ಮೈಸೂರು: ಪಿಎಸ್ಐ, ಕೆಪಿಟಿಸಿಎಲ್ ಹಾಗೂ ಶಿಕ್ಷಕರ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆದು ಹಲವರನ್ನು ಬಂಧಿಸಿದ ನಡುವೆಯೇ ಮೈಸೂರಿನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಆಡಿಯೊ ಒಂದು ಬಿಡುಗಡೆಯಾಗಿದೆ.
ಮೈಸೂರಿನಲ್ಲಿ ಪಿಎಸ್ಐ ಆಗಿರುವ ಅಶ್ವಿನಿ ಅನಂತಪುರ ಅವರು ಸಂಗಮೇಶ್ ಜಲಕಿ ಎಂಬ ಅಭ್ಯರ್ಥಿ ಜತೆ ಮಾತನಾಡಿರುವ ಸುಮಾರು ೩೦ ನಿಮಿಷಗಳ ಆಡಿಯೊವನ್ನು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಬೆಸ್ಕಾಂ ಹುದ್ದೆಗಳು ಮತ್ತು ಎಫ್‌ಡಿಎ ಹುದ್ದೆಗಳ ಬಗ್ಗೆಯೂ ಚರ್ಚೆ ನಡೆದಿದೆ.
ಆಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ಎಂ. ಲಕ್ಷ್ಮಣ್, ಅಶ್ವಿನಿ ಮೂಲತಃ ಭಾಗಲಕೋಟೆಯ ಜಮಖಂಡಿಯವರು. ಪಿಎಸ್‌ಐ ಹಗರಣಕ್ಕೆ ಸಂಬಂಧಪಟ್ಟ ಡೀಲ್ ನ ಜತೆಗೆ ಬೆಸ್ಕಾಂ, ಚೆಸ್ಕಾಂ, ಎಫ್‌ಡಿಐ ಸೇರಿದಂತೆ ನಾನಾ ಹುದ್ದೆಗಳ ನೇಮಕಾತಿ ಬಗ್ಗೆಯೂ ಮಾತನಾಡಿದ್ದಾರೆ. ಇವರು ಮೈಸೂರಿನ ವಿಷಯ ಮಾತನಾಡುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಈ ರೀತಿ ಡೀಲ್ ಕುದುರಿಸುವವರು ಇದ್ದಾರೆ ಎಂದು ಆರೋಪಿಸಿದರು.
ಅಶ್ವಿನಿ ಅನಂತಪುರ ಅವರು ಮೈಸೂರಿನ ಎನ್ಆರ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದಾರೆ. ಇವರು೨೦ ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾರೆ. ಹತ್ತು ಬಾರಿ ಹಣ ವರ್ಗಾವಣೆಯಾಗಿದೆ. ಇದೊಂದು ದೊಡ್ಡ ವ್ಯವಹಾರ. ಬೆಸ್ಕಾಂ ಹುದ್ದೆಯ ಬಗ್ಗೆಯೂ ಡೀಲ್ ನಡೆದಿದೆ ಎಂದು ಆರೋಪಿಸಲಾಗಿದೆ. ಸರಕಾರದ ಬೆಂಬಲವಿಲ್ಲದೆ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆಡಿಯೋದಲ್ಲಿ ಯಾರಿಗೆ ದುಡ್ಡು ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ, ಬಿಜೆಪಿ ಮಂತ್ರಿಗಳು ಈ ಹಗರಣದ ಹಿಂದೆ ಇದ್ದಾರೆ ಎನ್ನುವುದು ಸ್ಪಷ್ಟ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | PSI Scam | ಕಾನೂನು ಸಚಿವರ Law ಪಾಯಿಂಟ್‌ಗೆ ತಲೆಯಾಡಿಸಿ ಸುಮ್ಮನಾದ ಲಾಯರ್ ಸಿದ್ದರಾಮಯ್ಯ !