ಬೆಂಗಳೂರು: ಕಬ್ಬು ಬೆಲೆ ನಿಗದಿಗಾಗಿ, ಹಳೇ ಬಾಕಿ ಪಾವತಿಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘದವರು ಮುಖ್ಯಮಂತ್ರಿ ನಿವಾಸಕ್ಕೆ ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿದ್ದು, ಅವರನ್ನು ಅರ್ಧ ದಾರಿಯಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ರೈತರು ಜಮಾಯಿಸಿ, ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಸಂದರ್ಭದಲ್ಲಿ ವಿದ್ಯುತ್ ತಾರತಮ್ಯದ ವಿರುದ್ಧ ಕರ ನಿರಾಕರಣೆ ಚಳವಳಿಗೆ ಕರೆ ನೀಡಿದ್ದರು. ಆಗ ರಾಜ್ಯದ ಸಾವಿರಾರು ರೈತರು ವಿದ್ಯುತ್ ಬಿಲ್ ಪಾವತಿಸದೇ ಹೋರಾಟದಲ್ಲಿ ಭಾಗಿಯಾಗಿದ್ದರು. 2017ರಲ್ಲಿ ರಾಜ್ಯ ಸರ್ಕಾರ ಹಳೇ ಬಿಲ್ ಮನ್ನಾ ಮಾಡುವುದಾಗಿ ಹೇಳಿದ್ದಲ್ಲದೆ, ಹೊಸ ಮೀಟರ್ ಹಾಕಲಿದ್ದು, ಹೊಸ ದರ ಪಾವತಿ ಮಾಡಿಕೊಂಡು ಹೋಗುವಂತೆ ಸೂಚಿಸಿತ್ತು. ಈಗ ಸರ್ಕಾರ ಹಳೆಯ ಬಿಲ್ ಅನ್ನು ಸಹ ವಸೂಲಿ ಮಾಡಲು ಮುಂದಾಗಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ಹೊರಹಾಕಿದರು.
ಕಬ್ಬು ಬೆಳೆಗಾರರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ ಹಾಗೂ ಬಾಕಿ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ.10 ಇಳುವರಿಯನ್ನು ಮಾನದಂಡ ಮಾಡಿಕೊಂಡು ಕಾರ್ಖಾನೆಗೆ ಅನುಕೂಲವಾಗುವ ನೀತಿಯನ್ನು ಅನುಸರಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. 2022ರ ಫೆಬ್ರವರಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ರಸಗೊಬ್ಬರ ಮತ್ತು ಕೃಷಿಯ ಇತರ ಬೆಲೆ ಗಗನಕ್ಕೇರಿಸಿ ವ್ಯವಸಾಯದ ಉತ್ಪದನಾ ವೆಚ್ಚ ದ್ವಿಗುಣಗೊಳಿಸಿತೇ ಹೊರತು ರೈತನ ಆದಾಯವನ್ನು ಕಿಂಚಿತ್ತೂ ಹೆಚ್ಚಿಸಲೇ ಇಲ್ಲ. ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಎಂ.ಎಸ್.ಪಿ, ಬೆಲೆ ನಿಗದಿ ಮಾಡದ ಕೇಂದ್ರ ಸರ್ಕಾರವು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದೆ. ಈ ಸಂಕಷ್ಟದಿಂದಾಗಿ ಕಬ್ಬಿಗೆ ಟನ್‌ಗೆ ಕನಿಷ್ಠ ಬೆಲೆ 4,500 ರೂ. ಮಾತ್ರ ಕೇಳಲಾಗುತ್ತಿದೆ ಎಂದರು.
ಇದನ್ನೂ ಓದಿ | ಕೋಟಿ ರೂ. ಮೌಲ್ಯದ ಜಮೀನಿಗೆ ಸಾಲ ಕೊಡ್ತಿಲ್ಲ, ಮನೆ ಕಟ್ಟಲು ಲಕ್ಷ ಲಕ್ಷ ಸಾಲ ಕೊಡ್ತಾರೆ : ಕುರುಬೂರು ಶಾಂತಕುಮಾರ್
ರಾಜ್ಯ ಸರ್ಕಾರವು ರೈತ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣ ಸಮಿತಿಯನ್ನು ಇದುವರೆಗೂ ನಡೆಸಿಲ್ಲ. ಎಸ್.ಎ.ಪಿಯನ್ನು ಕಳೆದ 4 ವರ್ಷಗಳಿಂದಲೂ ಘೋಷಿಸಿಲ್ಲ. ಉತ್ತರ ಕರ್ನಾಟಕದ ಬಹುತೇಕ ಕಾರ್ಖಾನೆಗಳನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿರುವ ರಾಜಕಾರಣಿಗಳೇ ನಡೆಸುತ್ತಿದ್ದು, ಸರ್ಕಾರದಲ್ಲಿ ಮಂತ್ರಿಗಳಾಗಿಯೂ ಕೂಡ ಕಾರ್ಯಭಾರ ನಡೆಸುತ್ತಿದ್ದಾರೆ. ಕಾರ್ಖಾನೆಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಎಫ್.ಆರ್.ಪಿ. ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಕಬ್ಬನ್ನು ಕೊಳ್ಳಲಾಗುತ್ತಿದೆ. ಈ ಬೆಲೆಯನ್ನು ಸಹ ವಿಳಂಬವಾಗಿ ಪಾವತಿಸುತ್ತಿದ್ದಾರೆ. ಇವೆಲ್ಲವೂ ಸರ್ಕಾರಕ್ಕೆ ಗೊತ್ತಿದ್ದರೂ ಜಾಣ ಮೌನ ಅನುಸರಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹಸಿರು ಶಾಲು ಹಾಕಿದ್ದೇವೆ ಅಷ್ಟೇ, ಗನ್ ಹಿಡಿದು ಬಂದಿಲ್ಲ
ಸಿಎಂ ಮನೆ ಮುತ್ತಿಗೆ ಹಾಕಲು ರೈಲ್ವೇ ನಿಲ್ದಾಣದಿಂದ ರ‍್ಯಾಲಿ ನಡೆಸಲು ರೈತರು ಮುಂದಾದರೂ, ಪ್ರತಿಭಟಿಸಲು ಅವಕಾಶ ಪಡೆಯದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸುವಂತೆ ಪೊಲೀಸರು ಮನವಿ ಮಾಡಿದರು. ಈ ಮನವಿಗೆ ಜಗ್ಗದೇ ಇದ್ದಾಗ ಪೊಲೀಸರು ಎಲ್ಲ ರೈತರನ್ನೂ ಅರ್ಧ ದಾರಿಯಲ್ಲೇ ವಶಕ್ಕೆ ಪಡೆದುಕೊಂಡರು.
ಈ ವೇಳೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಾವು ಬಾಂಬ್, ಗನ್ ಹಿಡಿದು ಬಂದಿಲ್ಲ. ಹಸಿರು ಶಾಲು ಹಾಕಿಕೊಂಡು ಶಾಂತಿಯುತವಾಗಿ ಪ್ರತಿಭಟಿಸಲು ಬಂದಿದ್ದೇವೆ. ಮುಖ್ಯಮಂತ್ರಿ ಜತೆಗೆ ಮಾತನಾಡಲು ಬಂದಿದ್ದೇವೆ. ಆದರೆ, ಪೊಲೀಸರು ನಮ್ಮನ್ನೂ ಬಂಧಿಸುತ್ತಿದ್ದಾರೆ. ನಾವು ಸುಮ್ಮನೆ ಇರುವುದಿಲ್ಲ ಕಬಿನಿ, ಕಾವೇರಿಗೆ ಸಿಎಂ ಬಾಗಿನ ಅರ್ಪಿಸಲು ಬಂದಾಗ ನಮ್ಮ ಹೆಣ್ಣುಮಕ್ಕಳೊಂದಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಸ್ವಾಗತಿಸುತ್ತೇವೆ. ಇದು ಸರ್ಕಾರ ಪತನದ ಮುನ್ಸೂಚನೆ, ಆಗಿನ ಗುಂಡೂರಾವ್ ಸರ್ಕಾರವನ್ನೇ ಬಿಟ್ಟಿಲ್ಲ. ಈಗ ಈ ಸರ್ಕಾರವನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | ಕೊಪ್ಪಳದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಂತ ರೈತರು!