Site icon Vistara News

Siddheshwar swamiji | ನಡೆದಾಡುವ ದೇವರ ಅಂತಿಮ ಯಾತ್ರೆ: ಶೋಕ ಸಾಗರದಲ್ಲಿ ಜನಸಾಗರ

Antima Yatre

ವಿಜಯಪುರ: ನಡೆದಾಡುವ ದೇವರು, ನಾಡು ಕಂಡ ಶ್ರೇಷ್ಠ ಪ್ರವಚನಕಾರ, ನಡೆ-ನುಡಿಗಳಿಂದ ಜಗತ್ತನ್ನೇ ಗೆದ್ದ ದಾರ್ಶನಿಕ ವಿಜಯಪುರದ ಶ್ರೀ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಇಹದ ಬದುಕಿನ ಅಂತಿಮ ಯಾತ್ರೆ ವಿಜಯಪುರದ ಮಹಾ ಬೀದಿಯಲ್ಲಿ ಸಾಗಿತು.

ಸೋಮವಾರ ರಾತ್ರಿ ನಿಧನರಾದ ಮಹಾಸಂತರ ಅಂತಿಮ ದರ್ಶನಕ್ಕೆ ಬೆಳಗ್ಗಿನಿಂದ ಸಂಜೆವರೆಗೆ ಸೈನಿಕ ಶಾಲೆಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ನಾಡಿನ ಹಿರಿಯರು, ಸಂತರು, ಭಕ್ತರು ಅಂತಿಮ ನಮನ ಸಲ್ಲಿಸಿದ ಬಳಿಕ ಇದೀಗ ಅಂತಿಮ ವಿಧಿಗಳಿಗಾಗಿ ಪಾರ್ಥಿವ ಶರೀರವನ್ನು ಮರಳಿ ಜ್ಞಾನ ಯೋಗಾಶ್ರಮಕ್ಕೆ ಕರೆ ತರಲಾಯಿತು.

ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸೈನಿಕ ಶಾಲೆಯಿಂದ ಶ್ರೀ ಜ್ಞಾನಯೋಗಾಶ್ರಮಕ್ಕೆ, ಗೋದಾವರಿ-ಶ್ರೀ ಶಂಕರಲಿಂಗ ದೇವಸ್ಥಾನ-ಶಿವಾಜಿವೃತ್ತ – ಗಾಂಧಿವೃತ್ತ- ಶ್ರೀ ಸಿದ್ದೇಶ್ವರ ದೇವಸ್ಥಾನ-ಬಿ.ಎಲ್.ಡಿ.ಇ. ಆಸ್ಪತ್ರೆ ದಾರಿಯಾಗಿ ಅಂತಿಮ ಯಾತ್ರೆ ಶ್ರೀ ಜ್ಞಾನಯೋಗಾಶ್ರಮದತ್ತ ಸಾಗಿತು.

ಲಕ್ಷಾಂತರ ಭಕ್ತರು ರಸ್ತೆಯಲ್ಲಿ ಜಮಾವಣೆಗೊಂಡು ಮೆರವಣಿಗೆಯಲ್ಲಿ ಸಾಗಿಬರುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಭಕ್ತರು ತಮ್ಮ ಗುರುವಿನ ಅಂತಿಮ ದರ್ಶನ ಪಡೆದರು. ಕುಳಿತ ಭಂಗಿಯಲ್ಲಿರುವ ಶ್ರೀಗಳು ಅದೇ ಹಸನ್ಮುಖಿ ಭಾವದಿಂದ ದರ್ಶನ ನೀಡುತ್ತಿದ್ದಾರೆ. ಅವರನ್ನು ನೋಡುತ್ತಿದ್ದಂತೆಯೇ ಭಕ್ತರ ದುಃಖದ ಕಟ್ಟೆಯೂ ಒಡೆಯುತ್ತಿದೆ. ಆದರೂ ಅತ್ಯಂತ ಶಿಸ್ತುಬದ್ಧವಾಗಿ ಜನರು ಸಾಗಿಬಂದರು.

ಜ್ಞಾನ ಯೋಗಾಶ್ರಮದಲ್ಲಿ ಸಿದ್ಧತೆ
ಇತ್ತ ಜ್ಞಾನ ಯೋಗಾಶ್ರಮದಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ವಿಧಿಗಳಿಗಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಯೋಗಾಶ್ರಮದ ಎದುರು ಒಂದು ಕಟ್ಟೆಯನ್ನು ಕಟ್ಟಿ ಅದರಲ್ಲಿ ಚಿತೆಯನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಇಟ್ಟು ಪ್ರಾಥಮಿಕ ವಿಧಿ ವಿಧಾನಗಳನ್ನು ನಡೆಸಲಾಗಿತ್ತು. ಕಟ್ಟೆಯ ಸುತ್ತಲೂ ರಂಗೋಲಿಗಳನ್ನು ಬಿಡಿಸಲಾಗಿತ್ತು. ಪಾರ್ಥಿವ ಶರೀರವನ್ನು ತಂದ ಬಳಿಕ ಕೆಲವೊಂದು ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಅಗ್ನಿ ಸ್ಪರ್ಶದ ಮೂಲಕ ಪಂಚಭೂತಗಳಲ್ಲಿ ಲೀನಗೊಳಿಸಲಾಯಿತು.

ಇದನ್ನೂ ಓದಿ | Siddheshwar swamiji | ಸಿದ್ದೇಶ್ವರ ಸ್ವಾಮಿಗಳಿಗೆ ಸರ್ಕಾರಿ ಗೌರವ, ತ್ರಿವರ್ಣ ಧ್ವಜ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ

Exit mobile version