Site icon Vistara News

Farmers Suicide: 10 ವರ್ಷದಲ್ಲಿ 7,398 ರೈತರ ಆತ್ಮಹತ್ಯೆ; ದಿನಕ್ಕಿಬ್ಬರ ಸಾವು: ಮೂರೂ ಪಕ್ಷದ ಅವಧಿಯಲ್ಲಿ ನೀಗಲಿಲ್ಲ ಅನ್ನದಾತನ ಬವಣೆ

farmers suicide in ten years crossed seven thousand in karnataka

#image_title

ರಮೇಶ ದೊಡ್ಡಪುರ, ಬೆಂಗಳೂರು
ಕರ್ನಾಟಕದಲ್ಲಿ ಚುನಾವಣೆಗಳ ನಂತರ ಚುನಾವಣೆಗಳು ಬರುತ್ತಲೇ ಹೋದವು, ರೈತರ ಬವಣೆ ನೀಗಿಸುವ ಆಶ್ವಾಸನೆಯನ್ನು ಪಕ್ಷಗಳು ನೀಡುತ್ತಲೇ ಹೋದವು. ಇದೀಗ ಮತ್ತೊಂದು ಚುನಾವಣೆ ಎದುರಾಗಿದ್ದು, ಆಶ್ವಾಸನೆಗಳು ಹರಿದುಬರುತ್ತಿವೆ. ಆದರೆ ಅನ್ನದಾತ ರೈತನ ಬವಣೆ ಮಾತ್ರ ನೀಗಲೇ ಇಲ್ಲ. ಇದರಿಂದಾಗಿ ಕಳೆದ ಹತ್ತು ವರ್ಷದಲ್ಲಿ ಕರ್ನಾಟಕದಲ್ಲಿ ಬರೊಬ್ಬರಿ 7,398 ರೈತರು ಆತ್ಮಹತ್ಯೆ (Farmers Suicide) ಮಾಡಿಕೊಂಡಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಹಾಗೂ ವಿಧಾನಮಂಡಲದಲ್ಲಿ ರಾಜ್ಯ ಸರ್ಕಾರ ನೀಡಿದ ಉತ್ತರಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಕೆಲವು ವರ್ಷಗಳು ತುಸು ತಗ್ಗಿದ್ದು ಬಿಟ್ಟರೆ ಆತ್ಮಹತ್ಯೆ ಮಾತ್ರ ನಿರಂತರ ಮುಂದುವರಿದಿರುವುದು ಕಂಡುಬರುತ್ತದೆ.

2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಐದು ವರ್ಷ ಪೂರೈಸಿತ್ತು. ಆಗಿನ ಸಂದರ್ಭದಲ್ಲಿ ರೈತರ ಆತ್ಮಹತ್ಯೆ ತೀವ್ರವಾಗಿತ್ತು. 2013-14ರಿಂದ 2017-18ರವರೆಗೆ 3,955 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾರಂಭದ ಎರಡು ವರ್ಷ ಕ್ರಮವಾಗಿ 104 ಹಾಗೂ 128 ಇದ್ದ ಸಂಖ್ಯೆ ಮುಂದಿನ ಮೂರು ವರ್ಷ ಒಂದು ಸಾವಿರವನ್ನು ದಾಟಿತು. ಈ ವಿಚಾರವು ಚುನಾವಣಾ ವಿಚಾರವಾಗಿ ಮಾರ್ಪಟ್ಟು, ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅಸ್ತ್ರವಾಗಿದ್ದವು.

ಚುನಾವಣೆ ನಂತರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಪ್ರಮುಖವಾಗಿ, ರೈತರ ಎಲ್ಲ ಸಾಲವನ್ನೂ ಮನ್ನ ಮಾಡುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. 2017-18ರಲ್ಲಿ 1,052 ಇದ್ದ ರೈತರ ಆತ್ಮಹತ್ಯೆ ಸಂಖ್ಯೆ 2018-19ರಲ್ಲಿ 867ಕ್ಕೆ ಇಳಿಕೆಯಾಯಿತು. ನಂತರ 2021ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ನಂತರ ಮೂರು ವರ್ಷದಲ್ಲಿ ಕ್ರಮವಾಗಿ 895, 718 ಹಾಗೂ 775 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2022-23ರ ಜನವರಿವರೆಗೆ ಅಂಕಿ ಅಂಶಗಳು ಲಭ್ಯವಿದ್ದು, 188 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2013-14ರಿಂದ 2017-18ರವರೆಗೆ ಪೂರ್ಣ ಐದು ವರ್ಷದಲ್ಲಿ 3,955 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2018-19ರಿಂದ 2022-23ರ ಜನವರಿವರೆಗೆ 3,443 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಂಗಳ ಸರಾಸರಿಯಲ್ಲಿ ನೋಡಿದರೆ ಮಾಸಿಕ 66 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರದ ಐದು ವರ್ಷದಲ್ಲಿ ಮಾಸಿಕ ಸರಾಸರಿ 60 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರ ಸಾಲಮನ್ನ ಸೇರಿ ಅನೇಕ ಕಾರಣಗಳಿಂದ ಒಟ್ಟಾರೆ ಆತ್ಮಹತ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿದ್ದರೂ ಅದು ಗಣನೀಯ ಎನ್ನುವಷ್ಟು ಇಲ್ಲ. ಹಾಗಾಗಿ ಈ ಎರಡೂ ಅವಧಿಯಲ್ಲಿ ರೈತರ ಏಳಿಗೆಗೆ ಸರ್ಕಾರಗಳು ಕೈಗೊಂಡ ಕ್ರಮಗಳು, ಘೋಷಿಸಿದ ಯೋಜನೆಗಳು ರೈತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಸಫಲವಾಗಿಲ್ಲ ಎಂಬುದು ಕಾಣುತ್ತಿದೆ.

ಹಾವೇರಿಯನ್ನು ಮೀರಿಸಿದ ಬೆಳಗಾವಿ

2013-14ರಿಂದ 2017-18ರವರೆಗೆ ಐದು ವರ್ಷದಲ್ಲಿ 297 ರೈತರು ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಜಿಲ್ಲೆ ದುರದೃಷ್ಟವಶಾತ್‌ ಮೊದಲ ಸ್ಥಾನದಲ್ಲಿತ್ತು. ಇದೀಗ 2018-19ರಿಂದ 2022-23ರ ಜನವರಿವರೆಗೆ ಹಾವೇರಿಯಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಬೆಳಗಾವಿಯಲ್ಲಿ ಮೊದಲ ಐದು ವರ್ಷದಲ್ಲಿ 251 ಇದ್ದ ಸಾವಿನ ಸಂಖ್ಯೆ ಈ ಐದು ವರ್ಷದಲ್ಲಿ ಬರೊಬ್ಬರಿ 342 ಆಗುವ ಮೂಲಕ ಮೊದಲ ಸ್ಥಾನದಲ್ಲಿದೆ.

ಒಟ್ಟಾರೆ ಹತ್ತು ವರ್ಷದಲ್ಲಿ 593 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಹಾವೇರಿ(572), ಮೈಸೂರು(537), ಮಂಡ್ಯ(467), ಚಿಕ್ಕಮಗಳೂರು (457) ಜಿಲ್ಲೆಗಳಿವೆ. ಒಟ್ಟಾರೆ ಗಮನಿಸಿದರೆ ಚಿಕ್ಕಮಗಳೂರು ಹೊರತುಪಡಿಸಿ ಮೊದಲ ನಾಲ್ಕು ಸ್ಥಾನ ಪಡೆದ ಜಿಲ್ಲೆಗಳೆಲ್ಲವೂ ನೀರಾವರಿ ಪ್ರದೇಶವನ್ನು ಹೊಂದಿರುವ ಹಾಗೂ ಕಬ್ಬು, ಭತ್ತವನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಾಗಿವೆ. ಅತಿ ಹೆಚ್ಚು ಬರಗಾಲವಿರುವ ಕೋಲಾರ (43), ಚಿಕ್ಕಬಳ್ಳಾಪುರ( 55) ಜಿಲ್ಲೆಗಳಲ್ಲಿ ಅತಿ ಕಡಿಮೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸರ್ಕಾರವು 5 ಲಕ್ಷ ರೂ. ಪರಿಹಾರ ನೀಡುತ್ತದೆ. ಆದರೆ ಆತ್ಮಹತ್ಯೆಯನ್ನು ಮಾಡಿಕೊಳ್ಳದಂತೆ ತಡೆಯಲು ಕೈಗೊಂಡಿರುವುದಾಗಿ ಸರ್ಕಾರಗಳು ಹೇಳುತ್ತಿರುವ ಕ್ರಮಗಳು ರೈತರನ್ನು ತಲುಪಿದಂತೆ ತೋರುತ್ತಿಲ್ಲ.

2013-14ರಿಂದ 2017-18ರವರೆಗೆ (5 ವರ್ಷ) ರೈತರ ಆತ್ಮಹತ್ಯೆಗಳು

2018-19ರಿಂದ 2022-23ರ ಜನವರಿವರೆಗೆ (5 ವರ್ಷ) ಆತ್ಮಹತ್ಯೆಗಳು

2013-14ರಿಂದ 2022-23ರ ಜನವರಿವರೆಗೆ (10 ವರ್ಷ) ಆತ್ಮಹತ್ಯೆಗಳು

Exit mobile version