ಬೆಂಗಳೂರು: ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಹೇಗಾದರೂ ಮಾಡಿ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಕಸರತ್ತು ನಡೆಸುತ್ತಿದ್ದರೆ, ಇಷ್ಟು ದೊಡ್ಡ ಮೊತ್ತದ ಯೋಜನೆಗಳನ್ನು ಒಂದೇ ಬಾರಿಗೆ ಜಾರಿ ಮಾಡುವುದು ಅಸಾಧ್ಯ ಎಂದು ಹಣಕಾಸು ಇಲಾಖೆ ಸ್ಪಷ್ಟವಾಗಿ ಹೇಳಿದೆ.
ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಮನೆಯೊಡತಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ, ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಹಾಗೂ 1500 ರೂ. ಭತ್ಯೆ ನೀಡುವ ಯುವನಿಧಿ ಯೋಜನೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಈ ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಮೊದಲ ಸಂಪುಟ ಸಭೆಯಲ್ಲಿ ಕೇವಲ ತಾತ್ವಿಕ ಒಪ್ಪಿಗೆಯನ್ನಷ್ಟೆ ನೀಡಲಾಗಿದೆ. ಪ್ರತಿ ಯೋಜನೆಗೆ ಫಲಾನುಭವಿಗಳ ಆಯ್ಕೆ, ಅಂದಾಜು ಮೊತ್ತದ ಕುರಿತು ಸಿಎಂ ಸಿದ್ದರಾಮಯ್ಯ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಅನೇಕ ವಿಚಾರ ಚರ್ಚೆಗೆ ಬಂದಿದೆ.
ಷರತ್ತು ರಹಿತ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಇಲಾಖೆ ವಿರೋಧ ವ್ಯಕ್ತಪಡಿಸಿದೆ. ಹಣಕಾಸು ಹೊಂದಿಸಲು ಸಾಧ್ಯವಿಲ್ಲ. ಒಂದೇ ಬಾರಿ ಐದು ಗ್ಯಾರಂಟಿ ಜಾರಿ ಮಾಡಲು ಅಸಾಧ್ಯ. ಸದ್ಯ ಎರಡು ಗ್ಯಾರಂಟಿ ಈಡೇರಿಸಿ. ಅನ್ನಭಾಗ್ಯ ಹಾಗೂ ಉಚಿತ ವಿದ್ಯುತ್ ಗ್ಯಾರಂಟಿ ಈಡೇರಿಸಿ.
ಬಳಿಕ ನಿಧಾನವಾಗಿ ಇನ್ನೂ ಮೂರು ಗ್ಯಾರಂಟಿ ಈಡೇರಿಸಿ. ಎಲ್ಲವನ್ನೂ ಒಟ್ಟಿಗೆ ಜಾರಿ ಮಾಡಲು ಐದು ಗ್ಯಾರಂಟಿಗಳಿಗೆ 58 ಸಾವಿರ ಕೋಟಿ ರೂ. ಕೊಡಬೇಕು. ಷರತ್ತು ಹಾಕಿದ್ರೆ 30 ಸಾವಿರ ಕೋಟಿ ರೂ.ನಲ್ಲಿ ಮುಗಿಸಬಹುದು. ಯಾವುದೇ ಕಾರಣಕ್ಕೂ ಷರತ್ತು ರಹಿತ ಗ್ಯಾರೆಂಟಿ ಕೊಡಬೇಡಿ ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ತಿಳಿಸಿದ್ದಾರೆ ಎನ್ನಲಾಗಿದೆ.
ಸದ್ಯ 3.1 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಈ ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ. ಒಂದೇ ಕಾಲಕ್ಕೆ ಐದು ಗ್ಯಾರಂಟಿ ಜಾರಿ ಅಸಾಧ್ಯ. ಆರ್ಥಿಕ ಸಂಪನ್ಮೂಲ ಸಮಸ್ಯೆ ಇದೆ. ಮುಂದಿನ ತಿಂಗಳು ಹೊಸ ಬಜೆಟ್ ಮಂಡಿಸಿ. ಬಜೆಟ್ ಗಾತ್ರ ಹಿಗ್ಗಿಸಿಕೊಳ್ಳಿ. ಆದಾಯ ತರುವ ಇಲಾಖೆಗಳಿಗೆ ಗುರಿ ಜಾಸ್ತಿ ಮಾಡಿ. ಸರ್ಕಾರದಲ್ಲಿ ಆಗುತ್ತಿರುವ ಅಭಿವೃದ್ಧಿಯೇತರ ವೆಚ್ಚ ಕಡಿಮೆ ಮಾಡಿ. ಸಾಲ ತಿರಿಸುವಿಕೆ ಕಾಲ ಮುಂದೂಡಿ. ಅಭಿವೃದ್ಧಿ ಯೋಜನೆಗಳನ್ನ ಕೆಲ ಕಾಲ ಮುಂದೂಡಿ ಎಂದು ಸಲಹೆ ನೀಡಿದ್ದಾರೆ.
ಎಲ್ಲವನ್ನೂ ಕೇಳಿಸಿಕೊಂಡ ಸಿದ್ದರಾಮಯ್ಯ, ಸಂಪನ್ಮೂಲಗಳ ಹೊಂದಾಣಿಕೆ ಬಗ್ಗೆ ಮಾಹಿತಿ ಸಮೇತ ಕ್ಯಾಬಿನೆಟ್‌ಗೆ ಬನ್ನಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.
ಸಭೆಯ ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಗ್ಯಾರಂಟಿಗಳ ಬಗ್ಗೆ ಆಳವಾಗಿ ಚರ್ಚೆ ಆಗಿದೆ. ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಶುಕ್ರವಾರ ಕ್ಯಾಬಿನೆಟ್ ಸಭೆ, ತೀರ್ಮಾನ ಆಗಲಿದೆ. ಮಾನದಂಡ ಇಲ್ಲದೆ ಯಾವ ಯೋಜನೆ ಇದೆ ಹೇಳಿ ನೋಡೋಣ. ಜನರಿಗೆ ನಾವು ಲೆಕ್ಕ ಕೊಡಬೇಕು ಅಲ್ಲವ? ಅಕ್ಕಿ ಓಪನ್ ಮಾರ್ಕೆಟ್‌ನಿಂದ ಆದರೂ ಬರಬಹುದು. ಕೇಂದ್ರ ಸರ್ಕಾರದಿಂದ ಕೊಡಲಿಲ್ಲ ಅಂದರೆ ಓಪನ್ ಮಾರ್ಕೆಟ್ ನಲ್ಲಿ ತರುತ್ತೇವೆ ಎಂದರು.
ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ನಮ್ಮ ಸರ್ಕಾರ ಬಂದು 15 ದಿನ ಆಗಿದೆ. ಸಂಪುಟ ಭರ್ತಿಯಾಗಿದೆ, ಜವಾಬ್ದಾರಿ ಕೊಟ್ಟಿದ್ದಾರೆ.ಬಿಜೆಪಿಯವರಿಗೆ ಒಬ್ಬ ವಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಆಗಿಲ್ಲ.ಅವರಿಂದ ನಾವು ಕಲಿಯಬೇಕಿಲ್ಲ ಎಂದರು.
ಇದನ್ನೂ ಓದಿ: Dolly Dhananjay: ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ ತಪ್ಪಿಲ್ಲ: ಕಾಂಗ್ರೆಸ್ ಗ್ಯಾರಂಟಿ ಬೆಂಬಲಿಸಿದ ಡಾಲಿ ಧನಂಜಯ