ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹಾಗೂ ಅವರ ಅಭಿನಯದ ಕೊನೇ ಚಿತ್ರ ಗಂಧದ ಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನ ಭಾಗವಾಗಿ ಏರ್ಪಡಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಲ್ಲೇಶ್ವರ ನಿವಾಸಿಯಾಗಿರುವ ಗಿರಿರಾಜ್ ಮೃತ ದುರ್ದೈವಿ.
ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಗಿರಿರಾಜ್, ಶುಕ್ರವಾರ ಸಂಜೆ ಟಿವಿಯಲ್ಲಿ ಪ್ರಸಾರವಾಗಿದ್ದ “ಪುನೀತ ಪರ್ವ” ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದ್ದರು. ಹೀಗೆ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುವಾಗಲೇ ಭಾವುಕರಾದ ಗಿರಿರಾಜ್, “ಎಂಥ ಮನುಷ್ಯ… ಇನ್ನೂ ಬಾಳಿ ಬದುಕಬೇಕಿತ್ತು, ಇಷ್ಟು ಅಲ್ಪಾಯುಷ್ಯಕ್ಕೆ ತೀರಿಹೋದರು” ಎಂದು ಕಣ್ಣೀರು ಹಾಕಿದರು.
ಬಾತ್ ರೂಮಿನಲ್ಲಿ ಕುಸಿದು ಬಿದ್ದರು
ಮಗ ಗಿರಿರಾಜನಿಗೆ ಅಪ್ಪು ಎಂದರೆ ಅಭಿಮಾನ. ದಿನ ಅಪ್ಪು ಫೋಟೊಗೆ ಪೂಜೆ ಮಾಡುತ್ತಿದ್ದ. ಶುಕ್ರವಾರ ಪುನೀತ ಪರ್ವ ಕಾರ್ಯಕ್ರಮ ನೋಡಿ ಬೇಸರಗೊಂಡಿದ್ದ. “ಛೇ ಇಂತ ಮನುಷ್ಯ ತೀರಿ ಹೋದ..” ಎಂದು ಪದೇ ಪದೇ ಹೇಳುತ್ತಿದ್ದ. ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ಬಾತ್ ರೂಂಗೆ ಹೋದವನು ಅಲ್ಲೇ ಕುಸಿದು ಬಿದ್ದ. ಕೂಡಲೇ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಷ್ಟರಲ್ಲಿ ಮಗ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದರು ಎಂದು ಗಿರಿರಾಜ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ 3 ಗಂಟೆ ವೇಳೆಗೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸುವುದಾಗಿ ತಿಳಿಸಿದರು.
ತಾಯಿ ಕೈ ತುತ್ತು ಸವಿದಿದ್ದ ಗಿರಿರಾಜ್
ಪುನೀತ ಪರ್ವ ಕಾರ್ಯಕ್ರಮದ ಒಂದು ತುಣುಕು ನೋಡಿದ ಗಿರಿರಾಜ್ ಬೇಸರಗೊಂಡಿದ್ದರು. ನನಗೂ ಊಟ ಮಾಡಿಸು ಅಮ್ಮ ಎಂದಿದ್ದರಂತೆ. ಬಳಿಕ ಕಾರ್ಯಕ್ರಮವನ್ನು ನೋಡುತ್ತಲೇ ಅಮ್ಮನ ಕೈ ತುತ್ತು ತಿಂದಿದ್ದರು. ಇದನ್ನು ನೆನೆದು ಗಿರಿರಾಜ್ ತಾಯಿ ಜಯಮ್ಮ ಮಗನ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ನಿನ್ನೆ ತಾನೇ ಕೈ ತುತ್ತು ತಿನ್ನಿಸಿಕೊಂಡು ಹೋದ್ಯಲ್ಲೋ..” ಎಂದು ಕಣ್ಣೀರಿಟ್ಟರು. ತಾಯಿಯ ಆಕ್ರಂದನ ಎಂತಹವರನ್ನೂ ಕರುಳು ಹಿಂಡುವಂತೆ ಮಾಡಿತ್ತು.
ಇದನ್ನೂ ಓದಿ | Puneeth Parva | ಗಂಧದ ಗುಡಿಗೆ ಅಮಿತಾಭ್ ಬಚ್ಚನ್ ಹಾರೈಕೆ, ಸಂಭ್ರಮದೊಂದಿಗೆ ʼಪುನೀತ ಪರ್ವʼ ಸಮಾರೋಪ