Site icon Vistara News

BJP Karnataka: ಬಿಜೆಪಿ ಕಚೇರಿಯಲ್ಲಿ ಕತ್ತರಿ ಹಾಕುವವರಿದ್ದಾರೆ: ವಾಗ್ದಾಳಿ ಮುಂದುವರಿಸಿದ ಹೊನ್ನಾಳಿ ರೇಣುಕಾಚಾರ್ಯ

MP Renukacharya 1

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ (BJP Karnataka) ಸೋಲಿನ ಕುರಿತು ಪಕ್ಷದ ನಾಯಕರ ವಿರುದ್ಧ ಹರಿಹಾಯುವಿಕೆಯನ್ನು ಸತತ ಮೂರನೇ ದಿನವೂ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಂದುವರಿಸಿದ್ದಾರೆ. ಯಡಿಯೂರಪ್ಪ ಅವರನ್ನು ಅವಮಾನಿಸಿದ್ದು, ಬಸವರಾಜ ಬೊಮ್ಮಾಯಿ ಅವರನ್ನು ನಾಮ್‌ ಕೆ ವಾಸ್ತೆ ಸಿಎಂ ಮಾಡಿದ್ದು ಸೇರಿ ಅನೇಕ ವಿಚಾರಗಳ ಕುರಿತು ಮುಕ್ತವಾಗಿ ಮಾತಾಡಿದ್ದಾರೆ.

ಪಕ್ಷದ ವಿಚಾರಗಳಲ್ಲಿ ಯಾರೂ ಮಾತಾಡಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಕೆ ನೀಡಿದ ನಂತರವೂ ಎಂ.ಪಿ. ರೇಣುಕಾಚಾರ್ಯ ಮಾತು ಮುಂದುವರಿಸಿದ್ದು, ನಾನು ಪಕ್ಷದ ವಿರುದ್ಧವಾಗಿ ಮಾತಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಕೆಲವು ದೌರ್ಬಲ್ಯಗಳ ಬಗ್ಗೆ ನಾನು ಮಾತಡಬೇಕಾಗುತ್ತದೆ.

ಮಾಧ್ಯಮದ ಮುಂದೆ ಮಾತಡಬಾರದು ಅಂತ ಗೊತ್ತಿದೆ. ಪಕ್ಷ ಅಧಿಕಾರವಿದ್ದ ಸಮಯದಲ್ಲಿ ಯಡಿಯೂರಪ್ಪ ಕೆಳಗೆ ಇಳಿಸುವತನಕ ಮಾತಾಡುತ್ತಾ ಇದ್ದರು. ಏಕೆ ಮಾತಾಡುತ್ತಿದ್ದಿರಿ ನೀವು? ಯಡಿಯೂರಪ್ಪ ಇಳಿಸಬೇಕು ಎಂದೇ ಮಾತಾಡುತ್ತಿದ್ದಿರ? ಅದರಿಂದ ಯಡಿಯೂರಪ್ಪಗೆ ಏನೂ ನಷ್ಟ ಆಗಿಲ್ಲ.

ಅವರನ್ನ ಕೆಳಗೆ ಇಳಿಸಿದ್ದಕ್ಕೆ ಸಮಾಧಾನ ಆಯಿತ? ಇಳಿಸಿದ ಮೇಲೂ ನಿರಂತರವಾಗಿ ಅವರ ವಿರುದ್ಧವಾಗಿ ಮಾತಾಡಿದಿರಿ. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಈಗ ಸ್ಥಿತಿ ಬರುತ್ತಿರಲಿಲ್ಲ. ಆರು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದಿರಿ. ಯಾವ ಕಾರಣಕ್ಕಾಗಿ ಸಚಿವ ಸ್ಥಾನ ಹಾಗೇ ಬಿಟ್ಟಿದ್ದಿರಿ?

ಯಡಿಯೂರಪ್ಪ ಅವರಿಗೆ ಅಪಮಾನ ಮಾಡಿದಿರಿ ನೀವು. ಅವರನ್ನ ಕೆಳಗೆ ಇಳಿಸಿದಿರಿ ಸಮಾಧಾನ ಆಯಿತ? ಇಳಿಸಿದ ಮೇಲೂ ನಿರಂತರವಾಗಿ ಅವರ ವಿರುದ್ಧವಾಗಿ ಮಾತಾಡಿದಿರಿ. ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತಾಡಿಲ್ಲ. ಬಿಜೆಪಿ ನನಗೆ ಒಂದು ತಾಯಿಯ ಸಮಾನ. ಶಾಸಕರ ಅಭಿಪ್ರಾಯ ಯಾಕೆ ಸಂಗ್ರಹ ಮಾಡಬೇಕಿತ್ತು? ಯಡಿಯೂರಪ್ಪ ಅವರನ್ನು ಇಳಿಸಲೇಬೇಕೆಂದು ಕೆಲವರನ್ನು ಮಾತಾಡಿಸೋಕೆ ಬಿಟ್ಟರು. ಯಡಿಯೂರಪ್ಪ ಅವರನ್ನು ಯಾವ ಪುರುಷಾರ್ಥಕ್ಮಾಗಿ ಇಳಿಸಿದಿರಿ?

ಮತ ಕೇಳೋಕೆ ಯಡಿಯೂರಪ್ಪರ ಮುಖ ಬೇಕು. ಅಧಿಕಾರದ ಎಂಜಾಯ್ ಮಾಡಲು ಯಡಿಯೂರಪ್ಪ ಬೇಕು. ಮೇ‌ 6ರಂದು ಬಿಜೆಪಿ ಕಚೇರಿಯಿಂದ ಒಬ್ಬರು ಫೋನ್ ಮಾಡಿದರು. ಆಯನೂರರಲ್ಲಿ 25 ಸಾವಿರ ಜನರನ್ನು ಸೇರಿಸಬೇಕು ಎಂದರು. ಹೊನ್ಮಾಳಿಗೆ ಮೋದಿ ಬರಲಿ ನಾನು ಬೇಕಿದ್ರೆ ಲಕ್ಷ ಜನರನ್ನು ಸೇರಿಸುತ್ತೇನೆ, ಆದರೆ ಅಲ್ಲಿಗೆ ನಾನು ಯಾಕೆ ಕರೆದುಕೊಂಡು ಬರಲಿ ಎಂದೆ. ನಾನು ಬರುವುದಿಲ್ಲ ಎಂದಿದ್ದೆ. ಮೋದಿ ಪಕ್ಕದಲ್ಲಿ ಸೀಟು ಇದೆ ಬನ್ನಿ ಎಂದು ಹೇಳಿದರು. ಆದರೆ ನಾನು ಬರಲ್ಲ ಅಂದೆ. ಮೋದಿ ಯಡಿಯೂರಪ್ಪ ಮುಖ ತೋರಿಸಿ ಮತ ಕೇಳಬೇಕು ಇವರಿಗೆ ಅಷ್ಟೇ.

ಯಡಿಯೂರಪ್ಪ ಸೈಕಲ್ ಓಡಿಸಿ, ಸ್ಕೂಟರ್ ಓಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ನಾನು ಹೆತ್ತ ತಾಯಿ ಆಣೆಗೂ ಯಡಿಯೂರಪ್ಪ ನನಗೇನೂ ಹೇಳಿಕೊಟ್ಟಿಲ್ಲ. ಹಿಂದೆ ನನಗೂ ಅವರ ನಡುವೆ ತುಂಬಾ ಘರ್ಷಣೆಗಳು ಆಗಿವೆ. ಯಡಿಯೂರಪ್ಪ ಅಧಿಕಾರದಿಂದ ಇಳಿಯದೇ ಇದ್ದಿದ್ದರೆ ನಾವು ನಮ್ಮಪ್ಪಾರಣೆಗೂ ಅಧಿಕಾರದಿಂದ ಇಳಿಯೋಕೆ ಸಾಧ್ಯ ಇರಲಿಲ್ಲ.

ಅಣ್ಣಾಮಲೈ ಅವರನ್ನು ಕರೆದುಕೊಂಡು ರಾಜ್ಯದ ಉಸ್ತುವಾರಿ ಮಾಡುತ್ತೀರಲ್ಲ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಎಲ್ಲರನ್ನು ಮುಗಿಸಿಬಿಟ್ಟಿರಲ್ಲ? ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದರು. ಆದರೆ ಅವರ ಎರಡೂ ಕೈಗಳನ್ನು ಕಟ್ಟಿ ಹಾಕಿದ್ದರು. ಯಡಿಯೂರಪ್ಪ ಈಶ್ವರಪ್ಪ, ಶೆಟ್ಟರ್, ಸವದಿ ಕಡೆಗಣಿಸಿದ್ದೆ ಬಿಜೆಪಿ ಹೀನಾಯವಾಗಿ ಸೋಲಲು ಕಾರಣ.

ಸೋತ ನಂತರ ನಮಗೆ ಯಾರೂ ಕರೆ ಮಾಡಲಿಲ್ಲ. ಸೌಜನ್ಯಕ್ಕೆ ಪೋನ್ ಮಾಡಬೇಕು ಅಲ್ವಾ? ಯಡಿಯೂರಪ್ಪ , ವಿಜಯೇಂದ್ರ ಕರೆ ಮಾಡಿ ಮಾತನಾಡಿದರು. ನಾನು ಏನ್ ವಿಜಯೇಂದ್ರ ಪರವಾಗಿಲ್ಲ. ಆದರೆ ನಾಯಕರ ವರ್ತನೆಗಳೇ ಬಿಜೆಪಿ ರಾಜ್ಯದಲ್ಲಿ ಸೋಲಿಗೆ ಕಾರಣ. ಬಿಜೆಪಿ ಕಚೇರಿಯಲ್ಲಿ ಕೆಲವರು ಬರೀ ಕತ್ತರಿ ಹಾಕೋದೇ ಕೆಲಸ. ಯಾರು ಮಾತಾಡುತ್ತಾರೆ ಅವರನ್ನು ಮುಗಿಸೋದು. ಆದರೆ ನಮ್ಮ ಜೊತೆಗೆ ಬೇರೆಯವರು ಸೌಜನ್ಯಯುತವಾಗಿಯೂ ಮಾತಾಡಿಲ್ಲ. ರಾಜ್ಯಾಧ್ಯಕ್ಷರಾದವರು ಒಂದು ಸಾರಿ ಆದರೂ ಮಾತಾಡಿದ್ದಾರ? ಪಾರ್ಟಿ ಆಫೀಸನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ದರು ಎಂದರು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: BJP Politics : ಸೋಲಿಗೆ ಕಟೀಲ್‌ ಕಾರಣ, ರಾಜ್ಯಾಧ್ಯಕ್ಷತೆಗೆ ರಾಜೀನಾಮೆ ಕೊಡಲಿ; ರೇಣುಕಾಚಾರ್ಯ ಸವಾಲು

ಸೋತ ಸುಧಾಕರ್ ಮನೆಗೆ ಹೋಗಿದ್ದಿರಿ ಎಂದು ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ, ನಮ್ಮ ಮನೆಗೆ ಬಂದ್ರಾ ನೀವು? ಬೊಮ್ಮಾಯಿ ಹೋಗಿದ್ದರೂ ಅಷ್ಟೇ ಯಾರು ಹೋಗಿದ್ದರೂ ಅಷ್ಟೇ. ಪ್ರಣಾಳಿಕೆ ಅಧ್ಯಕ್ಷ ಆಗಿದ್ದರು ಅವರು. ಸುಧಾಕರ್‌ ಒಬ್ಬನೇನಾ ಸೋತಿರೋದು? ನಾವೂ ಸೋತಿದ್ದೆವು ತಾನೆ? ನಮ್ಮ ಜತೆ ಯಾಕೆ ಮಾತಾಡಿಲ್ಲ? ಪಾರ್ಟಿಯನ್ನು ಮುಗಿಸ್ತೀನಿ ಅಂತಾ ಅವನು ನಿಮಗೆ ಹೆದರಿಸಿದ್ದನ? ಅದಕ್ಕಾಗಿ ಭಯಗೊಂಡು ಹೋಗಿದ್ದಿರ ಅವನ ಜೊತೆ ಮಾತಾಡೋಕೆ? ಏನ್ ಇವರ ಶಕ್ತಿಯಲ್ಲಿ ನಾವು ಇದ್ದೀವಾ? ಕ್ಷೇತ್ರದಲ್ಲಿ ನಮ್ಮದೇ ಆದ ವರ್ಚಸ್ಸು ಇಟ್ಟುಕೊಂಡಿದ್ದೇವೆ. ಇವರ ಎಚ್ಚರಿಕೆಗಳು ಬೇರೆ ಇದರ ಜತೆಗೆ. ಸಭೆಗಳಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಹೆದರಿಸುತ್ತಾರೆ, ಬೆದರಿಸುತ್ತಾರೆ ಎಂದರು.

Exit mobile version