Site icon Vistara News

Honor Killing: ಪ್ರೀತಿಯ ಬಲೆಗೆ ಬಿದ್ದಳೆಂದು ಮಗಳನ್ನೇ ಕೊಚ್ಚಿ ಕೊಂದ ತಂದೆ

Parappana Agrahara police station

ಆನೇಕಲ್: ಸಿಲಿಕಾನ್ ಸಿಟಿಯಲ್ಲಿ ಮರ್ಯಾದಾ ಹತ್ಯೆ (Honor Killing) ನಡೆದಿದೆ. ಪ್ರೀತಿಯ ಬಲೆಗೆ ಬಿದ್ದಳೆಂದು ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ ಲೇಔಟ್‌ನಲ್ಲಿ ನಡೆದಿದೆ.

ಪಲ್ಲವಿ (17) ಕೊಲೆಯಾದ ಯುವತಿ. ಗಣೇಶ್ ಹತ್ಯೆ ಮಾಡಿದ ತಂದೆ. ಎಚ್.ಡಿ ಕೋಟೆ ಮೂಲದ ಗಣೇಶ್ ಹಾಗೂ ಶಾರದಾ ದಂಪತಿಯ ಪುತ್ರಿ ಪಲ್ಲವಿ, ಶಾಲೆಗೆ ಹೋಗುವಾಗ ಮನೋಜ್‌ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರವನ್ನು ತಿಳಿದ ಪಾಲಕರು ಎಚ್.ಡಿ ಕೋಟೆಯಿಂದ ನಾಗನಾಥಪುರಕ್ಕೆ ಹುಡುಗಿಯನ್ನು ಕರೆತಂದು ಬಿಟ್ಟಿದ್ದರು.

ನಾಗನಾಥಪುರದ ಮಾವ ಶಾಂತಕುಮಾರ್ ಮನೆಯಲ್ಲಿದ್ದ ಯುವತಿ, ಅ.14ರಂದು ಪ್ರೀತಿಸಿದ ಹುಡುಗನ ಜತೆ ಮನೆ ಬಿಟ್ಟು ಹೋಗಿದ್ದಳು. ಅ. 20ರಂದು ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದರು. ಪೊಲೀಸ್ ಠಾಣೆಯಿಂದ ಪಲ್ಲವಿಯನ್ನು ಮಾವ ಶಾಂತ ಕುಮಾರ್ ಮನೆಗೆ ಕರೆದೊಯ್ದಿದ್ದರು.

ಶನಿವಾರ ಬೆಳಗ್ಗೆ ನಾಗನಾಥಪುರಕ್ಕೆ ಬಂದಿದ್ದ ಹುಡುಗಿಯ ತಂದೆ ಗಣೇಶ್, ಪತ್ನಿ ಶಾರದಾ ಮತ್ತು ಪಲ್ಲವಿ ಜತೆ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಮಚ್ಚಿನಿಂದ ಕೊಚ್ಚಿ ಮಗಳನ್ನು ಕೊಂದಿದ್ದಾನೆ. ಬಿಡಿಸಲು ಬಂದ ಪತ್ನಿ ಶಾರದಾ ಹಾಗೂ ಬಾಮೈದ ಶಾಂತಕುಮಾರ್ ಮೇಲೆ ಕೂಡ ಹಲ್ಲೆ ಮಾಡಿದ್ದಾನೆ.

ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಎರಡು ಕಾರುಗಳ ನಡುವೆ ಅಪಘಾತ; ವ್ಯಕ್ತಿ ಸಾವು

ಬೆಂಗಳೂರು: ಎರಡು ಕಾರುಗಳ ನಡುವೆ ಅಪಘಾತ ನಡೆದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಕೆಂಪೇಗೌಡ ಏರ್‌ಪೋರ್ಟ್‌ ರಸ್ತೆಯ ಕೋಗಿಲು ಫ್ಲೈ ಓವರ್ ಮೇಲೆ ನಡೆದಿದೆ.

ದೇವನಹಳ್ಳಿ ಕಡೆಯಿಂದ ನಗರಕ್ಕೆ ಬರುತ್ತಿದ್ದ ಕಾರು, ವೇಗವಾಗಿ ಬಂದು ರಸ್ತೆ ಮಧ್ಯದ ಡಿವೈಡರ್ ಹಾರಿ ಮತ್ತೊಂದು ಬದಿಯಲ್ಲಿ ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಶೇಕ್ ಮೊಹಮ್ಮದ್ ಎಂಬಾತ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Mangalore News : ಟಾಯ್ಲೆಟ್‌ ರೂಂನಲ್ಲಿ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡ ಪಿಎಸ್‌ಐ!

ಶೇಕ್ ಮೊಹಮ್ಮದ್ ಸ್ನೇಹಿತರ ಜತೆ ದೇವನಹಳ್ಳಿ ಕಡೆಯಿಂದ ಬರುತ್ತಿದ್ದಾಗ ಅಪಘಾತ ನಡೆದಿದೆ. ಈ ವೇಳೆ ಅವರ ಜತೆಗಿದ್ದ ಮೂವರು ಸ್ನೇಹಿತರಿಗೂ ಗಾಯಗಳಾಗಿವೆ. ಅಲ್ಲದೇ ಮತ್ತೊಂದು ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಲಕ್ಷ್ಮೀ, ನರೇಂದ್ರ ಹಾಗೂ ಅವರ ಮಗಳಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version