕಿಯಾಗಿವೆ. ಕುಶಾಲನಗರದಿಂದ ಕೆಲಸ ಮುಗಿಸಿ ರೂಮ್‌ಗೆ ತೆರಳುತ್ತಿದ್ದ ಬೈಕ್ ಸವಾರ ಗಂಗಾಧರ ಸಾವಿಗೀಡಾಗಿದ್ದಾರೆ. ಹಾಸನ ಜಿಲ್ಲೆಯ ಅರಸಿಕೆರೆ ನಿವಾಸಿ ಗಂಗಾಧರ ಕುಶಾಲನಗರದಲ್ಲಿ ವಿದ್ಯುತ್ ಕಂಬ ನೆಡುವ ಕೆಲಸ ಮಾಡುತ್ತಿದ್ದರು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: Free Bus Service: ಮಹಿಳೆಯರ ಫ್ರೀ ಓಡಾಟದಿಂದ ಜಾಗವೇ ಇಲ್ಲ; ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ