ವಿಜಯಪುರ: ಮೂವರು ಪುರುಷರು ಒಬ್ಬ ಮಹಿಳೆಯ ಮೇಲೆ ನಡುರಸ್ತೆಯಲ್ಲಿ ಅಮಾನವೀಯವಾಗಿ ಹಲ್ಲೆ ಮಾಡಿದ ವಿದ್ಯಮಾನ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮಾಡಿವರು ಸಂಬಂಧಿಕರೇ ಅಗಿದ್ದು, ಅಸ್ತಿ ವಿಚಾರವಾಗಿ ಹಳೆ ದ್ವೇಷದಿಂದ ಈ ಗೂಂಡಾಗಿರಿ ನಡೆದಿದೆ ಎಂದು ಹೇಳಲಾಗಿದೆ.
ಮಹಾದೇವಿ ಫಿರಾಪೂರ ಹಲ್ಲೆಗೊಳಗಾದ ಮಹಿಳೆ. ಮಹಾದೇವಿ ಹೊಲದಲ್ಲಿ ಒಬ್ಬರೇ ಇದ್ದಾಗ ಆನಂದ್ ಬಿರಾದಾರ ಎಂಬಾತ ಕೈಹಿಡಿದು ಎಳೆದಾಡಿದ್ದ. ಆತನಿಂದ ತಪ್ಪಿಸಿಕೊಂಡು ಆಕೆ ಮನೆ ಕಡೆಗೆ ಓಡಿ ಬಂದಿದ್ದಳು. ಜಮೀನಿನಿಂದ ಮನೆಗೆ ಬರುವಾಗ ಮೂವರು ಅವರನ್ನು ರಸ್ತೆಯಲ್ಲೇ ತಡೆದು ಹಿಗ್ಗಾಮುಗ್ಗಾ ಹಲ್ಲೆ ಮಾಡಲಾಗಿದೆ. ಸಂಬಂಧಿಕರೇ ಆಗಿರುವ ಆನಂದ್ ಬಿರಾದಾರ, ಶ್ರೀಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬುವರು ಸೇರಿ ಹಲ್ಲೆ ಮಾಡಿದ್ದಾರೆ.
ಮೂವರು ಸೇರಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ಕೂದಲನ್ನು ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದಿರುವ ದೃಶ್ಯಗಳು ವೈರಲ್ ಆಗುತ್ತಿವೆ. ಸಾಕಷ್ಟು ವಾಹನಗಳು ಹೋಗುವ, ಜನ ಓಡಾಡುವ ರಸ್ತೆಯಲ್ಲಿ ಈ ಕಿರಾತಕ ಕೃತ್ಯ ನಡೆದಿದೆ. ಮಹಿಳೆ ಮೊದಲು ಹೊಡೀಬೇಡಿ ಎಂದು ಬೇಡಿಕೊಂಡರೆ ಬಳಿಕ ʻʻಆಯ್ತು ಒಬ್ಬ ಮಹಿಳೆ ಅಂತಾನೂ ನೋಡದೆ ಹೀಗೆ ಹೊಡೀತೀರಲ್ಲಾ.. ಎಷ್ಟು ಬೇಕಾದರೂ ಹೊಡೆಯಿರಿʼʼ ಎಂದು ಸಹಾಯಕವಾಗಿ ನುಡಿಯುತ್ತಾರೆ.
ಯಾಕೆ ಈ ರೀತಿಯ ಕಿರಾತಕ ಕೃತ್ಯ?
ಆಸ್ತಿ ವಿಚಾರ ಮತ್ತು ಹಳೆ ದ್ವೇಷಗಳು ಸೇರಿ ಈ ರೀತಿ ಮಹಿಳೆಗೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಹಾದೇವಿ ಗಂಡನ ಮನೆ ಇರುವುದು ಸುರಪೂರ ತಾಲೂಕಿನ ವಂದಗನೂರ ಗ್ರಾಮದಲ್ಲಿ. ತಾಯಿ ಮನೆ ಜಲಪುರ ಗ್ರಾಮದಲ್ಲಿ. ಅಲ್ಲಿ ಒಂದು ಎಕರೆ ಜಮೀನಿದೆ. ಮಹಾದೇವಿ ತಾಯಿ-ತಂದೆಗೆ ಇಬ್ಬರು ಹೆಣ್ಣು ಮಕ್ಕಳು. ಮಹಾದೇವಿ ಮತ್ತು ಬಸಮ್ಮ. ಇಬ್ಬರನ್ನೂ ಮದುವೆ ಮಾಡಿಕೊಡಲಾಗಿದೆ.
ಮಹಾದೇವಿ ತವರಿನ ಒಂದು ಎಕರೆ ಜಾಗವನ್ನು ಕಬಳಿಸಲು ಸಂಬಂಧಿಕರೇ ಆಗಿರುವ ಶ್ರೀಶೈಲ ಬಿರಾದಾರ ಮತ್ತು ಇತರರು ಸಂಚು ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೆಲ್ಲ ತಿಳಿದ ಮಹಾದೇವಿ ಗಂಡನ ಮನೆಯಲ್ಲಿ ವಿಷಯವನ್ನು ವಿವರಿಸಿ ಈಗ ಸದ್ಯಕ್ಕೆ ತವರು ಮನೆಯಾದ ಜಲಪುರದಲ್ಲಿ ನೆಲೆಸಿದ್ದಾಳೆ. ಇದು ಶ್ರೀಶೈಲ ಬಿರಾದಾರ ಮತ್ತು ಇತರರ ಪ್ಲ್ಯಾನ್‌ಗೆ ಅಡ್ಡಿಯಾಗಿದೆ.
ಇದೇ ಕಾರಣಕ್ಕೆ ಆಕೆ ಜಮೀನಿನಲ್ಲಿದ್ದಾಗ ಶ್ರೀಶೈಲ ಬಿರಾದಾರ ಹೋಗಿ ಪೀಡಿಸಿದ್ದಾನೆ. ಆಕೆ ತಪ್ಪಿಸಿಕೊಂಡು ಬರುವಾಗ ಇತರರು ಸೇರಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಹಾದೇವಿ ನೀಡಿದ ದೂರಿನ ಮೇಲೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| ರಸ್ತೆ ನಿರ್ಮಾಣ ವಿಚಾರದಲ್ಲಿ ಜಗಳ: ಮಹಿಳೆ, ಮಗಳ ಮೇಲೆ ಗ್ರಾಪಂ ಸದಸ್ಯನಿಂದ ಹಲ್ಲೆ