Site icon Vistara News

ಹನಿ ಟ್ರ್ಯಾಪ್‌ ಮೂಲಕ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ನಾಯಕ ನಟ ಯುವರಾಜ್‌ ಅರೆಸ್ಟ್‌

ಬೆಂಗಳೂರು: ಬೆಂಗಳೂರಿನ ಉದ್ಯಮಿಯೊಬ್ಬರನ್ನು ಹನಿ ಟ್ರ್ಯಾಪ್‌ ಮಾಡಿ ಲಕ್ಷಾಂತರ ರೂಪಾಯಿ ದೋಚಿದ ಸಿನಿಮಾ ರಂಗದ ಉದಯೋನ್ಮುಖ ನಟನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಅರೋಪಿ.

ಮಿಸ್ಟರ್ ಭೀಮರಾವ್ ಎಂಬ ಸಿನಿಮಾದ ನಾಯಕನಾಗಿದ್ದ ಯುವರಾಜ್‌ ಬಳಿಕ ಹೆಚ್ಚೇನೂ ಚಾಲ್ತಿಯಲ್ಲಿಲ್ಲ. ಅದರ ನಡುವೆ, ಹನಿ ಟ್ರ್ಯಾಪ್‌ನ್ನು ದಂಧೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಹುಡುಗಿಯರ ಹೆಸರು ಬಳಸಿ ಚಾಟ್‌
ಈ ಆರೋಪಿ ಸಿನಿಮಾದಲ್ಲಿ ಬಳಸುವ ತಂತ್ರವನ್ನೇ ಇನ್ನೂ ಬಳಸಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿ ಜತೆ ತಾನೊಬ್ಬ ಹುಡುಗಿ ಎನ್ನುವ ರೀತಿಯಲ್ಲಿ ಚಾಟ್‌ ಶುರು ಮಾಡಿದ್ದ. ಹುಡುಗಿ ಚಾಟ್‌ ಮಾಡುತ್ತಿದ್ದಾಳೆ ಎಂಬ ಕಾರಣಕ್ಕಾಗಿ ಆ ಉದ್ಯಮಿ ಕೂಡಾ ಚೆನ್ನಾಗಿ ಮಾತನಾಡಿದ್ದ. ಯುವರಾಜ್‌ ಒಬ್ಬ ಹುಡುಗಿಯಲ್ಲ ಇಬ್ಬರು ಹುಡುಗಿಯರ ಹೆಸರಿನಲ್ಲಿ ಉದ್ಯಮಿಯನ್ನು ಮಂಗ ಮಾಡಿದ್ದ.

ಈ ನಡುವೆ, ಆ ಇಬ್ಬರು ಯುವತಿಯರು ಪೊಲೀಸ್‌ ಠಾಣೆಗೆ ದೂರು ನೀಡಿದಂತೆ ಒಂದು ಸೀನ್‌ ಕ್ರಿಯೇಟ್‌ ಮಾಡಿದ್ದ. ವ್ಯಕ್ತಿಯೊಬ್ಬ ತಮ್ಮ ಜತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದಾರೆ. ರಾತ್ರಿಯೆಲ್ಲ ಚಾಟ್‌ಗೆ ಕರೆಯುತ್ತಾರೆ ಎಂದೆಲ್ಲ ದೂರು ನೀಡಿದಂತೆ ಸೀನ್‌ ಸೃಷ್ಟಿಯಾಗಿತ್ತು.

ಕ್ರೈಂ ಪೊಲೀಸ್‌ನಂತೆ ಎಂಟ್ರಿ!
ಅದೊಂದು ದಿನ ಉದ್ಯಮಿಯನ್ನು ಭೇಟಿ ಮಾಡಿದ ಯುವರಾಜ್‌ ನಿಮ್ಮ ಮೇಲೆ ಯುವತಿಯರ ಜತೆ ಅಶ್ಲೀಲವಾಗಿ ನಡೆದುಕೊಂಡ ಬಗ್ಗೆ ದೂರು ಬಂದಿದೆ. ನಿಮ್ಮ ಮೇಲೆ ಕೇಸ್‌ ದಾಖಲಾಗಿದೆ. ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದ. ಒಂದು ವೇಳೆ ಕೇಸು ಮುಂದುವರಿಸಬಾರದು ಎಂದಾದರೆ ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ. ಹುಡುಗಿಯರ ಜತೆಗಿನ ಅಶ್ಲೀಲ ಚಾಟ್‌ಗಳನ್ನು ತೋರಿಸಿ ಎಲ್ಲಾ ದಾಖಲೆಗಳನ್ನು ಮುಂದಿಟ್ಟಿದ್ದ. ಇದನ್ನು ನೋಡಿ ಬೆದರಿದ ಉದ್ಯಮಿ ಕೂಡಾ ಹಣ ನೀಡಲು ಮುಂದಾದ. ಮೊದಲು ಐವತ್ತು ಸಾವಿರ, ಬಳಿಕ ಒಂದು ಲಕ್ಷ ರೂ.ಯನ್ನು ಬ್ಯಾಂಕ್‌ ಮೂಲಕ ಡ್ರಾ ಮಾಡಿಸಿಕೊಂಡಿದ್ದ.

ಆದರೆ, ಅಷ್ಟಕ್ಕೇ ನಿಲ್ಲಿಸದ ಚಿತ್ರ ನಟ ಮುಂದೆ ಹಂತ ಹಂತವಾಗಿ ಉದ್ಯಮಿಯ ಬಳಿಗೆ ಹೋಗಿ ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದ. ಹೀಗೆ ಹಂತ ಹಂತವಾಗಿ ಒಟ್ಟು ೧೪ ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಈ ನಡುವೆ ಒಮ್ಮೆ ಉದ್ಯಮಿಗೆ ಸಂಶಯ ಬಂತು. ಈ ವ್ಯಕ್ತಿ ಮನೆಗೆ ಬಂದು, ಇಲ್ಲವೇ ಬ್ಯಾಂಕ್‌ ಖಾತೆ ಮೂಲಕ ಹಣವನ್ನು ಪಡೆದುಕೊಳ್ಳುತ್ತಿದ್ದಾನೆ. ಮತ್ತೆ ಮತ್ತೆ ಹಣ ಕೇಳುತ್ತಿದ್ದಾನೆ ಅಂದರೆ ಈತ ನಿಜಕ್ಕೂ ಪೊಲೀಸ್‌ ಇರಬಹುದಾ? ಅಥವಾ ಇದು ವಂಚನೆಯಾ ಅಂತ ಯೋಚಿಸಿದರು. ಕೊನೆಗೆ ಧೈರ್ಯ ಮಾಡಿ ಹಲಸೂರು ಪೊಲೀಸ್‌ ಠಾಣೆಗೆ ದೂರು ನೀಡಿದರು.

ಪೊಲೀಸರು ಈ ಬಾರಿ ಯುವರಾಜ್‌ನನ್ನೇ ಟ್ರ್ಯಾಪ್‌ ಮಾಡಿ ಬಂಧಿಸಿದರು. ಇದೀಗ ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‌ ಇದನ್ನೂ ಓದಿ| ಕಲಿ ಸಿಮ್‌ ಬಳಸಿ ಬೆದರಿಕೆ, ಹನಿಟ್ರ್ಯಾಪ್‌ ಮಾಡುತ್ತಿದ್ದವರು ಪೊಲೀಸ್‌ ಬಲೆಗೆ

Exit mobile version