ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ (ಆ.11) ಮುಂಜಾನೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಪ್ರಾಣ ಕಳೆದುಕೊಂಡಿದ್ದ ಪ್ರಕರಣ ಸಂಬಂಧ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಮಾರಾಮಾರಿಯಲ್ಲಿ ಯಂಕಪ್ಪ ಹಾಗೂ ಬಾಷಾವಲಿ ಎಂಬ ಇಬ್ಬರು ಮೃತಪಟ್ಟಿದ್ದರು. ಬಾಷಾವಲಿ ಅಂಗಡಿಗೆ ಹೋದಾಗ ಗಲಾಟೆಯಾಗಿದ್ದೇ ಕಾರಣ ಎಂದು ತಿಳಿದು ಬಂದಿದೆ. ಅಂಗಡಿಗೆ ಹೋದಾಗ ಮಾತಿನ ಚಕಮಕಿಯಾಗಿ ಗಲಾಟೆಯಾಗಿತ್ತು ಎನ್ನಲಾಗಿದೆ. ಈ ಕುರಿತಂತೆ ಗ್ರಾಮದಲ್ಲಿ 8 ಪೊಲೀಸ್ ಅಧಿಕಾರಿಗಳು, 70ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ KSRP ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಗಲಾಟೆ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ಇನ್ನೂ 10 ದಿನ ಹುಲಿಹೈದರ್ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ ಹೇಳಿಕೆ ನೀಡಿದ್ದಾರೆ.
ಎರಡು ಗುಂಪುಗಳ ಮಧ್ಯೆ ಮುಂಜಾನೆಯೇ ಈ ಹೊಡೆದಾಟ ನಡೆದಿದೆ. ಎರಡು ಗುಂಪುಗಳು ಕತ್ತಿ, ದೊಣ್ಣೆ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರಿಗೆ ತಲೆಗೆ ತೀವ್ರವಾಗಿ ಏಟು ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬರ ತಲೆಗೆ ತೀವ್ರ ಗಾಯಗಳಾಗಿವೆ. ದೇಹ ಮತ್ತು ಮುಖದ ಮೇಲೆ ಕತ್ತಿಯಿಂದ ಹೊಡೆದಂತೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ, ಇಬ್ಬರು ದಾರುಣ ಮೃತ್ಯು
ಇಬ್ಬರ ಶವಗಳನ್ನೂ ಆಸ್ಪತ್ರೆಗೆ ತರಲಾಗಿದೆ. ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬಂಧುಗಳ ರೋದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | ಆಳಂದದ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಸಾರ್ವಜನಿಕರ ಆತಂಕ