ಬೆಂಗಳೂರು: ವಿಧಾನಸೌಧದ ಸಚಿವರ ಕೋಣೆಗಳನ್ನು ಪ್ರವೇಶಿಸಲು, ಅಲ್ಲಿರುವ ಕುರ್ಚಿಯಲ್ಲಿ ಕೂರಲು ಎಲ್ಲ ಶಾಸಕರೂ ಆಸೆಪಡುತ್ತಾರೆ. ಆದರೆ ಒಂದು ಕೊಠಡಿ (Room number 329) ಕಂಡರೆ ಮಾತ್ರ ಭಯಪಡುತ್ತಾರೆ!
ಹೌದು, ಶಕ್ತಿಸೌಧದ ಆ ಒಂದು ಕೊಠಡಿ ಪ್ರವೇಶಿಸಲು ಹೆಚ್ಚಿನ ಸಚಿವರಲ್ಲಿ ಭಯವಿದೆ. ಹೀಗಾಗಿ ಹಲವು ಸಚಿವರು, ತಮಗೆ ಆ ಕೊಠಡಿ ಅಲಾಟ್ ಆದರೂ ತಮಗದು ಬೇಡ ಎಂದು ವಾಪಸ್ ಮಾಡಿದ್ದಾರೆ. ಬೇರೆ ಕೊಠಡಿ ಪಡೆದು ಅಲ್ಲಿಗೆ ಹೋಗಿದ್ದಾರೆ.
ವಿಧಾನಸೌಧದ ಆ ಕೊಠಡಿ ಸಂಖ್ಯೆ 329. ಆ ಕೊಠಡಿ ಪಡೆದು ಆ ನಂತರ ಬೇರೆ ಕೊಠಡಿಗೆ ಸಚಿವ ವೆಂಕಟೇಶ್ ಬದಲಾವಣೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಕೊಠಡಿ ಪ್ರವೇಶಿಸಲು ಸಚಿವರು ಹಿಂದೇಟು ಹಾಕಿದ್ದು ಯಾಕೆ?
ಈ ಕೊಠಡಿಯಲ್ಲಿ ಹಿಂದೆ ಕುಳಿದ್ದ ಸಚಿವರು ಅಧಿಕಾರದ ಅವಧಿಯಲ್ಲಿ ಮರಣ ಹೊಂದಿದ್ದಾರೆ ಎಂಬ ವಿವರವೇ ಹಲವು ಸಚಿವರಲ್ಲಿ ಆತಂಕ ಹುಟ್ಟಿಸಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಈ ಕೊಠಡಿ ಪಡೆದಿದ್ದ ಹೆಚ್.ಎಸ್ ಮಹದೇವಪ್ರಸಾದ್, ಸಚಿವರಾಗಿದ್ದಾಗಲೇ ತೀರಿಕೊಂಡಿದ್ದರು. ಆ ನಂತರ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಈ ಕೊಠಡಿ ಪ್ರವೇಶಿಸಿದ್ದ ಉಮೇಶ್ ಕತ್ತಿ ಅವರು ಕೂಡ ಸಚಿವರಾಗಿದ್ದಾಗಲೇ ನಿಧನ ಹೊಂದಿದ್ದರು. ಇದರಿಂದಾಗಿ ಈ ಕೊಠಡಿ ಪ್ರವೇಶ ಮಾಡಲು ಸಚಿವರು ಹಿಂಜರಿಯುತ್ತಿದ್ದಾರೆ.
ಬೇರೆ ಸಚಿವರು ಯಾರೂ ಹೋಗದ ಕಾರಣ ಕೊನೆಗೆ ಈ ಕೊಠಡಿಯನ್ನು ನಜೀರ್ ಅಹಮದ್ ಪ್ರವೇಶಿಸಿದ್ದಾರೆ. ʼಮೂಢನಂಬಿಕೆ ಬಿಟ್ಟು ಮುಂದೆ ನಡಿʼ ಎಂದು ಸಿದ್ದರಾಮಯ್ಯ ಅವರು ಬೆನ್ನು ತಟ್ಟಿದ್ದು, ಸಿದ್ದರಾಮಯ್ಯ ಅವರ ಸೂಚನೆಯಂತೆ ನಜೀರ್ ಅಹಮದ್ ಕೊಠಡಿ ಪ್ರವೇಶ ಮಾಡಿದ್ದಾರೆ. ನಜೀರ್ ಅಹಮದ್ ವಿಧಾನಪರಿಷತ್ ಸದಸ್ಯ ಹಾಗೂ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ.
ಇದನ್ನೂ ಓದಿ: Assembly Session: ಸ್ಪೀಕರ್ ಆಗಿದ್ದವರು ಸೋಲ್ತಾರೆ ಎನ್ನೋದು ಮೂಢನಂಬಿಕೆ: ನಂಬೋಲ್ಲ ಎಂದ ಯು.ಟಿ. ಖಾದರ್