Site icon Vistara News

Viral video: ನಮ್ಮನ್ನಗಲಿದ ಶಿವಶಂಕರ್‌ ಎಷ್ಟು ಲವಲವಿಕೆಯಿಂದ ಇದ್ದರು ಎಂದರೆ.. ಈ ಐಟಂ ಸಾಂಗ್‌ ವಿಡಿಯೊ ನೋಡಿ

CV Shivashankar

ಬೆಂಗಳೂರು: ಜಗಮೆಚ್ಚಿದ ಹಾಡುಗಳು, ಮನಕೆ ಮುದ ನೀಡುವ ಅಭಿನಯ, ಹಲವು ಉತ್ತಮ ಚಿತ್ರಗಳ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಥಾನವನ್ನು ಪಡೆದಿದ್ದ ಸಿ.ವಿ. ಶಿವಶಂಕರ್‌ (CV Shivashankar) ಅವರು ಇನ್ನಿಲ್ಲ. ಅವರು ಮಂಗಳವಾರ ಮಧ್ಯಾಹ್ನದ ಹೊತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ಆಗಿತ್ತು.

ನಿಜವೆಂದರೆ, ಈ 90ನೇ ವಯಸ್ಸಿನಲ್ಲೂ ಅವರು ತುಂಬ ಲವಲವಿಕೆಯಿಂದಲೇ ಇದ್ದರು (Viral video). ಬುಧವಾರವೂ ಅವರು ಸ್ನಾನ ಮಾಡಿ, ನಿಷ್ಠೆಯಿಂದ ಪೂಜೆ ಮಾಡಿದ್ದರು. ಬಳಿಕ ಆರಾಮವಾಗಿ ಕೂತು ಪೂಜೆ ಮಾಡಿದ್ದರು. ಎಂದಿನಂತೆ ಲಘು ಹಾಸ್ಯದಿಂದ ಮನೆಯವರನ್ನು ನಗಿಸುತ್ತಾ ಖುಷಿಯಾಗಿಯೇ ಇದ್ದರು. ಆದರೆ, ಇದ್ದಕ್ಕಿದ್ದಂತೆಯೇ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಕುಳಿತವರು ಎದ್ದು ಹೋದಂತೆ ಅವರ ಸಾವು ಸಂಭವಿತ್ತು.

ಸಿ.ವಿ. ಶಿವಶಂಕರ್‌ ಅವರು ಕನ್ನಡ ಚಿತ್ರರಂಗದ ಡಿಕ್ಷನರಿ ಎಂದೇ ಖ್ಯಾತರು. ಅವರಿಗೆ ಕನ್ನಡ ಚಿತ್ರರಂಗದ ಇತಿಹಾಸವೆನ್ನುವುದು ಬಾಯಿಯ ತುದಿಯಲ್ಲಿತ್ತು. ಚಿತ್ರಗಳು, ನಟರು, ಘಟನಾವಳಿಗಳನ್ನು ಅತ್ಯಂತ ನಿಖರವಾಗಿ ಮತ್ತು ಅಷ್ಟೇ ರಸವತ್ತಾಗಿ ಬಣ್ಣಿಸುತ್ತಿದ್ದರು. ಕೆಲವು ಸಮಯದ ಹಿಂದಷ್ಟೇ ಅವರು ರಾಜ್‌ ಕುಮಾರ್‌ ಸೇರಿದಂತೆ ಹಲವು ನಟರ ಜತೆಗಿನ ಒಡನಾಟವನ್ನು ಸ್ಮರಿಸುವ ವಿಡಿಯೊ ಬಂದಿತ್ತು.

ಅವರ ಜೀವನೋತ್ಸಾಹ ಎಷ್ಟಿತ್ತೆಂದರೆ ತಮ್ಮ ಮಗ ಲಕ್ಷ್ಮಣ್‌ ಶಿವಶಂಕರ್‌ ಅವರ ಜತೆಗೆ ಸೇರಿಕೊಂಡು ರೀಲ್ಸ್‌ ಕೂಡಾ ಮಾಡುತ್ತಿದ್ದರು. ಅಂದರೆ ಜೀವನ ಪ್ರೀತಿಯ ಜತೆಗೆ ಆಧುನಿಕ ತಂತ್ರಜ್ಞಾನಗಳ ಬಳಕೆಯ ಕ್ರೇಜ್‌ ಕೂಡಾ ಅವರಿಗಿತ್ತು.

ಕಳೆದ ಜೂನ್‌ 17ರಂದು ನಟರೂ, ಚಿತ್ರ ಸಾಹಿತಿಯೂ ಆಗಿರುವ ಪುತ್ರ ಲಕ್ಷ್ಮಣ್‌ ಅವರು ತಾವು ಮತ್ತು ತಂದೆ ಜತೆಯಾಗಿ ಮಾಡಿದ ಒಂದು ರೀಲ್‌ ಅನ್ನು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದರು. ಇದು ಸಿ.ವಿ. ಶಿವಶಂಕರ್‌ ಅವರು ಈ ವಯಸ್ಸಿನಲ್ಲೂ ಎಷ್ಟೊಂದು ಜಾಲಿ ಆಗಿದ್ದರು ಎನ್ನುವುದನ್ನು ತೋರಿಸುತ್ತದೆ.

ಸಾಫ್ಟ್​ವೇರ್ ಉದ್ಯೋಗಿಯೂ ಆಗಿರುವ ಲಕ್ಷ್ಮಣ್ ಅವರೊಂದಿಗೆ ಮಾಡಿದ ಈ ವಿಡಿಯೋ ತುಣುಕನ್ನು ನೋಡಿದರೆ ನೀವು ನಕ್ಕು ನಕ್ಕು ಸುಸ್ತಾಗುವುದು ಖಂಡಿತ. ಇದರಲ್ಲಿ ಮಗ ಲಕ್ಷ್ಮಣ್‌ ಮತ್ತು ಶಿವಶಂಕರ್‌ ಅವರು ಅಕ್ಕಪಕ್ಕದಲ್ಲಿ ಕುಳಿತುಕೊಂಡಿರುತ್ತಾರೆ. ಆಗ ಮಗ ಲಕ್ಷ್ಮಣ್‌ ಅವರು ಅವರು ಅಪ್ಪನಿಗೆ ಮೊಬೈಲ್‌ನಲ್ಲಿ ವಾಯ್ಸ್‌ ಮೂಲಕ ತಮಗೆ ಬೇಕಾದ ವಿಷಯವನ್ನು ಸರ್ಚ್‌ ಮಾಡುವುದು ಹೇಗೆ ಎನ್ನುವುದನ್ನು ಕಲಿಸಿಕೊಡುತ್ತಾರೆ. ವಯಸ್ಸಾದ ಅಪ್ಪ-ಅಮ್ಮನಿಗೆ ಬೇಕಾದ ವಿಷಯವನ್ನು ಟೈಪ್‌ ಮಾಡಿ ಗೂಗಲ್‌ ಮಾಡುವುದು ಕಷ್ಟವಲ್ಲವೇ ಅದಕ್ಕೆ ಈ ರೀತಿ ಮಾಡಬಹುದು ಎಂದು ಎಂದು ಲಕ್ಷ್ಮಣ್‌ ವಾಯ್ಸ್‌ನಲ್ಲಿ ಗೂಗಲ್‌ ಮಾಡುತ್ತಾರೆ.

ನೋಡಿ ಇಲ್ಲಿ ಮೈಕ್‌ ಇದೆಯಲ್ವಾ? ಅದರ ಹತ್ತಿರ ಬಂದು ನಿಮಗೆ ಬೇಕಾದ್ದನ್ನು ಹೇಳಿದರೆ ಆಯಿತು.. ನೋಡಿ ಈಗ ವಿಷ್ಣು ಸಹಸ್ರನಾಮ ಅಂತ ಹೇಳೋಣ ಅಂತ ಹೇಳುತ್ತಾರೆ. ಬಳಿಕ ನೋಡಿ.. ನೋಡಿ ವಿಷ್ಣು ಸಹಸ್ರನಾಮ ಬಂತು ಅಂತಾರೆ ಲಕ್ಷ್ಮಣ್‌.

ಗ ಸಿ.ವಿ. ಶಿವಶಂಕರ್‌ ಅವರು ನಾನೇ ಟ್ರೈ ಮಾಡಬಹುದಾ ಎಂದು ಕೇಳುತ್ತಾರೆ. ಮಗ ಓಕೆ ಅಂದ ಕೂಡಲೇ ಮುಖವನ್ನು ಮೊಬೈಲ್‌ ಹತ್ತಿರ ಬಂದು ʻಐಟಂ ಸಾಂಗ್ಸ್‌ʼ ಅಂತ ಹೇಳ್ತಾರೆ. ಇದನ್ನು ಕೇಳಿ ಲಕ್ಷ್ಮಣ್‌ ಬೆಚ್ಚಿ ಬಿದ್ದಂತೆ ನಟಿಸುತ್ತಾರೆ. ಆಗ ಶಿವಶಂಕರ್‌ ಅವರು ನಂಗೆ ವಿಷ್ಣು ಸಹಸ್ರನಾಮ ಬರುತ್ತೆ ಅಂತ ಹೇಳಿ ಎದ್ದು ನಡೀತಾರೆ.

ಈ ನಟನೆ, ಮಾತು ಎಷ್ಟು ಸಹಜವಾಗಿದೆ ಎಂದರೆ ನೋಡುವ ನಮಗೆ ನಗು ತಡೆಯಲಾಗುವುದೇ ಇಲ್ಲ. ಇಷ್ಟೆಲ್ಲ ಖುಷ್‌ ಖುಷಿಯಾಗಿದ್ದ ಅಜ್ಜ ಬಿಟ್ಟು ಹೋದರಲ್ಲಾ ಎಂಬ ನೋವು ಕಾಡಲು ಶುರುವಾಗುತ್ತದೆ.

ಇದನ್ನೂ ಓದಿ: CV Shivashankar : ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಎಂದಿದ್ದ ಚಿತ್ರ ಸಾಹಿತಿ, ನಿರ್ದೇಶಕ ಸಿ.ವಿ. ಶಿವಶಂಕರ್‌ ಇನ್ನಿಲ್ಲ

Exit mobile version