Site icon Vistara News

ತುಮಕೂರಿನಲ್ಲಿ ಆರದ ಫ್ಲೆಕ್ಸ್‌ ವಿವಾದ, ಗಣೇಶೋತ್ಸವಕ್ಕೆ ಹಾಕಿದ ಸಾವರ್ಕರ್‌, ತಿಲಕ್‌ ಚಿತ್ರವಿರುವ ಬ್ಯಾನರ್ ತೆರವು

tumkur flex

ತುಮಕೂರು: ತುಮಕೂರು ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಾವರ್ಕರ್‌ ಭಾವಚಿತ್ರವಿರುವ ಫ್ಲೆಕ್ಸ್‌ಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಈಗ ಗಣೇಶೋತ್ಸವದ ಸಂದರ್ಭದಲ್ಲೂ ಫ್ಲೆಕ್ಸ್‌ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ಹೇಗಿದೆ ಎಂದರೆ ಗಣೇಶೋತ್ಸವ ಸಂಬಂಧ ಹಾಕಲಾದ ಸಾವರ್ಕರ್‌ ಮತ್ತು ಬಾಲಗಂಗಾಧರ ತಿಲಕರ ಚಿತ್ರವಿರುವ ಫ್ಲೆಕ್ಸ್‌ಗಳನ್ನು ಕೂಡಾ ಪಾಲಿಗೆ ಗುರುವಾರ ರಾತ್ರಿ ತೆರವು ಮಾಡಿದೆ.

ಫ್ಲೆಕ್ಸ್‌ಗಳು ಸಾಮಾಜಿಕವಾಗಿ ಅಶಾಂತಿ ಮೂಡಿಸುವ ಅಪಾಯವಿದೆ ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ತಡರಾತ್ರಿ ತೆರವು ಕಾರ್ಯಾಚರಣೆ ನಡೆದಿದೆ.
ಗಣೇಶೋತ್ಸವಕ್ಕೆ ಶುಭ ಕೋರಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಈ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಪ್ರಮುಖವಾಗಿ ವೀರ್‌ ಸಾವರ್ಕರ್ ಹಾಗೂ ಬಾಲಗಂಗಾಧರ್ ತಿಲಕ್ ಅವರ ಭಾವಚಿತ್ರವಿರುವ ಪ್ಲೆಕ್ಸ್ ಅಳವಡಿಕೆ ಮಾಡಲಾಗಿದೆ.

ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆ, ದಾಸಪ್ಪ ಪಾರ್ಕ್ ಬಳಿ ಈ ಫ್ಲೆಕ್ಸ್‌ ಅಳವಡಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಕಾರ್ಯಕರ್ತರು ಐದು ಕಡೆ ಫ್ಲೆಕ್ಸ್‌ಗೆ ಅನುಮತಿ ಪಡೆದಿದ್ದರು. ಆದರೆ, ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಫ್ಲೆಕ್ಸ್‌ ಹಾಕಲಾಗಿದೆ. ಈಕಾರಣಕ್ಕಾಗಿ ಅನಧಿಕೃತವಾಗಿ ಹಾಕಿದ ಫ್ಲೆಕ್ಸ್‌ಗಳನ್ನು ತೆರವು ಮಾಡಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್‌ ಅವರು ಹಾಕಿಸಿದ್ದ ಫ್ಲೆಕ್ಸ್‌ಗಳ ಪೈಕಿ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ನ್ನು ದುಷ್ಕರ್ಮಿಗಳು ಹಾಳುಗೆಡವಿದ್ದರು. ಅದರಲ್ಲೂ ಮುಖ್ಯವಾಗಿ ಸಾವರ್ಕರ್‌ ಚಿತ್ರವಿರುವ ಭಾಗವನ್ನು ಮಾತ್ರ ಹಾನಿ ಮಾಡಲಾಗಿತ್ತು.

Exit mobile version