ಕೊಪ್ಪಳ: ಒಂದು ಕಡೆ ಕಾಂಗ್ರೆಸ್ ಪಕ್ಷದೊಳಗಿನ ಸಿದ್ದರಾಮಯ್ಯ ಬಣದ ಶಾಸಕರು ನಾಯಕರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಹಠ ಮಾಡುತ್ತಿದ್ದರೆ ಇತ್ತ ಅಭಿಮಾನಿಗಳು ದೇವರ ಮೊರೆ ಹೊಕ್ಕಿದ್ದಾರೆ. ಕೊಪ್ಪಳದ ಗ್ರಾಮವೊಂದರಲ್ಲಿ ನಡೆದ ಜಾತ್ರೆಯ ವೇಳೆ ಅಭಿಮಾನಿಗಳು ರಥಕ್ಕೆ ಬಾಳೆಹಣ್ಣು ಎಸೆದು ದೇವರಲ್ಲಿ ಕೋರಿಕೆ ಮಂಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ, ಬಸವರಾಜ್ ರಾಯರೆಡ್ಡಿ ಶಾಸಕರಾಗಲಿ ಎಂಬ ಬೇಡಿಕೆಯೂ ಇದೆ.
ಸಿದ್ದು ಸಿಎಂ ಆದರೆ ಬಸವರಾಜ್ ರಾಯರೆಡ್ಡಿ ಮುಂದಿನ ಹಣಕಾಸು ಸಚಿವರು ಎಂದು ಬಾಳೆ ಹಣ್ಣಿನ ಮೇಲೆ ಬರೆದಿದ್ದಾರೆ ಅಭಿಮಾನಿಗಳು. ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ರೀತಿ ಅಭಿಮಾನವನ್ನು ತೋರಿಸಿಕೊಳ್ಳುವುದು ಮತ್ತು ಕೋರಿಕೆ ಇಡುವ ಪದ್ಧತಿ ಇದೆ. ಸಾಮಾನ್ಯವಾಗಿ ದೇವರ ಮುಂದೆ ನಮ್ಮ ವೈಯಕ್ತಿಕ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತೇವೆ. ಅದರೆ, ಇಲ್ಲಿ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ, ಬಸವರಾಜ ರಾಯರೆಡ್ಡಿ ಅವರಿಗೆ ಒಳ್ಳೆಯದಾಗಲಿ ಎಂದು ಕೇಳಿಕೊಂಡಿರುವುದು ವಿಶೇಷ.
ಇದನ್ನೂ ಓದಿ| ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುತ್ತೇನೆ: ಸಚಿವ ಶ್ರೀರಾಮುಲು ಹೇಳಿಕೆ