ಮಂಗಳೂರು: ಸುರತ್ಕಲ್‌ನಲ್ಲಿ ನಡೆದಿದ್ದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಆರು ಮಂದಿಯಲ್ಲಿ ನಾಲ್ವರು ಬಜರಂಗ ದಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಉಳಿದ ಇಬ್ಬರು ಅವರ ಗೆಳೆಯರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ, ಅಭಿಷೇಕ್, ದೀಕ್ಷಿತ್ ಕಾಟಿಪಳ್ಳ, ಸುಹಾಸ್, ಮೋಹನ್ ಸಿಂಗ್ ಮತ್ತು ಗಿರೀಶ್ ಎಂದು ಗುರುತಿಸಲಾಗಿದೆ. ಶ್ರೀನಿವಾಸ ಕಾಟಿಪಳ್ಳ ಅವರು ಸುರತ್ಕಲ್ ಪ್ರಖಂಡದ ಸುರಕ್ಷಾ ಪ್ರಮುಖ್ ಆಗಿದ್ದರೆ, ಅಭಿಷೇಕ್ ಕಾಟಿಪಳ್ಳದ ಭಜರಂಗದಳ ಘಟಕದ ಸಹಸಂಚಾಲಕರು, ದೀಕ್ಷಿತ್ ಕಾಟಿಪಳ್ಳ ಕಾಟಿಪಳ್ಳದ ಬಜರಂಗ ದಳ ಘಟಕದ ಮತ್ತೊಬ್ಬ ಸಹಸಂಚಾಲಕರಾಗಿದ್ದಾರೆ. ಸುಹಾಸ್ ಸುರತ್ಕಲ್ ಬಳಿಯ ಕಳವಾರು ಘಟಕದ ಕಾರ್ಯಕರ್ತ. ಮತ್ತಿಬ್ಬರು ಆರೋಪಿಗಳಾದ ಮೋಹನ್ ಮತ್ತು ಗಿರೀಶ್ ಅವರು ಸುಹಾಸ್‌ನ ಗೆಳೆಯರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಏಳೆಂಟು ತಂಡದಿಂದ ಕಾರ್ಯಾಚರಣೆ ಮೂಲಕ ಬಂಧನ ನಡೆದಿದೆ. ಮೊದಲಿಗೆ ಬಂಧಿತನಾದ ಕಾರು ಮಾಲೀಕ ಅಜಿತ್ ನೀಡಿದ ಸುಳಿವಿನಂತೆ ಉಳಿದ ಆರೋಪಿಗಳ ಬಂಧನ ಸಾಧ್ಯವಾಗಿದೆ. ಮೂರು ದಿನಗಳಿಗೆ 15 ಸಾವಿರ ರೂ. ಬಾಡಿಗೆಗೆ ಆತನನ್ನು ಗೊತ್ತುಪಡಿಸಲಾಗಿತ್ತು. ಈತನೂ ಕೊಲೆ ಕೃತ್ಯದಲ್ಲಿ ಭಾಗಿ ಎಂದು ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ , ಚಿಕ್ಕಮಗಳೂರು, ಕೇರಳದಲ್ಲಿ ಹುಡುಕಾಟ ನಡೆಸಲಾಗಿತ್ತು. ಆರೋಪಿಗಳನ್ನು ಭಾನುವಾರ ಮುಂಜಾನೆ ಉಡುಪಿ ತಾಲೂಕಿನ ಉದ್ಯಾವರದಲ್ಲಿ ಬಂಧಿಸಲಾಗಿದೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ.
ಫಾಝಿಲ್‌ನನ್ನೇ ಟಾರ್ಗೆಟ್ ಮಾಡಿದ್ದರು
ಜುಲೈ 28ರಂದು ರಾತ್ರಿ 8 ಗಂಟೆಯ ಹೊತ್ತಿಗೆ ಬಟ್ಟೆ ಶಾಪ್ ಒಂದರ ಹೊರಗೆ ನಿಂತಿದ್ದ ಫಾಝಿಲ್‌ನನ್ನು ಬಿಳಿ ಕಾರಿನಲ್ಲಿ ಬಂದಿದ್ದ ಹಂತಕರು ಕೊಲೆ ಮಾಡಿದ್ದರು. ಆರಂಭದಲ್ಲಿ ಇದೊಂದು ಮಿಸ್ಟೇಕನ್ ಐಡೆಂಟಿಟಿ ಅಂದರೆ ಯಾರನ್ನೋ ಕೊಲೆ ಮಾಡುವ ಬದಲು ತಪ್ಪಿ ಫಾಝಿಲ್ ಕೊಲೆಯಾಗಿದೆ ಎಂದು ಹೇಳಲಾಗುತ್ತಿತ್ತು. ಯಾಕೆಂದರೆ, ಫಾಝಿಲ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಗಳು ಇರಲಿಲ್ಲ. ಈ ಮಧ್ಯೆ ಮೊಬೈಲ್ ಅಂಗಡಿಯೊಂದರ ಮಾಲೀಕನಾಗಿರುವ ಫಾರೂಕ್ ಎಂಬಾತ ತನ್ನನ್ನು ಯಾರೋ ಹಿಂಬಾಲಿಸಿದ್ದರು ಎಂದು ದೂರು ನೀಡಿದ್ದ.
ಆದರೆ, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಹಂತಕರು ಫಾಝಿಲ್‌ನನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿ ಅದನ್ನು ಸಾಧಿಸಿದ್ದಾರೆ. ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ್ದಕ್ಕೆ ಪ್ರತಿಯಾಗಿ 27 ರಂದು ಯಾರನ್ನಾದ್ರೂ ಕೊಲ್ಲಬೇಕು ಅಂತಾ ಪ್ಲಾನ್ ಮಾಡಿದ್ರು ಎನ್ನಲಾಗಿದೆ.
ಹಂತಕರ ಕಾರ್ಯಾಚರಣೆ ಹೇಗಿತ್ತು?
ಸುಹಾಸ್ ಶೆಟ್ಟಿ ಮತ್ತು ಗಿರಿಧರ್ ಅವರು ಕೊಲೆಯ ಪ್ಲ್ಯಾನ್ ರೂಪಿಸಿದ್ದು, ಮೋಹನ್ ಆತನ ಸ್ನೇಹಿತನ ಮೂಲಕ ಕಾರು ಬಾಡಿಗೆ ಪಡೆದಿದ್ದ. ಜು. 27ರಂದು ಮೂವರು ಚರ್ಚೆ ಮಾಡಿ ಯಾರನ್ನು ಕೊಲ್ಲಬೇಕು ಎಂದು ತೀರ್ಮಾನ ಮಾಡಿದ್ದರು. 27ರಂದು ಪ್ಲಾನ್ ವರ್ಕೌಟ್ ಆಗದ ಹಿನ್ನೆಲೆಯಲ್ಲಿ 28ರಂದು ಕೊಲೆ ಮಾಡಲಾಗಿದೆ.
ಕೊನೆಗೆ ಫಾಝಿಲ್‌ನನ್ನೇ ಕೊಲೆ ಮಾಡುವುದು ಎಂದು ತೀರ್ಮಾನಿಸಲಾಗಿದೆ. ಸುಹಾಸ್ ಮತ್ತು ಸ್ನೇಹಿತರು ಕೊಲೆಗೆ ಮೊದಲು ಕಾರಿಂಜದ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಅಲ್ಲಿ ಆವತ್ತು ಆಟಿ ಅಮಾವಾಸ್ಯೆ ಸ್ನಾನ ಇತ್ತು.
ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸುಖೇಶ್, ಮೋಹನ್ ಮತ್ತು ಅಭಿಷೇಕ್ ಅವರು ಸೇರಿ ಈ ಕೆಲ ಮಾಡಿದ್ದಾರೆ. ಅವರನ್ನು ಆ ಜಾಗಕ್ಕೆ ಕಾರಿನಲ್ಲಿ ತಂದು ಬಿಟ್ಟವನು ಶ್ರೀನಿವಾಸ್. ಗಿರೀಶ್ ಮತ್ತು ದೀಕ್ಷಿತ್ ಕಾರಿನಲ್ಲೇ ಕುಳಿತು ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನ್ನೂ ಓದಿ| ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಪ್ರಕರಣ: ಎಲ್ಲ ಆರೋಪಿಗಳ ಬಂಧನ