Site icon Vistara News

Tax Devolution: ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ. ಹಂಚಿದ ಮೋದಿ ಸರ್ಕಾರ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Tax Devolution

Finance Ministry announces additional Rs. 1.39 lakh crore tax devolution to states for June

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟವು ಬಹುಮತ ಸಾಧಿಸಿದ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ರೈತರಿಗೆ ಕಿಸಾನ್‌ ಸಮ್ಮಾನ್‌ ಯೊಜನೆಯ ನಿಧಿ ಬಿಡುಗಡೆ, 3 ಕೋಟಿ ಮನೆಗಳ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಜತೆಗೆ, ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಜೂನ್‌ ತಿಂಗಳ ತೆರಿಗೆ ಹಂಚಿಕೆ (Tax Devolution) ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯವು 1.39 ಲಕ್ಷ ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಿದೆ.

ರಾಜ್ಯಗಳ ಆರ್ಥಿಕ ಏಳಿಗೆ, ಪ್ರಗತಿಯ ದೃಷ್ಟಿಯಿಂದಾಗಿ ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ಮಾಡಿದೆ. ಹಣಕಾಸು ಸಚಿವಾಲಯದ ಉನ್ನತ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ, ಕರ್ನಾಟಕಕ್ಕೆ 5,096 ಕೋಟಿ ರೂ. ತೆರಿಗೆ ಹಂಚಿಕೆ ಲಭಿಸಿದೆ. ಹಾಗೆಯೇ, ಕೇಂದ್ರ ಸರ್ಕಾರವು ಮಧ್ಯಪ್ರದೇಶಕ್ಕೆ 10,970 ಕೋಟಿ ರೂ., ಬಿಹಾರ 14,056 ಕೋಟಿ ರೂ., ಆಂಧ್ರಪ್ರದೇಶ 5,655 ಕೋಟಿ ರೂ., ಗೋವಾಗೆ 539 ಕೋಟಿ ರೂ., ತೆಲಂಗಾಣ 2,937 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.

ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಫಲಾನುಭವಿಗಳು ಬಯಲು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.20 ಲಕ್ಷ ರೂ. ನೀಡಲಾಗುತ್ತದೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.30 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ.

ಭಾನುವಾರ (ಜೂನ್‌ 9) ಸಂಜೆ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜೂನ್‌ 10) ‘ಪಿಎಂ ಕಿಸಾನ್ ನಿಧಿ’ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದರು. ಇದು ಅವರು ಮೂರನೇ ಅವಧಿಯಲ್ಲಿ ಸಹಿ ಹಾಕಿದ ಮೊದಲ ಫೈಲ್​. ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಕಡತಕ್ಕೆ ಅವರು ಸಹಿ ಹಾಕಿದರು. ಇದು 9.3 ಕೋಟಿ ರೈತರಿಗೆ ಪ್ರಯೋಜನ ನೀಡುವ ಸುಮಾರು 20,000 ಕೋಟಿ ರೂ. ಬಿಡುಗಡೆಯಾಗಲಿದೆ.

ಇದನ್ನೂ ಓದಿ: Modi 3.0 Cabinet: ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ; ಇಲ್ಲಿದೆ 72 ಸಚಿವರು ಹಾಗೂ ಖಾತೆಗಳ ಪಟ್ಟಿ

Exit mobile version