ಶಿವಮೊಗ್ಗ: ನಗರದ ತುಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಳದ ಕೊರಮಕೇರಿಯಲ್ಲಿ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರಿಂದ ತಂದೆ-ಮಗನಿಗೆ ಗಂಭೀರ ಗಾಯಗಳಾಗಿರುವ ಘಟನೆ ಶನಿವಾರ ನಡೆದಿದೆ. 15-20 ಜನರಿದ್ದ ಯುವಕರ ಗುಂಪು, ದೊಣ್ಣೆ, ಚೂರಿಯಿಂದ ಹಲ್ಲೆ (Assault Case) ನಡೆಸಿ ಪರಾರಿಯಾಗಿದೆ.
ತಿಮ್ಮಪ್ಪ ಮತ್ತು ದರ್ಶನ್ ಗಾಯಾಳುಗಳು. ಗೋಪಾಳ ಬಡಾವಣೆಯ ಕೊರಮಕೇರಿ 2ನೇ ತಿರುವಿನ ಮಾರಿಯಮ್ಮ ದೇವಾಲಯದ ಬಳಿ ತಿಮ್ಮಪ್ಪ ಮೇಲೆ ಅನ್ಯಕೋಮಿನ ಯುವಕರ ಗುಂಪು ದಾಳಿ ನಡೆಸಿದೆ. ದೊಣ್ಣೆಯಿಂದ ಹೊಡೆದಿದ್ದರಿಂದ ಅವರ ತಲೆಗೆ ಗಂಭೀರ ಗಾಯವಾಗಿದೆ. ಈ ವೇಳೆ ತಂದೆಯನ್ನು ರಕ್ಷಿಸಲು ಬಂದ ಮಗ ದರ್ಶನ್ ಮೇಲೂ ಚೂರಿಯಿಂದ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಮನು ಎಂಬಾತನ ಮೇಲೂ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ | Bengaluru Police : ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಪೊಲೀಸರ ಹದ್ದಿನ ಕಣ್ಣು
ಹಲ್ಲೆ ನಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಕೂಡ ಸ್ಥಳಕ್ಕೆ ಧಾವಿಸಿ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಗ್ಯಾರೇಜ್
ಕಾರವಾರ: ಆಕಸ್ಮಿಕ ಬೆಂಕಿ ತಗುಲಿ ಗ್ಯಾರೇಜ್ ಸುಟ್ಟು ಕರಕಲಾದ ಘಟನೆ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಕರ್ನಲ್ ಹಿಲ್ ಬಳಿ ನಡೆದಿದೆ. ಪ್ರಕಾಶ್ ಎಂಬುವವರ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,
ಗ್ಯಾರೇಜ್‌ನಲ್ಲಿದ್ದ ಟಯರ್‌ಗಳಿಗೆ ಬೆಂಕಿ ತಗುಲಿದ್ದರಿಂದ ದಟ್ಟ ಹೊಗೆ ಆವರಿಸಿ ಬೆಂಕಿ ಹೊತ್ತಿ ಉರಿದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಕರೆಂಟ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿಯ ತೀವ್ರತೆಗೆ ಗ್ಯಾರೇಜ್‌ನಲ್ಲಿದ್ದ ಪರಿಕರಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಹೊನ್ನಾವರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.