ಬೆಂಗಳೂರು: ಗೋಹತ್ಯೆ ಕಾಯ್ದೆಯನ್ನು(Cow Slaughter) ಹಿಂಪಡೆಯಲಾಗುವುದು ಎಂಬ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತಿಗೆ ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಕುರುಬೂರು ಶಾಂತಕುಮಾರ್, ಗೋಸಂರಕ್ಷಣೆ ಕುರಿತು ರಾಜ್ಯಮಟ್ಟದ ರೈತಮುಖಂಡರ ವಿಚಾರಗೋಷ್ಠಿ ಕರೆದಿದ್ದೇವೆ. ಪಶುಸಂಗೋಪನಾ ಸಚಿವರು ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಮಾತನಾಡಿದ್ದರು. ನಿಷೇಧ ಮಾಡುವ ಅಗತ್ಯತೆ ಇಲ್ಲ. ಆದರೆ ಕಾಯ್ದೆಯ ಲೋಪದೋಷಗಳ ಬಗ್ಗೆ ಚರ್ಚೆಯಾಗಬೇಕು. ದೋಷಗಳ ತಿದ್ದುಪಡಿ ಆಗಬೇಕು.
ಗೋವುಗಳು ಪರಿಸರ ಉಳಿಸುವಲ್ಲಿ ಸಹಕಾರಿಯಾಗಲಿವೆ. ಕಾಯ್ದೆ ರದ್ದು ಮಾಡಬೇಡಿ ಎಂದು ಸಿಎಂ ಮತ್ತು ಸಚಿವರ ಗಮನಕ್ಕೆ ತರುತ್ತೇವೆ. ಚರ್ಚೆ ನಡೆಸಿ ಅವರ ಗಮನ ಸೆಳೆಯುವ ಕೆಲಸ ಮಾಡುತ್ತೇವೆ.
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದರೆ ಅವರು ಗೋ ಉಳಿಸುವ ಚಿಂತನೆ ನಡೆಸುತ್ತಿದ್ದಾರೆ. ಗೋವುಗಳ ಸಂತತಿ ಕಡಿಮೆಯಾಗುತ್ತಿದೆ, ಅದನ್ನು ರಕ್ಷಿಸುವ ಕೆಲಸ ಮಾಡಬೇಕು. ಗೋರಕ್ಷಣೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಮಾಡದೇ ಗೋವು ಉಳಿಯುವ ಕೆಲಸವಾಗಬೇಕು. ಏನೇನು ತಿದ್ದುಪಡಿ ಆಗಬೇಕು ಎಂದು ನಾವು ಸರ್ಕಾರಕ್ಕೆ ಸಲಹೆ ಕೂಡ ಕೊಡಲಿದ್ದೇವೆ ಎಂದರು.
ಇದನ್ನೂ ಓದಿ: Congress Guarantee: ಅಕ್ಕಿ ರೇಟ್ ಜಾಸ್ತಿಯಾಗಿದೆ; ಸರ್ಕಾರ ಕೊಟ್ಟ ಹಣ ಸಾಲೋಲ್ಲ ಎಂದ ಬಿಜೆಪಿ
ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸಲು ಸರ್ಕಾರದ ಕಸರತ್ತು ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ರಾಜ್ಯದ ಬಡಜನರಿಗೆ ಅನ್ನಭಾಗ್ಯದಡಿ ಅಕ್ಕಿ ಕೊಡುವುದಾಗಿ ಹೇಳಿದೆ. ರಾಜ್ಯದಲ್ಲಿ ಅಕ್ಕಿ ಇಲ್ಲ ಅನ್ನೋ ಅಭಿಪ್ರಾಯಗಳು ಕೂಡ ಬರುತ್ತಿದೆ. ನಾವು ರಾಜ್ಯದ ರೈತರು ಬೇಕಾದ ಅಕ್ಕಿ ಕೊಡಲು ಸಿದ್ಧರಿದ್ದೇವೆ. ಸ್ವಾಮಿನಾಥನ್ ವರದಿ ಆಧಾರದಲ್ಲಿ ಸರ್ಕಾರ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದರೆ ರೈತರನ್ನು ಕೂಡ ರಕ್ಷಣೆ ಮಾಡಿದಂತೆ ಆಗಲಿದೆ. ರಾಜ್ಯದ ರೈತರು ನಾವು ಬೆಳೆದ ಬೆಳೆಯನ್ನು ತಮಿಳುನಾಡು, ಆಂಧ್ರಪ್ರದೇಶಕ್ಕೆ ರವಾನೆ ಮಾಡುತ್ತೇವೆ. ಅದನ್ನು ನಮ್ಮಿಂದಲೇ ಖರೀದಿಸಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂದರು.