ಮಂಗಳೂರು: ವಿಷಕಾರಿ ಅಣಬೆಯ (poisonous mushroom) ಸಾಂಬಾರ್ ಸೇವಿಸಿ ತಂದೆ ಮತ್ತು ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಬಳಿ ನಡೆದಿದೆ. ಪುದುವೆಟ್ಟು ಗ್ರಾಮದ ಮಿಯ್ಯಾರು ಪಲ್ಲದಪಲಿಕೆ ನಿವಾಸಿಗಳಾದ ಗುರುವ ಮೇರ (80 ) ಮತ್ತು ಪುತ್ರ ಓಡಿಯಪ್ಪ (41) ಮೃತಪಟ್ಟವರು.
ಮಂಗಳವಾರ ಮುಂಜಾನೆ ಇವರಿಬ್ಬರ ಶವ ಮನೆಯ ಅಂಗಳದಲ್ಲಿ ಪತ್ತೆಯಾಗಿತ್ತು. ಪೊಲೀಸರಿಗೆ ಈ ಸಾವಿನ ಬಗ್ಗೆ ಸಂಶಯ ಬಂದಿತ್ತಾದರೂ ಮನೆಯೊಳಗೆ ಅಣಬೆ ಪದಾರ್ಥ ಮಾಡಿಟ್ಟಿರುವುದನ್ನು ನೋಡಿದ ಬಳಿಕ ಅಣಬೆ ಸಾಂಬಾರ್ ಸೇವಿಸಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ಸ್ಪಷ್ಟಗೊಂಡಿದೆ.
ಮಗ ಓಡಿಯಪ್ಪ ಸೋಮವಾರ ಸಂಜೆ ಕಾಡಿನಿಂದ ಅಣಬೆ ತಂದು ಸಾಂಬಾರ್ ಮಾಡಿದ್ದ. ತಂದೆ ಮತ್ತು ಮಗ ಇಬ್ಬರೂ ರಾತ್ರಿ ಸಾಂಬಾರಿನಲ್ಲಿ ಊಟ ಮಾಡಿದ್ದರು. ಸೋಮವಾರ ರಾತ್ರಿ ಅವರಿಬ್ಬರೇ ಮನೆಯಲ್ಲಿದ್ದರೆಂದು ಹೇಳಲಾಗಿದೆ. ಮಂಗಳವಾರ ಬೆಳಗ್ಗೆ ನೋಡಿದಾಗ ಇಬ್ಬರ ಶವವೂ ಅಂಗಳ ಮತ್ತು ಅದರ ಮೇಲಿನ ಭಾಗದಲ್ಲಿತ್ತು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿನ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದು ದೂರು ನೀಡಿದ ಗುರುವ ಮೇರನ ಮತ್ತೊಬ್ಬ ಮಗ ಕರ್ತ ಹೇಳಿದ್ದಾರೆ.
ಏನಿದು ವಿಷಕಾರಿ ಅಣಬೆ?
ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಳೆಯುವ ಅಣಬೆ ವಿಸ್ತರಿತ ಮಳೆಗಾಲದಲ್ಲಿ ಅಥವಾ ತಂಪನೆಯ ಜಾಗದಲ್ಲಿ ವರ್ಷವಿಡೀ ಬೆಳೆಯುತ್ತದೆ. ಅಂತಹುದೇ ಅಣಬೆಯನ್ನು ಇವರು ಕಾಡಿನ ಭಾಗದಿಂದ ತಂದಿರಬಹುದು ಎಂದು ಹೇಳಲಾಗಿದೆ. ಈ ಅಣಬೆಯ ಕೆಲವು ಪ್ರಭೇದಗಳು ವಿಷಕಾರಿಯಾಗಿದ್ದು, ಇವರು ತಂದಿರುವುದು ಅಂಥಹುದೇ ವಿಷಕಾರಿ ಅಣಬೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ವಿಷಕಾರಿ ಅಣಬೆಗಳು ಇವು
ಅಮಾನಿಟ ಫೆಲ್ಲಾಯ್ ಡಿಸ್: ಅಮಾನಿಟ ಫೆಲ್ಲಾಯ್ ಡಿಸ್ ಎಂಬ ಅಣಬೆ ಅತ್ಯಂತ ಅಪಾಯಕಾರಿ. ೯೦% ರಷ್ಟು ಸಾವುಗಳಿಗೆ ಈ ಅಣಬೆ ಕಾರಣವಾಗಿದೆ. ಇದಕ್ಕೆ ಬೆಳ್ಳಗಿರುವ ತೊಟ್ಟಿದ್ದು, ದೊಡ್ಡ ಹಸಿರು ಮಿಶ್ರಿತ ಬಿಳುಪಿನ ವೃತ್ತಾಕಾರದ ಟೋಪಿಯಿದ್ದು ಅದರಲ್ಲಿರುವ ಪದರಗಳು ಎಳೆಯದಾಗಿರುವಾಗ ಬೆಳ್ಳಗಿದ್ದು ಅನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ವಿಷಕಾರಿ ಅಣಬೆಯಾಗಿರುವುದು ಇದರಲ್ಲಿರುವ ಫೆಲ್ಲಾಡಿನ್ ಮತ್ತು ಅಮಾನಿಟೀನ್ ಎಂಬ ರಾಸಾಯನಿಕ ವಸ್ತುಗಳಿಂದ. ಈ ಅಣಬೆಯನ್ನು ಸೇವಿಸಿದಾಗ ಹೊಟ್ಟೆನೋವು,ವಾಂತಿ,ಭೇದಿ,ವಿಪರೀತ ಬಾಯಾರಿಕೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೇವಿಸಿದ ಅನಂತರ ೬ರಿಂದ ೪೦ ಗಂಟೆಯೊಳಗೆ ರೋಗಲಕ್ಷಣಗಳು ಕಾಣಿಸಿಕೊಂಡು ೪-೫ ದಿನಗಳಲ್ಲಿ ಸಾವು ಸಂಭವಿಸುತ್ತದೆ. ತಿಂದವರು ಗುಣಮುಖವಾಗುವುದು ಅಪರೂಪ.
ಅಮಾನಿಟ ಮ್ಯಾಕ್ಸೆರಿಯಾ: ಅಮಾನಿಟ ಮ್ಯಾಕ್ಸೆರಿಯಾ ಎಂಬ ಮತ್ತೊಂದು ಅಣಬೆಯೂ ವಿಷಯುಕ್ತವಾದುದು. ಸಾಮಾನ್ಯವಾಗಿ ಕಪ್ಪು ಬಣ್ಣದ್ದಾಗಿದ್ದು, ಹಳದಿ ಎಲೆಗಳನ್ನು ಹೊಂದಿದೆ. ಬಿಳಿಯ ಪದರಗಳೂ ಅವುಗಳ ಮೇಲೆ ಹಳದಿ ಚುಕ್ಕೆಗಳೂ ಇವೆ;ಅವಕ್ಕೆ ಸೂಕ್ಷ್ಮವಾದ ಹಲ್ಲುಗಳಿವೆ. ಹಿಂದೆ ಈ ಅಣಬೆಯನ್ನು ರಷ್ಯದಲ್ಲಿ ಮಾದಕ ವಸ್ತುವನ್ನು ತಯಾರಿಸಲು ಉಪಯೋಗಿಸುತ್ತಿದ್ದರು. ಯೂರೋಪಿನ ಹಲವು ದೇಶಗಳಲ್ಲೂ ರಷ್ಯದಲ್ಲೂ ತಿಗಣೆ, ಕ್ರಿಮಿ ಮುಂತಾದುವುಗಳನ್ನು ಕೊಲ್ಲಲು ಇದನ್ನು ಕ್ರಿಮಿನಾಶಕವಾಗಿ ಉಪಯೋಗಿಸುವರು. ಅಮಾನಿಟ ಪಾಂತರೀನ, ರುಸುಲಾ ಎಮೆಟಿಕಾ, ಗೈರೊ ಮಿತ್ರ ಎಸ್ ಕ್ಯುಲೆಂಟಾ, ಸ್ಟ್ರೊಫೆರಿಯಾ ಸೆಮಿಗ್ಲೊಬೆಲಾ, ಲಾಕ್ಟೇರಿಯಸ್ ವೆಲ್ಲಾರಿಸ್, ಲೆಪಿಯೋಟಾ ಎರಿಸ್ ಟೇಟ, ಮಾರಸ್ಮಿಯಸ್ ಯರೆನ್ಸ್-ಇವು ವಿಷಕಾರಿ ಅಣಬೆಗಳು.