ಮಂಡ್ಯ/ಬಾಗಲಕೋಟೆ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ (ಕಬ್ಬು ಬೆಲೆ ನಿಗದಿಗೆ ಹೋರಾಟ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರ ರೂಪ ಪಡೆಯುತ್ತಿದೆ. ಅದರಲ್ಲೂ ಮಂಡ್ಯ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ದೊಡ್ಡ ಮಟ್ಟದಲ್ಲಿ ಜನ ರಸ್ತೆಗೆ ಇಳಿದು ಹೋರಾಟ ನಡೆಸಿದರು. ಮಂಡ್ಯದಲ್ಲಿ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನೂ ಸುಟ್ಟು ಹಾಕಲಾಗಿದೆ.
ಮುಖ್ಯಮಂತ್ರಿಗಳಿಗೆ ತಾಕತ್ತು ಇಲ್ಲ
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ನಾಯಕ ಬಡಗಲಪುರ ನಾಗೇಂದ್ರ ಅವರು, ಸಿಎಂ ಬಸವರಾಜ ಬೊಮ್ಮಾಯಿ ಒಬ್ಬ ನರಸತ್ತ ಮುಖ್ಯಮಂತ್ರಿ. ಅವರಿಗೆ ಸಕ್ಕರೆ ಕಾರ್ಖಾನೆಯ ಮಾಲೀಕರನ್ನು ಎದುರಿಸುವ ತಾಕತ್ತು ಇಲ್ಲ ಎಂದರು.
ʻʻರಾಜ್ಯದ 12 ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ಇದುವರೆಗೂ ಕಬ್ಬು ಬೆಳೆಗಾರರನ್ನು ಕರೆದು ಸಭೆ ನಡೆಸುವ ಸೌಜನ್ಯವನ್ನು ತೋರಿಸಿಲ್ಲ. ಬೊಮ್ಮಾಯಿ ಅವರು ರೈತರ ಮುಖ್ಯಮಂತ್ರಿಯಾಗಿ ಉಳಿದುಕೊಂಡಿಲ್ಲ. ಅವರು ಸಂಘ ಪರಿವಾರ, ಕಾರ್ಪೊರೇಟ್ ಕುಳಗಳು ಏನು ಹೇಳ್ತಾರೊ ಹಾಗೆ ಕೇಳ್ತಿದ್ದಾರೆ. ಅವರ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆʼʼ ಎಂದು ಬಡಗಲಪುರ ನಾಗೇಂದ್ರ ಅವರು ಆರೋಪಿಸಿದರು.
ʻʻಈ ತಿಂಗಳ 21 ರೊಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು. ಮುಂದಿನ ತಿಂಗಳ 11 ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ 50 ಸಾವಿರ ರೈತರೊಂದಿಗೆ ತೆರಳಿ ಮುತ್ತಿಗೆ ಹಾಕುತ್ತೇವೆ. ಅಧಿವೇಶನ ನಡೆಯಲು ಬಿಡುವುದಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಪ್ರದೇಶದಲ್ಲಿ ಮುಖ್ಯಮಂತ್ರಿ ಪ್ರತಿಕೃತಿ ಮೆರವಣಿಗೆ ನಡೆಸಿ ದಹಿಸಲಾಯಿತು.
ಬಾಗಲಕೋಟೆಯಲ್ಲಿ ಹೆಚ್ಚಿದ ಆಕ್ರೋಶ
ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಆಕ್ರೋಶ ಹೆಚ್ಚಾಗಿದ್ದು, ಬುಧವಾರ ಮುಧೋಳ, ಮಹಾಲಿಂಗಪುರ ಸೇರಿದಂತೆ ಹತ್ತಾರು ಕಡೆಗಳಲ್ಲಿ ಜನರು ಪ್ರತಿಭಟನೆ ನಡೆಸಿದರು.
ಮಹಾಲಿಂಗಪುರದಲ್ಲಿ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯಿತು..
ಕಬ್ಬಿಗೆ ಸೂಕ್ತ ಬೆಲೆಗಾಗಿ ಆಗ್ರಹಿಸಿ ಮುಧೋಳ ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಯಿತು. ಬುದ್ನಿ ಪಿಎಮ್ ಗ್ರಾಮದಲ್ಲಿ ರೈತರು ರಸ್ತೆ ತಡೆದು ಟೈರ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮದ್ಯ ಮಾರಾಟ ನಿಷೇಧ, ನಿಷೇಧಾಜ್ಞೆ
ಈ ನಡುವೆ, ಜಿಲ್ಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ, ಮುಧೋಳ ತಾಲೂಕಿನಾದ್ಯಂತ ನವೆಂಬರ್ ೧೯ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಜತೆಗೆ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿದೆ. ದಿಢೀರನೆ ಮದ್ಯ ಮಾರಾಟ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಪಾನಪ್ರಿಯರು ಮದ್ಯದಂಗಡಿಗಳಿಗೆ ದೌಡಾಯಿಸುತ್ತಿರುವ ದೃಶ್ಯ ಕಂಡುಬಂತು.
ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಆದೇಶದಂತೆ ಬುಧವಾರ ಮಧ್ಯಾಹ್ನ 2 ಗಂಟೆಯಿಂದಲೇ ಮದ್ಯ ಮಾರಾಟ, ಸಾಗಾಣಿಕೆ ನಿಷೇಧಿಸಲಾಗಿದೆ.
ಇದನ್ನೂ ಓದಿ | ಉತ್ತರ ಕನ್ನಡ | ಹಳಿಯಾಳದಲ್ಲಿ ತಾರಕಕ್ಕೇರಿದ ಕಬ್ಬು ಬೆಳೆಗಾರರ ಪ್ರತಿಭಟನೆ, ಪೊಲೀಸರಿಂದ ಬಿಗಿ ಬಂದೋಬಸ್ತ್