Site icon Vistara News

Fertilizer Problem | ರೈತರೇ, ರಸಗೊಬ್ಬರ ಖರೀದಿಗೆ ಮುನ್ನ ಇರಲಿ ಎಚ್ಚರ; ಕೊಡುತ್ತಾರೆ ಕಲ್ಲು-ಮಣ್ಣಿನ ಚೀಲ!

farmer_fertilizer_chikkodi

ಮಂಜುನಾಥ ಹುಡೇದ, ಚಿಕ್ಕೋಡಿ
ಇದು ರಾಜ್ಯದ ಎಲ್ಲರ ರೈತರೂ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಸುದ್ದಿ. ಕೃಷಿಕರಿಗೆ ಬಹುಮುಖ್ಯವಾಗಿ ಉತ್ತಮ ಬೀಜಗಳ ಜತೆ ರಸಗೊಬ್ಬರವೂ (Fertilizer Problem) ಬೇಕು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಜಾಲವೊಂದು ವ್ಯವಸ್ಥಿತವಾಗಿ ಕಲ್ಲು-ಮಣ್ಣುಗಳ ಸಹಿತ ಕಳಪೆ ರಸಗೊಬ್ಬರವನ್ನು ಮಾರಾಟ ಮಾಡುತ್ತಿದೆ. ಹೀಗಾಗಿ ಖರೀದಿಗೆ ಮುನ್ನ ಜಾಗ್ರತೆ ವಹಿಸಬೇಕಾಗಿದೆ.

ರಾಜ್ಯದಲ್ಲಿ ಕಳೆದು ೨-೩ ತಿಂಗಳಿನಿಂದ ರಸಗೊಬ್ಬರಗಳ ಕೊರತೆ ಅತಿಯಾಗಿ ಕಾಡಿದೆ. ದಿನ ಬೆಳಗಾದರೆ ರೈತರು ಅಧಿಕೃತ ರಸಗೊಬ್ಬರ ಮಳಿಗೆಗಳು, ಸೊಸೈಟಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು, ಕೊನೆಗೆ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸುವುದು, ಸರ್ಕಾರಕ್ಕೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ನಡೆದೇ ಇದೆ. ಈ ನಡುವೆ ಇದನ್ನೇ ಟಾರ್ಗೆಟ್‌ ಮಾಡಿಕೊಂಡಿರುವ ಗುಂಪೊಂದು ರಸಗೊಬ್ಬರ ಎಂದು ಹೇಳಿ ಅದರೊಳಗೆ ಮಣ್ಣು-ಕಲ್ಲುಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ರಸಗೊಬ್ಬರ ಚೀಲದಲ್ಲಿ ಸಿಕ್ಕಿದ ಕಲ್ಲುಗಳು.

ರೈತರೊಬ್ಬರಿಗೆ ರಸಗೊಬ್ಬರ ದೋಖಾ!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ರೈತ ದಾನಪ್ಪ ಮಲಾಬಾದ್ ಎಂಬುವರು ಖರೀದಿಸಿರುವ ರಸಗೊಬ್ಬರದಲ್ಲಿ ಈ ದೋಖಾ ಬಯಲಾಗಿದೆ. ಅವರು ಖರೀದಿ ಮಾಡಿ ತಂದ ರಸಗೊಬ್ಬರದ ಚೀಲವನ್ನು ಒಡೆದು ನೋಡಿದರೆ ಅದರಲ್ಲಿ ಕಂಡಿದ್ದು ಕಲ್ಲು ಮಣ್ಣು! ಇದು ಅವರನ್ನು ಕಂಗಾಲಾಗಿಸಿದ್ದು, ಮಾಧ್ಯಮಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ | GST Rate | ಮತ್ತಷ್ಟು ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆ ಸಂಭವ

ಏನಿದು ಪ್ರಕರಣ?
ಅಥಣಿ ತಾಲೂಕಿನಲ್ಲಿ ರಸಗೊಬ್ಬರದ ಅಭಾವ ಬಹುವಾಗಿ ಕಾಡುತ್ತಲಿತ್ತು. ತಾಲೂಕಿನ ವಿವಿಧೆಡೆ ರಸಗೊಬ್ಬರ ಖರೀದಿಗೆ ಪ್ರಯತ್ನಪಟ್ಟು ಸಿಗದೇ ಇದ್ದಾಗ ಸುಟ್ಟಟ್ಟಿ ಗ್ರಾಮದ ರೈತ ದಾನಪ್ಪ ಮಲಾಬಾದ್ ಪಕ್ಕದ ಜಿಲ್ಲೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಪಿಕೆಪಿಎಸ್ ಒಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಹೇಳಿದ್ದು, ಅವರಿಂದ ೬೦೦ ರೂಪಾಯಿಯಂತೆ ೫೦ ಕೆಜಿಯ ಎರಡು ರಸಗೊಬ್ಬರ ಚೀಲವನ್ನು ತಂದಿದ್ದರು. ಎಲ್ಲ ರಸಗೊಬ್ಬರದಂತೆ ಎಂದು ತಿಳಿದು ಅದನ್ನು ಪರಿಶೀಲನೆ ಮಾಡದೆ ಮನೆಗೆ ತಂದಿದ್ದಾರೆ.

ಬಳಿಕ ಆ ರಸಗೊಬ್ಬರವನ್ನು ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ಹಾಕಬೇಕೆಂದು ಹೊತ್ತೊಯ್ದಿದ್ದಾರೆ. ಜಮೀನಿನ ಪಕ್ಕ ಟಾರ್ಪಲ್‌ ಹಾಸಿ ರಸಗೊಬ್ಬರದ ಚೀಲ ಒಡೆದರೆ ಆಘಾತ ಕಾದಿತ್ತು. ಅದರಲ್ಲಿ ರಸಗೊಬ್ಬರಕ್ಕಿಂತ ಮಣ್ಣು-ಕಲ್ಲುಗಳೇ ಹೆಚ್ಚಿದ್ದವು. ಹೀಗಾಗಿ ಜಮೀನಿಗೆ ರಸಗೊಬ್ಬರ ಹಾಕಲು ಕರೆಸಿಕೊಂಡ ಕೂಲಿ ಆಳುಗಳ ಸಂಬಳ ಸಹಿತ ಈ ವಂಚನೆಯಿಂದ ಸಾಕಷ್ಟು ನಷ್ಟವಾಗಿ ಇವರನ್ನು ಹೈರಾಣಾಗಿಸಿದೆ. …

ನಿರ್ದಾಕ್ಷಿಣ್ಯ ಕ್ರಮವಾಗಲಿ- ರೈತರ ಆಗ್ರಹ

ನಕಲಿ ರಸಗೊಬ್ಬರ ಹಾವಳಿ ಈ ಹಿಂದಿನಿಂದಲೂ ಇದೆ. ಇನ್ನು ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಆದರೆ ಇನ್ನೂ ರಾಜ್ಯದ ಎಲ್ಲೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಮತ್ತು ಕೃಷಿ ಸಚಿವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿಸ್ತಾರ ನ್ಯೂಸ್‌ಗೆ ರೈತರು ವಿವರಿಸಿದ್ದಾರೆ.

ರೈತನ ಅಳಲು

ನಮ್ಮ ತಾಲೂಕಿನಲ್ಲಿ ರಸಗೊಬ್ಬರ ಸಿಗುತ್ತಿಲ್ಲ ಎಂದು ಮುಂಜಾನೆಯೇ ಎದ್ದು ಜಮಖಂಡಿಯ ತುಂಗಳದ ಪಿಕೆಪಿಎಸ್‌ನಿಂದ ಈ ರಸಗೊಬ್ಬರ ತಂದಿದ್ದೆ. ಗದ್ದೆಗೆ ಬಂದು ಚೀಲ ತೆರೆದರೆ ಈ ರೀತಿ ಕಲ್ಲು ಮಣ್ಣು ಮಿಶ್ರಿತ ಗೊಬ್ಬರವನ್ನು ಕೊಟ್ಟಿರುವುದು ಗೊತ್ತಾಗಿದೆ. ಹೋಗಿ ಬರುವ ಖರ್ಚು ಸೇರಿ ಈಗಾಗಲೇ ಹಣ ಕಳೆದುಕೊಂಡಿದ್ದೇನೆ. ನಾವು ರೈತರು ಲೆಕ್ಕಾಚಾರ ಹಾಕಿ ಜೀವನ ಮಾಡುವವರು. ಆದರೆ, ಇಲ್ಲೂ ನಮಗೆ ಮೋಸವಾದರೆ ನಾವು ಏನು ಮಾಡುವುದು. ಸರ್ಕಾರ ಇಂಥ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಂಥ ಸಮಸ್ಯೆಗಳು ಬರುತ್ತಿರಲಿಲ್ಲ ಎಂದು ರೈತ ದಾನಪ್ಪ ಮಲಾಬಾದ್ ವಿಸ್ತಾರ ನ್ಯೂಸ್‌ ಬಳಿ ನೋವನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ | ಎಲ್ಲ ಸಚಿವರ ಮನೆಗೆ ಮೊಟ್ಟೆ ಪಾರ್ಸೆಲ್‌: ವಿನೂತನ ಪ್ರತಿಭಟನೆಗೆ ಮುಂದಾದ ಯುವ ಕಾಂಗ್ರೆಸ್‌!

Exit mobile version