ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಲು ಶನಿವಾರ (ಮೇ 20) ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿದೆ. ಇದೇ ವೇಳೆ ಹಲವು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ನೆಚ್ಚಿನ ನಾಯಕರು ಸಚಿವರಾಗಲಿ ಎಂದು ಅಭಿಮಾನಿಗಳು ವಿವಿಧ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ದೇಗುಲಗಳಲ್ಲಿ ವಿಶೇಷ ಪೂಜೆ, ಉರುಳು ಸೇವೆ ಹಾಗೂ ಮುಡಿ ಕೊಟ್ಟು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.
ರೋಣ ಕ್ಷೇತ್ರದಲ್ಲಿ ಭೀಮಾಂಬಿಕೆ ದೇವಿಗೆ ವಿಶೇಷ ಪೂಜೆ
ಗದಗ: ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಅಭಿಮಾನಿಗಳು ಕೈ ನಾಯಕರನ್ನು ಒತ್ತಾಯಿಸಿದ್ದಾರೆ. ಜತೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ರೋಣ ಮತಕ್ಷೇತ್ರದ ನಿಡಗುಂದಿ ಗ್ರಾಮದ ಭೀಮಾಂಬಿಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿರುವ ಅಭಿಮಾನಿಗಳು, ಈಡುಗಾಯಿ ಒಡೆದು, ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ ಹರಕೆ ಕಟ್ಟಿಕೊಂಡಿದ್ದಾರೆ.
ಇದನ್ನೂ ಓದಿ | KCET 2023 : ಸಿಇಟಿಯಂದೇ ಪ್ರಮಾಣ; ಇದೇ ದಿನ ಬೇಕಿತ್ತಾ ಎಂದು ಪ್ರಶ್ನಿಸಿದ ಸಂತೋಷ್
ಧರ್ಮಸ್ಥಳದಲ್ಲಿ ಮುಡಿ ಕೊಟ್ಟ ಗುಬ್ಬಿ ಶಾಸಕ ಶ್ರೀನಿವಾಸ್ ಅಭಿಮಾನಿಗಳು
ತುಮಕೂರು: ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಚನೆ ಕಸರತ್ತು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್‌ಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಶಾಸಕ ವಾಸು ಅಭಿಮಾನಿಗಳು, ಧರ್ಮಸ್ಥಳದ ಶ್ರೀ ಮಂಜುನಾಥನಿಗೆ ಹರಕೆ ಹೊತ್ತು, ಉರುಳು ಸೇವೆ ಮಾಡಿ, ಮುಡಿ ಕೊಟ್ಟಿದ್ದಾರೆ. ಸತತ 5 ಬಾರಿ ಶಾಸಕರಾಗಿರುವ ಎಸ್.ಆರ್. ಶ್ರೀನಿವಾಸ್‌ಗೆ ಸಚಿವ ಸ್ಥಾನ ಸಿಗಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್‌ಗೆ ಮಂತ್ರಿ ಸ್ಥಾನ ನೀಡಿ: ಸಿದ್ದರಾಮಯ್ಯಗೆ ಬಲಿಜ ವಕೀಲರ ವೇದಿಕೆ ಮನವಿ
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್‌ಗೆ ಮಂತ್ರಿಸ್ಥಾನ ನೀಡಬೇಕು ಎಂದು ಕರ್ನಾಟಕ ಬಲಿಜ ವಕೀಲರ ವೇದಿಕೆಯಿಂದ ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ರಾಜ್ಯಕ್ಕೆ ಪ್ರದೀಪ್ ಈಶ್ವರ್ ಸೇವೆ ಅಗತ್ಯವಿದೆ, ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವೇದಿಕೆ ಮನವಿ ಮಾಡಿದೆ.
ಇದನ್ನೂ ಓದಿ | Karnataka Cabinet : ದಿಲ್ಲಿಯಲ್ಲಿ ಸಂಪುಟ ರಚನೆಗೆ ಕಸರತ್ತು; ಈ ಬಾರಿ ಅವಕಾಶ ಪಡೆಯುವ ಹೊಸಬರೆಷ್ಟು?
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನಕ್ಕೆ ಆಗ್ರಹ
ರಾಯಚೂರು: ರಾಯಚೂರು ಜಿಲ್ಲೆಯಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿದೆ. ಈ ಪೈಕಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಸಿಂಧನೂರಿನಿಂದ ಅಂಬಾಮಠದವರೆಗೂ ಅಭಿಮಾನಿಗಳು ಪಾದಯಾತ್ರೆ ನಡೆಸಿದ್ದಾರೆ. ಹಿರಿಯ ನಾಯಕ ಹಂಪನಗೌಡ ಬಾದರ್ಲಿ ಸಚಿವ ಸ್ಥಾನಕ್ಕೆ ಅರ್ಹರು. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಅ ಒತ್ತಾಯಿಸಿದ್ದಾರೆ.