Site icon Vistara News

ಸುಳ್ಳು ಅತ್ಯಾಚಾರ ಕೇಸ್, ಬೆದರಿಕೆ ಆರೋಪ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ FIR

navyasharee

ಬೆಳಗಾವಿ: ಸುಲಿಗೆ, ಜೀವ ಬೆದರಿಕೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್‌.ರಾವ್, ಈಕೆಯ ಸ್ನೇಹಿತ ಡಿ.ಟಿ.ತಿಲಕರಾಜ್ ವಿರುದ್ಧ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ಹಾಗೂ ಈ ಹಿಂದೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿದ್ದ ರಾಜಕುಮಾರ್ ಟಾಕಳೆ ದೂರು ದಾಖಲಿಸಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುವಾಗ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿ ನವ್ಯಶ್ರೀ ನನಗೆ ಪರಿಚಯವಾಗಿದ್ದಳು. ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‌ಜಿಒ ನಡೆಸುತ್ತಿರುವುವುದಾಗಿ ಹೇಳಿದ್ದ ಆಕೆ, ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದಳು.

ಒಂದೂವರೆ ವರ್ಷ ಪರಿಚಯದಲ್ಲಿ ಬೆಳಗಾವಿ ಸೇರಿ ಬೇರೆ ಬೇರೆ ಸ್ಥಳಗಳಲ್ಲಿ ಭೇಟಿಯಾಗಿದ್ದೆವು. 2021ರ ಡಿಸೆಂಬರ್ 24ರಂದು ನವ್ಯಶ್ರೀ ಹಾಗೂ ತಿಲಕರಾಜ್‌ರಿಂದ ನನಗೆ ಕರೆ ಮಾಡಿ ನವ್ಯಶ್ರೀ ಜತೆ ಆತ್ಮೀಯವಾಗಿ ಇರುವ ವಿಡಿಯೋ ಇದೆ. 50 ಲಕ್ಷ ರೂಪಾಯಿ ಹಣ ನೀಡದಿದ್ದರೆ ನನ್ನ ಪತ್ನಿ, ಸಂಬಂಧಿಕರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ರಾಜಕುಮಾರ ಟಾಕಳೆ ದೂರಿನಲ್ಲಿ ತಿಳಿಸಿದ್ದಾರೆ.

ಹಣ ಕೊಡದಿದ್ದರೆ ಮನೆಗೆ ಬರುತ್ತೇವೆ, ವಿಡಿಯೋ ವಿಷಯ ಬಹಿರಂಗಪಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನ ಆಧಾರದ ಮೇಲೆ ನವ್ಯಶ್ರೀ ಹಾಗೂ ಡಿ.ಟಿ.ತಿಲಕರಾಜ್ ವಿರುದ್ಧ ಐಪಿಸಿ 1860(u/s.384, 448, 504, 506, 34) ರಡಿ ಕೇಸ್ ದಾಖಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್ ಜತೆಗೆ ಕಾಣಿಸಿಕೊಂಡಿರುವ ನವ್ಯಶ್ರೀ.

ಕೇಸ್ ದಾಖಲಿಸಿರುವ ರಾಜಕುಮಾರ್‌ ಠಾಕಳೆ ನನ್ನ ಗಂಡ : ನವ್ಯಶ್ರೀ ರಾವ್
ತನ್ನ ವಿರುದ್ಧ ಸುಳ್ಳು ಅತ್ಯಾಚಾರ ಬೆದರಿಕೆ ಆರೋಪದ ಕೇಸ್ ದಾಖಲಿಸಿರುವ ರಾಜಕುಮಾರ್‌ ಠಾಕಳೆ ಬೇರೇ ಯಾರೂ ಅಲ್ಲ, ಆತ ತನ್ನ ಗಂಡ ಎಂದು ನವ್ಯಶ್ರೀ ರಾವ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 15 ದಿನಗಳಿಂದ ವಿದೇಶ ಪ್ರವಾಸದಲ್ಲಿದ್ದೆ. ಮಂಗಳವಾರ ಬೆಳಗ್ಗೆ ಮರಳಿದ್ದೇನೆ. ರಾಜಕುಮಾರ ಟಾಕಳೆ ಜತೆಗಿನ ಅಶ್ಲೀಲ ವಿಡಿಯೋವನ್ನು ನಾನು ವಿದೇಶಿ ಪ್ರವಾಸದಲ್ಲಿದ್ದಾಗ ವೈರಲ್ ಮಾಡಲಾಗಿದೆ.
ರಾಜಕುಮಾರ ಟಾಕಳೆ ನನ್ನ ಗಂಡ, ಇಬ್ಬರೂ ಮದುವೆ ಆಗಿದ್ದೇವೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಬಳಿಕ ರಾಜಕುಮಾರ ಟಾಕಳೆಯಿಂದ ನನಗೆ ಮೋಸ ಆಗಿದೆ ಎಂದ ನವ್ಯಶ್ರೀ, ಈ ಬಗ್ಗೆ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಪ್ರತಿದೂರು ದಾಖಲಿಸುತ್ತೇನೆ ಎಂದು ಅಜ್ಞಾತ ಸ್ಥಳಕ್ಕೆ ತೆರಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆ ನವ್ಯಶ್ರೀ.

ಪ್ರಮುಖ ರಾಜಕೀಯ ನಾಯಕರ ಜತೆ ಒಡನಾಟ

ರಾಮನಗರ: ನವ್ಯಶ್ರೀ ರಾಮಚಂದ್ರರಾವ್ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಳೆದ 7 ವರ್ಷಗಳ ಹಿಂದೆ ನವ್ಯಶ್ರೀ ಫೌಂಡೇಷನ್ ಸ್ಥಾಪಿಸಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದಾಳೆ. ಫೌಂಡೇಷನ್‌ನಲ್ಲಿ ಈಕೆಯೊಬ್ಬಳೇ ಮೆಂಬರ್. 2018ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಿ ಠೇವಣಿ ಕಳೆದುಕೊಂಡಿದ್ದಳು.

ಠೇವಣಿ ಕಳೆದುಕೊಂಡ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ನವ್ಯಶ್ರೀ ಕಳೆದ ಬಾರಿ ಡಿ.ಕೆ.ಶಿವಕುಮಾರ್ ಇ.ಡಿ. ವಶದಲ್ಲಿದ್ದಾಗ ರಾಮನಗರದಲ್ಲಿ ಪ್ರತಿಭಟನೆ ಮುಂದಾಳತ್ವ ವಹಿಸಿದ್ದಳು. ಪ್ರತಿಭಟನೆ ಮುಂದಾಳತ್ವ ವಹಿಸಿಕೊಂಡ ಪೋಟೋವನ್ನು ಮಾಜಿ ಸಂಸದೆ ರಮ್ಯ ಗುಡ್ ಜಾಬ್ ಎಂದು ಟ್ವೀಟ್‌ ಮಾಡಿದ್ದರು. ಬಳಿಕ ಕೋವಿಡ್ ಸಂದರ್ಭದಲ್ಲಿ ಬಿಸ್ಕೇಟ್‌, ಆಹಾರ ಹಂಚಿ ಸಮಾಜ ಸೇವೆ ಮಾಡುವುದಾಗಿ ಹೇಳಿಕೊಂಡಿದ್ದ ನವ್ಯ ಪ್ರಚಾರಕ್ಕೋಸ್ಕರ ಬೇರೆಯವರು ಮಾಡುತ್ತಿದ್ದ ಸಮಾಜ ಸೇವೆಯಲ್ಲಿ ಭಾಗಿಯಾಗುತ್ತಿದ್ದಳು.

ಕಾಂಗ್ರೆಸ್ ಸೇರಿದ ಮೇಲೆ ಕೈ ಪ್ರಮುಖ ಸಭೆಗಳಲ್ಲಿ ನವ್ಯಶ್ರೀ ಭಾಗಿಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್‌ಸಿ ಲಿಂಗಪ್ಪ ಸೇರಿ ಕೈ ಪ್ರಮುಖ ನಾಯಕರ ಜತೆ ಪೋಟೋ ತೆಗೆಸಿಕೊಂಡಿದ್ದಾಳೆ.

ಇದನ್ನೂ ಓದಿ | Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ; ದೇಶದಲ್ಲಿದು 2ನೇ ಕೇಸ್‌

Exit mobile version