ಬೆಂಗಳೂರು: ಈಗಾಗಲೆ ಕಾಂಗ್ರೆಸ್ ಸರ್ಕಾರ ಊದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆರಂಭಿಸಿದೆ. ಮೊದಲನೆಯದಾಗಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಇನ್ನೂ ಆರಂಭಿಸಬೇಕು. ಇದೆ ನಡುವೆಯೇ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ ವಿನೂತನವಾದ ಸಲಹೆಯೊಂದನ್ನು ನೀಡಿದೆ.
ಈಗ ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಗೃಹಜ್ಯೋತಿ ಯೋಜನೆಗೆ ಪ್ರತಿ ವರ್ಷ 12 ಸಾವಿರ ಕೋಟಿ ರೂ. ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಯೋಜನೆಯಿಂದ ರಾಜ್ಯ ಸರ್ಕಾರದ ಮೇಲಿನ ಹೊರೆ ಹೆಚ್ಚಾಗುತ್ತದೆ, ಆರ್ಥಿಕವಾಗಿ ಸುಸ್ಥಿರವಾದ ಯೋಜನೆ ಅಲ್ಲ ಎಂಬ ಮಾತಿದೆ. ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಲಹೆಯೊಂದನ್ನು ನೀಡಿದ್ದಾರೆ.
ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡಲು ಎಷ್ಟು ಹಣ ನೀಡಬೇಕು, ಎಷ್ಟು ಉತ್ಪಾದನಾ ವೆಚ್ಚ ಆಗುತ್ತದೆ ಎನ್ನುವುದನ್ನು ಸರ್ಕಾರ ಲೆಕ್ಕ ಮಾಡಲಿ. ಮುಂದಿನ ಒಂದಷ್ಟು ವರ್ಷ ಈ ಯೋಜನೆಗೆ ಆಗಬಹುದಾದ ವೆಚ್ಚವನ್ನು ಗಣನೆಗೆ ತೆಗೆದುಕೊಂಡು, ಅದಕ್ಕೆ ಅನುಗುಣವಾಗಿ ಬಡವರ ಮನೆಗಳಿಗೆ ಅರ್ಧ ಕಿಲೋವ್ಯಾಟ್ ಅಥವಾ 1 ಕಿಲೋವ್ಯಾಟ್‌ನಷ್ಟು ಸೋಲಾರ್ ವಿದ್ಯತ್ ವ್ಯವಸ್ಥೆಯನ್ನು ಉಚಿತವಾಗಿ ನೀಡಬಹುದು. ಇದರಿಂದ ಸರ್ಕಾರಕ್ಕೆ ದೀರ್ಘಕಾಲಿಕವಾಗಿ ಹೊರೆ ಕಡಿಮೆ ಆಗುತ್ತದೆ. ಕುಟುಂಬದವರಿಗೂ ಶಾಶ್ವತವಾಗಿ ವಿದ್ಯುತ್ ಸೌಲಭ್ಯ ಸಿಗುತ್ತದೆ. ಪರಿಸರ ಸಂರಕ್ಷಣೆಯೂ ಇದರಿಂದ ಆಗುತ್ತದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕದ ರೈತರಿಂದಲೇ ಖರೀದಿಸಿ
ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯನ್ನು ಖರೀದಿಸಲು ರಾಜ್ಯ ಸರ್ಕಾರವು ಭಾರತೀಯ ಆಹಾರ ನಿಗಮವನ್ನು ಸಂಪರ್ಕಿಸಿದೆ. ಆದರೆ ಕರ್ನಾಟಕದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಭತ್ತ, ರಾಗಿ ಹಾಗೂ ಜೋಳ ಉತ್ಪಾದನೆ ಆಗುತ್ತದೆ. ಅಕ್ಕಪಕ್ಕದ ರಾಜ್ಯಗಳಿಗೆ ಕರ್ನಾಟಕದಿಂದ ಅಕ್ಕಿ ರಫ್ತಾಗುತ್ತಿದೆ. ರಾಜ್ಯ ಸರ್ಕಾರ ಕರ್ನಾಟಕದ ರೈತರಿಂದಲೇ ಅಕ್ಕಿ, ರಾಗಿ ಹಾಗೂ ಜೋಳವನ್ನು ಖರೀದಿ ಮಾಡಿ ಅದನ್ನೇ ಅನ್ನಭಾಗ್ಯ ಯೋಜನೆಯಲ್ಲಿ ಬಡವರಿಗೆ ವಿತರಣೆ ಮಾಡಿದರೆ ರೈತರಿಗೆ ಬೆಂಬಲ ನೀಡಿದಂತೆಯೂ ಆಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Free Electricity: ಗೃಹ ಜ್ಯೋತಿ ಅರ್ಜಿ ಸ್ವೀಕಾರ ಆರಂಭ ಮುಂದೂಡಿಕೆ; ದಿಢೀರ್ ನಿರ್ಧಾರಕ್ಕೆ ಕಾರಣವೇನು?