ಮಂಡ್ಯ: ಕಬ್ಬು ಮತ್ತು ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿಗಾಗಿ ಆಗ್ರಹಿಸಿ ಮಂಡ್ಯದಲ್ಲಿ ಕಳೆದ 52 ದಿನಗಳಿಂದ ರೈತರು ಪ್ರತಿಭಟನೆ (Farmer Protest) ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರೈತ ಸಂಘದವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ಥಳಿಯನ್ನು ಸಿದ್ಧಪಡಿಸಿ ತಂದು ಅದಕ್ಕೆ ರಕ್ತದ ಅಭಿಷೇಕ ಮಾಡುವ ಮೂಲಕ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮುಖ್ಯಮಂತ್ರಿಯವರ ಪ್ರತಿಮೆ ಇಟ್ಟು ಅದಕ್ಕೆ ರಕ್ತದ ಅಭಿಷೇಕವನ್ನು ಮಾಡಿದ್ದಾರೆ. ಅಲ್ಲಿ ಸೇರಿದ್ದ ಹಲವಾರು ರೈತರು ಸಿರೆಂಜ್ ಮೂಲಕ ರಕ್ತ ತೆಗೆದು ಪುತ್ಥಳಿಗೆ ಅರ್ಪಿಸಿದ್ದಾರೆ. ಹೀಗಾಗಿ ರೈತರನ್ನು ವಶಕ್ಕೆ ಪಡೆದ ಪೊಲೀಸರು ಕರೆದೊಯ್ದಿದ್ದಾರೆ.
ಅಮಿತ್ ಷಾಗೆ ತಟ್ಟಲಿದೆಯೇ ಹೋರಾಟದ ಬಿಸಿ?
ಡಿಸೆಂಬರ್ 30ರಂದು ಮಂಡ್ಯಕ್ಕೆ ಗೃಹ ಸಚಿವ ಅಮಿತ್ ಷಾ ಅವರು ಆಗಮಿಸಲಿದ್ದು, ಸರ್ಕಾರಿ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ವೇಳೆ ಕಳೆದ ೫೨ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಅಡ್ಡಿಪಡಿಸುವ ಆತಂಕ ಎದುರಾಗಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ಕುಳಿತಿರುವ ರೈತರು, ಜನಸಂಕಲ್ಪ ಯಾತ್ರೆ ವೇಳೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ರೈತ ಸಂಘದವರು ಇದರ ಮುಂದಾಳತ್ವ ವಹಿಸಿದ್ದರು. ಈಗ ಅಮಿತ್ ಷಾ ಬರುವ ಮಾರ್ಗ ಮಧ್ಯೆ ಕಪ್ಪು ಬಾವುಟ ಪ್ರದರ್ಶನ ಮಾಡಲು ರೈತರು ಚಿಂತನೆ ನಡೆಸಿದ್ದಾರೆ. ಮುಖ್ಯಮಂತ್ರಿಯೇ ಬರಲಿ, ಪ್ರಧಾನ ಮಂತ್ರಿಯೇ ಬರಲಿ, ನಾವು ಕಪ್ಪು ಬಾವುಟವನ್ನು ಹಾರಿಸಲಿದ್ದೇವೆ ಎಂದು ರೈತ ಮುಖಂಡರು ಗುಡುಗಿದ್ದಾರೆ.
ಇದನ್ನೂ ಓದಿ | ಮೂಕಗೊಂಬೆಯೇ ಮುಂದೆ ಭಾರತದ ಉಕ್ಕಿನ ಮಹಿಳೆಯಾದಳು, ನೆನಪಿರಲಿ; ಪಪ್ಪು ಎನ್ನುವವರಿಗೆ ರಾಹುಲ್ ಗಾಂಧಿ ತಿರುಗೇಟು