ಮಂಡ್ಯ: ತಮಿಳುನಾಡಿಗೆ ಮತ್ತೆ ನೀರು (Cauvery Dispute) ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶ ಖಂಡಿಸಿ ರೈತರು ಮಂಗಳವಾರವೂ ಜಿಲ್ಲೆಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರೈತರು ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಗುಳೆ ಹೊರಟು ವಿನೂತನವಾಗಿ ಅಣಕು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.
ಶ್ರೀರಂಗಪಟ್ಟಣದ ಕಾವೇರಿ ನದಿ ಸ್ನಾನಘಟ್ಟದ ಬಳಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು, ಗುಳೆ ಚಳವಳಿ ಮಾಡಿದರು. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಜಿಲ್ಲೆಯ ರೈತರು ಗುಳೆ ಹೋಗಬೇಕಾದ ಪರಿಸ್ಥಿತಿ ತಂದಿದೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ
ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ರೈತರ ಆಕ್ರೋಶ
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತರು ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕಾವೇರಿ ನೀರು ಬಿಡಲು ಆದೇಶ ನೀಡಿದ ಪ್ರಾಧಿಕಾರ ಮತ್ತು ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ರೈತರು ಧಿಕ್ಕಾರ ಕೂಗಿದರು. ರೈತ ಸಂಘದ ಹೋರಾಟಕ್ಕೆ ಹಲವು ಸಂಘಟನೆಗಳ ಸಾಥ್ ನೀಡಿದವು.
ಸುಪ್ರೀಂ ಕೋರ್ಟ್ ನೀರು ಬಿಡಲು ಹೇಳಿದರೆ ಬೊಮ್ಮಾಯಿ ಕೂಡಾ ಏನು ಮಾಡೋಕೆ ಆಗುತ್ತೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಸುಪ್ರೀಂ ಕೋರ್ಟ್ (Supreme Court) ತಮಿಳುನಾಡಿಗೆ ಕಾವೇರಿ ನೀರು (Cauvery water to Tamil Nadu) ಬಿಡಿ ಅಂದಾಗ, ನಾವೇನು ಮಾಡಲು ಆಗುತ್ತದೆ? ಬಸವರಾಜ ಬೊಮ್ಮಾಯಿ (Basavaraj Bommai) ಏನು ಮಾಡಲು ಆಗುತ್ತದೆ? ನಾವೆಲ್ಲರೂ ಸುಪ್ರೀಂ ಕೋರ್ಟ್‌ಗೆ ಗೌರವ ಕೊಡಲೇ ಬೇಕು ಎಂದು ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ತಿರುಗೇಟು ನೀಡಿದ್ದಾರೆ.
ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿರುವುದನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖಂಡಿಸಿದ್ದರು. ಅಲ್ಲದೆ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು, ಕಾನೂನು ಹೋರಾಟ ಮಾಡಬೇಕು ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇನೆ. ಅವರ ಸಲಹೆಯನ್ನು ಒಪ್ಪುತ್ತೇನೆ. ಆದರೆ, ಅವರ ಸರ್ಕಾರ ಇದ್ದಾಗ ಏನು ಮಾಡಿದ್ದರು? ರಾತ್ರೋ ರಾತ್ರಿ ನೀರು ಬಿಟ್ಟಿಲ್ಲವೇ? ನಮಗೂ ಯಾವುದೇ ಕಾರಣಕ್ಕೂ ನೀರು ಬಿಡಲು ಇಷ್ಟ ಇಲ್ಲ. ಆದರೆ, ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕು. ಹಾಗಾಗಿ ಕೋರ್ಟ್ ಸೂಚನೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವ ಸಂಬಂಧ ನಾನು ನವ ದೆಹಲಿಗೆ ಹೋಗುತ್ತಿದ್ದೇನೆ. ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡುತ್ತೇನೆ. ಕೇಂದ್ರ ಸರ್ಕಾರದ ಮೇಲೆ ನಾವೆಲ್ಲರೂ ಸೇರಿ ಒತ್ತಡ ಹಾಕುತ್ತೇವೆ. ನಮ್ಮ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ, ಅವರಿಂದ ಸಲಹೆ ಕೊಡಿಸಬೇಕು. ರಾಜಕಾರಣವನ್ನು ಪಕ್ಕಕ್ಕೆ ಇಟ್ಟು, ಜನರ ಹಿತ ಕಾಪಾಡಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ | Cauvery water dispute : ತಮಿಳುನಾಡಿಗೆ ನೀರು ಬಿಡಬೇಡಿ, ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿ: ಬಿಎಸ್‌ವೈ
ದೇವೇಗೌಡರು ಪಾರ್ಲಿಮೆಂಟ್‌ನಲ್ಲಿ ಇದ್ದಾರೆ. ಅವರ ಸಲಹೆ ಕೂಡ ನಮಗೆ ಬಹಳ ಮುಖ್ಯವಾಗುತ್ತದೆ. ಅವರ ಹಿರಿತನದ ಅನುಭವವು ನಮಗೆ ಬೇಕಿದೆ. ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದರು. ಸಿಎಂ ಆಗಿದ್ದವರು. ಈಗ ಇರುವ ತಜ್ಞರೆಲ್ಲರೂ ಅವರ ಸರ್ಕಾರ ನೇಮಕ ಮಾಡಿದವರೇ ಇದ್ದಾರೆ. ಹೀಗಾಗಿ ಮೊದಲು ದೆಹಲಿಗೆ ನಡೆಯಿರಿ, ನಿಮ್ಮ ಅಧಿಕಾರ ಬಳಸಿ ರಾಜ್ಯದ ಹಿತವನ್ನು ಕಾಪಾಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.