Site icon Vistara News

ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್‌ ಈಗ ಏನು ಮಾಡಬಹುದು?

ಕೋಡಿಹಳ್ಳಿ ಚಂದ್ರಶೇಖರ್‌

ಅರವಿಂದ್‌ ಕೇಜ್ರಿವಾಲ್‌ ಅವರೊಂದಿಗೆ ಕೋಡಿಹಳ್ಳಿ ಚಂದ್ರಶೇಖರ್‌

ಬೆಂಗಳೂರು: ಇತ್ತೀಚೆಗಷ್ಟೇ ಆಮ್‌ ಆದ್ಮಿ ಪಕ್ಷ‌ ಸೇರಿದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಸಿರು ಶಾಲು ಹೊದ್ದು, ರೈತ ನಾಯಕ ದಿವಂಗತ ಪ್ರೊ. ನಂಜುಂಡಸ್ವಾಮಿಯವರಂತೆ ಸರ್ಕಾರವನ್ನು, ರೈತ ವಿರೋಧಿಗಳನ್ನು ತಿವಿಯುತ್ತಿದ್ದ ಕೋಡಿಹಳ್ಳಿಯವರ ಮೇಲೆ ರೈತ ಸಂಘ ಮತ್ತು ಕೆಎಸ್‌ಆರ್‌ಟಿಸಿ ನೌಕರರು ತಿರುಗಿ ಬಿದ್ದಿದ್ದಾರೆ. ಹೋರಾಟವನ್ನೇ ಮಾರಿಕೊಳ್ಳುತ್ತಿರುವ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಹಿಂದೊಮ್ಮೆ ರೈತ ಸಂಘ ಇಬ್ಭಾಗವಾಗಿದ್ದಾಗ ಒಂದು ಬಣದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಮತ್ತೊಂದು ಬಣದ ನಾಯಕರು ʼಡೀಲ್‌ ಲೀಡರ್‌ʼ ಎಂದೇ ದೂಷಿಸಿದ್ದರು. ಬೆಂಗಳೂರಿನಲ್ಲಿಯೇ ಬೀಡು ಬಿಟ್ಟು, ರಾಜಕಾರಣಿಗಳೊಂದಿಗೇ ಹೆಚ್ಚಾಗಿ ಓಡಾಡಿಕೊಂಡಿರುವ ಕೋಡಿಹಳ್ಳಿ ಅದು ಹೇಗೆ ರೈತ ನಾಯಕರಾಗುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿ ಬಂದ್ದಿದ್ದವು. ಈಗ ಕೋಡಿಹಳ್ಳಿ ಚಂದ್ರದೇಖರ್‌ ಹಸಿರು ಶಾಲು ಹೊದ್ದು ಓಡಾಡಬಾರದು, ಹಾಗೇನಾದರೂ ಮಾಡಿದರೆ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿಯೇ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಹಸಿರು ಸೇನೆ ಎಚ್ಚರಿಕೆ ನೀಡಿದೆ.

ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಲು ಪ್ರೆಸ್‌ ಕ್ಲಬ್‌ಗೆ ಆಗಮಿಸಿದ ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಮಸಿ ಎರಚಲಾಗಿದೆ. ಈ ಸಂದರ್ಭದಲ್ಲಿ ಚಂದ್ರಶೇಖರ್‌ ಜತೆಗಿದ್ದ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರ ನಡುವೆ ಹೊಡೆದಾಟ ನಡೆದಿದೆ. ಕಲ್ಲು, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದು, ಇದನ್ನು ತಪ್ಪಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಪ್ರತಿಭಟನೆ ನಡೆಸಿದವರು ಜೆಡಿಎಸ್‌ ಕಾರ್ಯಕರ್ತರು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಜತೆಗಿದ್ದವರು ದೂರಿದ್ದಾರೆ.

ವಿವಾದಗಳಿಂದಾಗಿಯೇ ಸುದ್ದಿಯಲ್ಲಿರುವ ನಾಯಕ

ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿರುವ ಕೋಡಿಹಳ್ಳಿ ಚಂದ್ರಶೇಖರ್‌ ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಕೋಡಿಹಳ್ಳಿಯ ಚಿಕ್ಕ  ರೈತ ಕುಟುಂಬದಿಂದ ಬಂದವರು. ರೈತ ಸಂಘದ ಚಳವಳಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಭಾಗವಹಿಸುತ್ತಲೇ ನಾಯಕರಾಗಿ ಬೆಳೆದವರು. ಪ್ರೊ. ನಂಜುಂಡಸ್ವಾಮಿಯವರ ಆಪ್ತರಾಗಿ ಹಲವಾರು ರೈತ ಹೋರಾಟ ಕಟ್ಟಿದವರು. ರೈತ ಸಂಘದಲ್ಲಿದ್ದಾಗಲೂ ಅವರ ನಡೆ ಹಲವಾರು ಬಾರಿ ವಿವಾದಕ್ಕೊಳಗಾಗಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಅವರು 2 ಎಕರೆ ಐದು ಗುಂಟೆ ಜಮೀನು ಹೊಂದಿರುವುದಾಗಿ ಪ್ರಕಟಿಸಿದ್ದರು.

ಮೈಸೂರಿನಲ್ಲಿ ರೈತ ಸಂಘದ ಪ್ರತಿಭಟನೆ

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕೋಡಿಹಳ್ಳಿ ಚಂದ್ರಶೇಖರ್‌  ಐಷಾರಾಮಿ ಮನೆ, ಕಾರು, ಹೊಂದಿದ್ದಾರೆ. ಅವರ ಮಕ್ಕಳು ಸಹ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ರೈತ ಸಂಘದ ಕಾರ್ಯಕರ್ತರದ್ದು. ಅವರ ವಿರುದ್ಧ ಈಗ ಕೋಲಾರ, ಮೈಸೂರು, ಚಿತ್ರದರ್ಗ ಸೇರಿದಂತೆ ಹಲವೆಡೆ ರೈತರ ಪ್ರತಿಭಟನೆಗಳು ನಡೆದಿವೆ. ಹೋರಟವನ್ನು ಮಾರಿಕೊಳ್ಳುವ ಇವರು ರೈತರ ಪ್ರತಿನಿಧಿ ಎಂದು ಇನ್ನು ಮುಂದೆ ಎಲ್ಲಿಯೂ ಹೇಳಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ನೇತೃತ್ವ

2021ರ ಏಪ್ರಿಲ್‌ನಲ್ಲಿ ನಡೆದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ಹೆಚ್ಚು ಸುದ್ದಿಯಲ್ಲಿದ್ದರು. ನೌಕರರ ಸಂಘದ ಗೌರವಾಧ್ಯಕ್ಷರಾಗಿ ಹೋರಾಟದ ನೇತೃತ್ವ ವಹಿಸಿದ್ದ ಅವರು ಮುಷ್ಕರದ ದಿಕ್ಕು ತಪ್ಪಿಸಿದ್ದರೆಂಬ ಆರೋಪಗಳಿವೆ. ಆಗಿನ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿಯೊಂದಿಗೆ ಗೌಪ್ಯವಾಗಿ ಮಾತುಕತೆ ನಡೆಸಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಯಾರಿಗೂ ತಿಳಿಸದೇ ಒಪ್ಪಂದ ಮಾಡಿಕೊಂಡಿದ್ದು… ಹೀಗೆ ಅವರ ವರ್ತನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದವು.

ನಿರಂತವಾಗಿ 15 ದಿನಗಳ ಕಾಲ ನಡೆದ ಈ ಮುಷ್ಕರದ ಸಂದರ್ಭದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರದೊಂದಿಗೆ ಸರಿಯಾಗಿ ಮಾತುಕತೆ ನಡೆಸದ ಕೋಡಿಹಳ್ಳಿ ಚಂದ್ರಶೇಖರ್‌ ಕಾರಣದಿಂದಾಗಿಯೇ ಈ ಮುಷ್ಕರ ಮುಂದುವರಿದಿದೆ ಎಂದು ಸಾರ್ವತ್ರಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಯಾವುದೇ ಸ್ಪಷ್ಟ ತೀರ್ಮಾನವಿಲ್ಲದೆ 15 ದಿನಗಳ ಕಾಲ ನಡೆದ ಈ ಮುಷ್ಕರ ಅಂತ್ಯಗೊಂಡಿತ್ತು. ರೈತ ನಾಯಕರಾಗಿ ಕೋಡಿಹಳ್ಳಿ ಚಂದ್ರಶೇಖರ್‌ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಔಚಿತ್ಯವನ್ನು ಜನಸಾಮಾನ್ಯರೂ ಪ್ರಶ್ನಿಸಿದ್ದರು.

ಈಗಿನ ಆರೋಪಗಳೇನು?

ಆಮ್‌ ಆದ್ಮಿ ಪಕ್ಷದ ಮೂಲಕ ರಾಜಕೀಯ

ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಆಮ್‌ ಆದ್ಮಿ ಪಕ್ಷವು (AAP) ಕರ್ನಾಟಕದಲ್ಲಿಯೂ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದು, ಇದರ ಮೊದಲ ಹಂತವಾಗಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು. ಅವರೊಂದಿಗೆ ರೈತ ನಾಯಕರಾದ ಎಚ್‌. ಆರ್‌. ಬಸವರಾಜಪ್ಪ, ಪ್ರಕಾಶ್‌ ಕಮ್ಮರಡಿ ಮತ್ತಿತರರೂ  ಆಮ್‌ ಆದ್ಮಿಯ ನಾಯಕ , ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಮ್ಮುಖದಲ್ಲಿ ಪಕ್ಷ ಸೇರಿದ್ದರು.

ಕೋಡಿಹಳ್ಳಿ ಚಂದ್ರಶೇಖರ್‌

ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌ ʼʼಆಮ್‌ ಆದ್ಮಿ ಪಕ್ಷ ರೈತ ಸಂಘದ ರಾಜಕೀಯ ಮುಖವಾಣಿಯಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರೈತನಾಯಕರೂ ಸ್ಪರ್ಧಿಸಲಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ರೈತ ಸಂಘದ ಇತರ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ರೈತ ಸಂಘದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿಗೇ ಚಂದ್ರಶೇಖರ್‌ ಮೇಲೆ ಹಲವು ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ | ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಮಸಿ ಎರಚಿ ಪ್ರತಿಭಟನೆ- ಮಾರಾಮಾರಿ

ಪ್ರಮಾಣಿಕತೆಯನ್ನೇ ರಾಜಕೀಯ ಆಸ್ತ್ರವಾಗಿಸಿಕೊಂಡಿರುವ ಆಮ್‌ ಆದ್ಮಿ ಪಕ್ಷ ರಾಜ್ಯದಲ್ಲಿನ ಈ ಬೆಳವಣಿಗೆ ಕುರಿತು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೆಲ್ಲಾ ಆದ ಮೇಲೆಯೂ ಆಪ್‌ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಪಕ್ಷದಲ್ಲಿಯೇ ಇಟ್ಟುಕೊಳ್ಳುತ್ತದೆಯೇ ಎಂಬುದರ ಕುರಿತು ಈಗ ಎಲ್ಲೆಡೆ ಕುತೂಹಲ ಮೂಡಿದೆ.

Exit mobile version