ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ನಿಬಂಧನೆ ಹಾಕಲಾಗುತ್ತದೆ, ದಾರಿಯಲ್ಲಿ ಹೋಗುವವರಿಗೆಲ್ಲ ಕೊಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿರುವುದು ಸರ್ಕಾರದ ಬಣ್ಣವನ್ನು ಬಲು ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ಸಭೆಯಯ ನಿರ್ಧಾರದ ಕುರಿತು ತಮ್ಮ ಮನೆಯ ಬಳಿ ಸುದ್ದಿಗಾರರೊಂದಿಗೆ ಬೊಮ್ಮಾಯಿ ಮಾತನಾಡಿದರು. ಕಾಂಗ್ರೆಸ್ ಸಚಿವ ಸಂಪುಟ ಕರ್ನಾಟಕ ಜನತೆಗೆ ನಿರಾಸೆ ತಂದಿದೆ. ಗ್ಯಾರಂಟಿ ಯೋಜನೆಗಳು ಯಾವಾಗ ಶುರುವಾಗುತ್ತವೆ ಎಂದು ಹೇಳಲಿಲ್ಲ. ಮುಂದಿನ ಕ್ಯಾಬಿನೆಟ್‌ನಲ್ಲಿ ಹೇಳ್ತಿವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹಣಕಾಸಿನ ಸ್ಥಿತಿ ಗತಿ ಬಗ್ಗೆ ಮಾತನಾಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮೊದಲು ಎಲ್ಲ ಸರ್ಕಾರಗಳೂ ಒಂದು ಲಕ್ಷ ಕೋಟಿ ರೂ. ಸಾಲ ಮಾಡಿದ್ದವು. ಸಿದ್ದರಾಮಯ್ಯ ಬಂದ ನಂತರ ಎಷ್ಟು ಸಾಲ ಮಾಡಿದ್ದಾರೆ ಅಂತ ಗೊತ್ತಿದೆ. ಇನ್ನೂ ಫಲಾನುಭವಿಗಳ ಮಾಹಿತಿ ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇದೆಲ್ಲ ಮಾಹಿತಿ ಈಗಾಗಲೆ ಸರ್ಕಾರದ ಬಳಿ ಇದೆ, ಮನಸ್ಸಿದ್ದರೆ ಮಾರ್ಗ, ಇಲ್ಲದಿದ್ದರೆ ನೆಪ ಎಂದು ಹರಿಹಾಯ್ದರು.
ಕಾಂಗ್ರೆಸ್ ಘೋಷಣೆಗೆ ಜನ ಕಾದು ಕೂತಿದ್ದರು. ಬಸ್ ಓಡಾಟ ಇರಬಹುದು, ಗೃಹಿಣಿಯರು ಇರಬಹುದು, ಎಲ್ಲರೂ ಕಾಯ್ತಾ ಇದ್ದರು. ಆದರೆ ಸ್ಪಷ್ಟತೆ ಇಲ್ಲದ ಘೋಷಣೆ ಇದು. ಜನರ ಭರವಸೆ ಹುಸಿ ಆಗಿದೆ.
ದಾರಿಯಲ್ಲಿ ಹೋಗೊರಿಗೆ ಕೊಡೊಕ್ಕೆ ಆಗುತ್ತಾ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಾರಿಯಲ್ಲಿ ಹೋಗುವವರೂ ಸೇರಿ ಚುನಾವಣೆಯಲ್ಲಿ ಎಲ್ಲರೂ ಮತ ಹಾಕಿದ್ದಾರೆ. ಮತದಾರರನ್ನು ಎಷ್ಟು ಗೌರವಿಸುತ್ತಾ ಇದ್ದಾರೆ ನೋಡಿ. ಚುನಾವಣೆಗೆ ಮುನ್ನ ಚುನಾವಣೆ ಬಳಿಕ ಕಾಂಗ್ರೆಸ್ ಹೇಳಿಕೆ ನೋಡಿದರೆ ಬಣ್ಣ ಬಳಸಲಾಯಿಸುತ್ತಾ ಇದ್ದಾರೆ ಎಂದು ತಿಳಿಯುತ್ತಿದೆ ಎಂದರು.