ಬೆಂಗಳೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಇಂದು ರಾಜಧಾನಿಯಲ್ಲಿ ವಿಧಾನಸೌಧ ಚಲೋ ನಡೆಯಲಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ರೈತರು ಭಾಗಿಯಾಗುವ ಸಾಧ್ಯತೆ ಇದೆ.
ಸರ್ಕಾರದ ದ್ವಂದ್ವ ನೀತಿಯಿಂದ ರೊಚ್ಚಿಗೆದ್ದಿರುವ ರೈತರು ಹಲವಾರು ಬೇಡಿಕೆಗಳನ್ನು ಮಂಡಿಸಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರ‍್ಯಾಲಿ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೂ ಬೃಹತ್ ರ‍್ಯಾಲಿ ನಡೆಯಲಿದೆ. ರಾಜ್ಯದ ರೈತರ ಜತೆಗೆ ಬೇರೆ ರಾಜ್ಯಗಳಿಂದ ಬಂದ ರೈತರೂ ಸೇರಿಕೊಳ್ಳಲಿದ್ದಾರೆ.
ರೈತರ ಪ್ರತಿಭಟನೆಯಿಂದ ನಗರದ ಹಲವು ಕಡೆ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣ, ಶಿವಾನಂದ ಸರ್ಕಲ್, ಕೆಆರ್ ಸರ್ಕಲ್, ಫ್ರೀಡಂ ಪಾರ್ಕ್, ವಿಧಾನಸೌಧ ಬಳಿ ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆ ಇದೆ.
ರೈತರ ಬೇಡಿಕೆಗಳೇನು?
ಈ ಸಾಲಿನ ಕಬ್ಬಿನ ಎಂಎಸ್‌ಪಿ ದರ ಕನಿಷ್ಠ 3,500 ರೂ ನಿಗದಿಯಾಗಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರದ ವಿದ್ಯುತ್ ಖಾಸಗೀಕರಣ ಕಾಯ್ದೆ ಕೈಬಿಡಬೇಕು. ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಡಾ.ಎಂ.ಎಸ್ . ಸ್ವಾಮಿನಾಥನ್ ವರದಿಯಂತೆ ಜಾರಿಯಾಗಬೇಕು. ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ರೈತ ಹೋರಾಟದ ವೇಳೆ ಮೃತಪಟ್ಟ 750 ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು. ಕೊರೊನಾ ಲಾಕ್‌ಡೌನ್ ಸಂಕಷ್ಟ, ಮಳೆಹಾನಿ, ಮೂರೂವರೆ ಲಕ್ಷ ರೈತರ ಆತ್ಮಹತ್ಯೆ ಪರಿಗಣಿಸಿ ರೈತರ ಸಾಲ ಮನ್ನಾ ಆಗಬೇಕು. ಕೃಷಿ ಉಪಕರಣಗಳು, ಕೃಷಿ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ರದ್ದುಗೊಳಿಸಬೇಕು. ಫಸಲ್ ಬಿಮಾ ಬೆಳೆ ವಿಮೆ ಯೋಜನೆಯ ಮಾನದಂಡ ಬದಲಾಗಬೇಕು. ಮಳೆಹಾನಿ ವಿಮೆ ಎಲ್ಲ ಬೆಳೆಗಳಿಗೂ ಸಿಗುವಂತಾಗಬೇಕು. ಪ್ರಸಕ್ತ ಸಾಲಿನ ಕೃಷಿ ಸಾಲ ವಸೂಲಾತಿ ಅತಿವೃಷ್ಟಿ ಸಮಸ್ಯೆ ಪರಿಗಣಿಸಿ ಸ್ಥಗಿತಗೊಳಿಸಬೇಕು. ಇರುವ ಸಾಲದ ಮೇಲೆ ಶೇಕಡ 25ರಷ್ಟು ಹೆಚ್ಚುವರಿ ಸಾಲ ನೀಡಬೇಕು. ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು. ಬ್ಯಾಂಕುಗಳು ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣಿಸುವುದನ್ನು ಕೈಬಿಡಬೇಕು.